×
Ad

ಲೇಖಕ ರಹಮತ್ ತರೀಕೆರೆಗೆ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ

Update: 2025-10-31 01:15 IST

ಚಿಕ್ಕಮಗಳೂರು : 2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರದಿಂದ ರಹಮತ್ ತರೀಕೆರೆ ಅವರನ್ನು ಆಯ್ಕೆ ಮಾಡಲಾಗಿದೆ.

ರಹಮತ್ ತರೀಕೆರೆ ಅವರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸಮತಳದವರಾಗಿದ್ದು, ದಸ್ತಗಿರಿಸಾಬ್ ಮತ್ತು ಝುಲೇಕ ಬಿ. ದಂಪತಿಗಳ ಪುತ್ರರಾಗಿ ಜನಿಸಿದರು.

ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ಕಾಲೇಜಿನಲ್ಲಿ ಕನ್ನಡ ವಿಷಯವನ್ನು ಆಯ್ಕೆ ಮಾಡಿಕೊಂಡು ಚಿನ್ನದ ಪದಕದೊಂದಿಗೆ ಪದವಿ ಪೂರೈಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ 1983ರಲ್ಲಿ ಏಳು ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿಯನ್ನು ಪೂರೈಸಿದರು. ಪ್ರೊ.ಎಚ್.ಎಂ.ಚನ್ನಯ್ಯ ಅವರ ಮಾರ್ಗದರ್ಶನದಲ್ಲಿ 1988ರಲ್ಲಿ ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ ಪ್ರಬಂಧಕ್ಕೆ ಪಿಎಚ್‍ಡಿ ಪದವಿಯನ್ನು ಪಡೆದುಕೊಂಡರು.

ಸಹ್ಯಾದ್ರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ರಹಮತ್ ತರೀಕೆರೆ ಅವರು, ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾದ್ಯಾಪಕರಾಗಿ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ, ಭಾಷಾಕಾಯದ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ನೆಲೆಸಿದ್ದಾರೆ.

ಇವರ ಸಾಹಿತ್ಯ ಕೃಷಿಗೆ ಅನೇಕ ಪ್ರಶಸ್ತಿಗಳು ಅರಸಿ ಬಂದಿದ್ದು, ಕತ್ತಿಯಂಚಿನ ದಾರಿ ಕೃತಿಗೆ 2010ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಪ್ರತಿ ಸಂಸ್ಕೃತಿಗೆ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(1993), ಕರ್ನಾಟಕ ಸೂಫಿಗಳು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(1998), ಅಂಡಮಾನ್ ಕನಸು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2000), ಸಾಹಿತ್ಯ ವಿಮರ್ಶಾ ಕ್ಷೇತ್ರದ ಒಟ್ಟು ಕೊಡುಗೆಗಾಗಿ 2008ರಲ್ಲಿ ಜಿಎಸ್‍ಎಸ್ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದಿಂದ ಲಂಕೇಶ್ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್‍ನಿಂದ ಹಾ.ಮಾ.ನಾಯಕ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಗೌರವಗಳಿಗೆ ಭಾಜನರಾಗಿದ್ದಾರೆ.

ಪ್ರತಿಸಂಸ್ಕೃತಿ, ಕರ್ನಾಟಕ ಸೂಫಿಗಳು, ಅಂಡಮಾನ್ ಕನಸು, ಕರ್ನಾಟಕ ನಾಥಪಂಥ, ಧರ್ಮಪರೀಕ್ಷೆ ಇವರ ಪ್ರಮುಖ ಕೃತಿಗಳಾಗಿದ್ದು, ಜತೆಗೆ ಮರದೊಳಗಿನ ಕಿಚ್ಚು, ಸಾಂಸ್ಕೃತಿಕ ಅಧ್ಯಯನ, ಲೋಕ ವಿರೋಧಿಗಳ ಜೊತೆಯಲ್ಲಿ, ಕತ್ತಿಯಂಚಿನ ದಾರಿ,ಹೊಸ ತಲೆಮಾರಿನ ತಲ್ಲಣ, ಚಿಂತನೆಯ ಪಾಡು, ನೇತುಬಿದ್ದ ನವಿಲು, ಕರ್ನಾಟಕ ಗುರುಪಂಥ ಸೇರಿದಂತೆ ಜನಪದ, ಸಂಶೋಧನೆ, ವಿಮರ್ಶೆ, ಚಿಂತನೆ, ಸಂಕಲನ, ಪ್ರವಾಸ ಕಥನಗಳು, ಜೀವನ ಚರಿತ್ರೆ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News