ಚಿಕ್ಕಮಗಳೂರು | ಪತಿಯಿಂದ ಪತ್ನಿಯ ಹತ್ಯೆ; ಆರೋಪ
ಚಿಕ್ಕಮಗಳೂರು : ಸಂಸಾರಿಕ ಕಲಹದಿಂದಾಗಿ ಪತಿ, ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಬುಧವಾರ ರಾತ್ರಿ ಜಿಲ್ಲೆಯ ಅಜ್ಜಂಪುರ ತಾಲೂಕಿನ ಚಿಕ್ಕನಾವಂಗಲ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಚಿಕ್ಕನಾವಂಗಲ ಗ್ರಾಮದ ತನು ಹತ್ಯೆಯಾದ ಮಹಿಳೆ, ಆಕೆಯ ಪತಿ ರಮೇಶ್ ಹತ್ಯೆ ಮಾಡಿದ ಆರೋಪಿ ಎನ್ನಲಾಗಿದೆ. ತನು ಹಾಗೂ ರಮೇಶ್‌ಗೆ 7 ವರ್ಷಗಳ ಹಿಂದೆ ವಿವಾಹವಾಗಿತ್ತು. ದಂಪತಿಗೆ 6 ವರ್ಷದ ಮಗನಿದ್ದು, ಕೆಲ ವರ್ಷಗಳ ಕಾಲ ಚೆನ್ನಾಗಿಯೇ ಇದ್ದ ದಂಪತಿ ಮಧ್ಯೆ ಇತ್ತೀಚೆಗೆ ಪದೇ ಪದೇ ಜಗಳ ನಡೆಯುತ್ತಿತ್ತು. ಈ ಸಾಂಸಾರಿಕ ಕಲಹದಿಂದಾಗಿ ಪತ್ನಿ ಕಳೆದ ಎರಡು ವರ್ಷದಿಂದ ಗಂಡನಿಂದ ದೂರವಾಗಿದ್ದಲ್ಲದೇ ಪ್ರತ್ಯೇಕವಾಗಿ ವಾಸವಾಗಿದ್ದಳು ಎಂದು ತಿಳಿದು ಬಂದಿದೆ.
ಬುಧವಾರ ರಾತ್ರಿ ತನು ವಾಸವಿದ್ದ ಮನೆಗೆ ಮದ್ಯಪಾನ ಮಾಡಿ ಬಂದಿದ್ದ ರಮೇಶ್, ಪತ್ನಿಯೊಂದಿಗೆ ಜಗಳವಾಡಿದ್ದಲ್ಲದೇ ಮನೆಯಲ್ಲೇ ಇದ್ದ ಕತ್ತಿಯಿಂದ ಕೊಚ್ಚಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆಂದು ತಿಳಿದು ಬಂದಿದೆ. ಘಟನೆ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆಗೆ ಕಾರಣ ಏನೆಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.