ಕಳಸ | ಸಿಡಿಲು ಬಡಿದು ಅಸ್ಸಾಂ ಮೂಲದ ಕಾರ್ಮಿಕ ಮೃತ್ಯು
ಸಾಂದರ್ಭಿಕ ಚಿತ್ರ (ಕೃಪೆ: Meta AI)
ಚಿಕ್ಕಮಗಳೂರು : ಸಿಡಿಲು ಬಡಿದು ಅಸ್ಸಾಂ ಮೂಲದ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಗುಮ್ಮನಕಾನ್ ಎಸ್ಟೇಟ್‍ನಲ್ಲಿ ಶುಕ್ರವಾರ ಮುಂಜಾನೆ ವರದಿಯಾಗಿದೆ.
ಮೃತ ಕಾರ್ಮಿಕನನ್ನು ಅಸ್ಸಾಂ ಮೂಲದ ಮೌರುದ್ದೀನ್(19) ಎಂದು ಗುರುತಿಸಲಾಗಿದೆ. ಮೌರುದ್ದೀನ್ ತನ್ನ ಕುಟುಂಬ ಸದಸ್ಯರೊಂದಿಗೆ ಗುಮ್ಮನಕಾನ್ ಎಸ್ಟೇಟ್‍ನಲ್ಲಿ ಕೆಲಸ ಮಾಡಿಕೊಂಡಿದ್ದ. ಗುರುವಾರ ರಾತ್ರಿ ಎಸ್ಟೇಟ್‍ನ ಲೈನ್ ಮನೆಯಲ್ಲಿ ತನ್ನ ಸ್ನೇಹಿತನೊಂದಿಗೆ ಮಲಗಿದ್ದ ವೇಳೆ ಮೊಬೈಲನ್ನು ಚಾರ್ಜ್‍ಗೆ ಹಾಕಿ ಪಕ್ಕದಲ್ಲೇ ಇಟ್ಟುಕೊಂಡು ಮಲಗಿದ್ದ ಎನ್ನಲಾಗುತ್ತಿದೆ.
ಶುಕ್ರವಾರ ಮುಂಜಾನೆ ಗುಡುಗು ಸಹಿತ ಆರ್ಭಟಿಸಿದ ಸಿಡಿಲ ಹೊಡೆತಕ್ಕೆ ಮೊಬೈಲ್ ಚೂರಾಗಿದೆ. ಮೊಬೈಲ್ ಪಕ್ಕದಲ್ಲೇ ಮಲಗಿದ್ದ ಮೌರುದ್ದೀನ್‍ಗೂ ಸಿಡಿಲು ಬಡಿದಿದೆ ಎಂದು ತಿಳಿದು ಬಂದಿದ್ದು, ಕೂಡಲೇ ಸ್ಥಳೀಯರು ಮೌರುದ್ದೀನ್‍ನನ್ನು ಕಳಸದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ, ಆದರೆ ಮಾರ್ಗ ಮಧ್ಯೆ ಮೌರುದ್ದೀನ್ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.
ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.