ಚಿಕ್ಕಮಗಳೂರು : ನಾಪತ್ತೆಯಾಗಿದ್ದ ವೃದ್ಧ ವೈದ್ಯನನ್ನು ಕಾಡಿನಲ್ಲಿ ಪತ್ತೆ ಹಚ್ಚಿದ ಪೊಲೀಸ್ ಶ್ವಾನ
Update: 2025-11-07 11:51 IST
ಚಿಕ್ಕಮಗಳೂರು : ನಾಪತ್ತೆಯಾಗಿದ್ದ ವೃದ್ಧ ವೈದ್ಯರೊಬ್ಬರು ಸಮೀಪದ ಕಾಡಿನಲ್ಲಿ ಪತ್ತೆಯಾಗಿರುವ ಘಟನೆ ಕೊಪ್ಪ ತಾಲೂಕಿನ ಗುಣವಂತೆ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ನ.2ರಂದು ವಾಕಿಂಗ್‌ಗೆಂದು ಹೊರಟಿದ್ದ ವೈದ್ಯ ವೆಂಕಟೇಗೌಡ (75) ಅವರು ದಾರಿ ತಪ್ಪಿ ಕಾಡು ಸೇರಿದ್ದರು. ಮರೆವಿನ ಖಾಯಿಲೆ ಇದ್ದ ವೈದ್ಯರಿಗೆ ವಾಪಸ್ ಬರಲು ಗೊತ್ತಾಗಲಿಲ್ಲ. ಕಾಡಂಚಿನ ಗುಣವಂತೆ ಗ್ರಾಮದ ಮನೆಯೊಂದರಲ್ಲಿ ನೀರು ಕುಡಿದು ಹೋಗಿದ್ದ ಅವರು, 4 ದಿನ ಕಾಡಲ್ಲೇ ಸುತ್ತಾಡಿ ಅಲ್ಲೇ ಉಳಿದಿದ್ದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ಮನೆಯವರು, ಕಾಡು-ಮೇಡು-ಹಳ್ಳಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದ್ದಾರೆ. ಕೊನೆಗೆ ಎಸ್ಪಿ ವಿಕ್ರಂ ಅವರ ಸೂಚನೆ ಮೇರೆಗೆ ಪೊಲೀಸ್ ಶ್ವಾನವನ್ನು ಪತ್ತೆ ಕಾರ್ಯಾಚರಣೆಗೆ ಬಳಸಲಾಗಿತ್ತು. ಈ ವೇಳೆ ಕಾಡಿನಲ್ಲಿ ಸಿಕ್ಕ ವೆಂಕಟೇಗೌಡರ ಪಂಚೆಯ ಜಾಡು ಹಿಡಿದು ಹೊರಟ ಪೊಲೀಸ್ ಶ್ವಾನ, ಕಾಡಿನೊಳಗೆ 5 ಕಿ.ಮೀ. ದೂರದಲ್ಲಿ ಆಳ ಪ್ರದೇಶದಲ್ಲಿದ್ದ ಅವರನ್ನು ಪತ್ತೆಹಚ್ಚಿದೆ.