ಪ್ರಭಾವಿಗಳನ್ನು ರಕ್ಷಿಸುವ ಕೆಲಸ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ : ನಟ ಚೇತನ್ ಅಹಿಂಸಾ
"ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಬಗ್ಗೆ ಸತ್ಯ ಹೊರಬರಬೇಕು"
ಚಿಕ್ಕಮಗಳೂರು, ಆ.16 : ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಯಾರು ಬೇಕಾದರೂ ಹೋರಾಟ ಮಾಡಬಹುದು. ಹಾಗೆಯೇ ಬಿಜೆಪಿಯವರಿಗೂ ಹೋರಾಟ ಮಾಡುವ ಹಕ್ಕಿದೆ. ಆದರೆ, ಪ್ರಭಾವಿಗಳನ್ನು ರಕ್ಷಣೆ ಮಾಡುವ ಕೆಲಸ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.
ಕಾರ್ಯಕ್ರಮದ ನಿಮಿತ್ತ ಶನಿವಾರ ನಗರಕ್ಕೆ ಆಗಮಿಸಿದ್ದ ವೇಳೆ ಪ್ರವಾಸಿ ಮಂದಿರದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣ ಸಂಬಂಧ ಬಿಜೆಪಿಯವರಿಗೆ ರ್ಯಾಲಿ, ಹೋರಾಟ ನಡೆಸಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿದೆ. ಆದರೆ, ಪ್ರಭಾವಿಗಳನ್ನು ರಕ್ಷಿಸುವ ಕೆಲಸ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದರು.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಬಗ್ಗೆ ಸತ್ಯ ಹೊರಬರಬೇಕು. ಈ ವಿಚಾರದಲ್ಲಿ ಆರೆಸ್ಸೆಸ್ ಸೇರಿದಂತೆ ಎಡಪಂಥ, ಬಲಪಂಥ, ಮಧ್ಯಪಂಥದವರೂ ನಮ್ಮೊಂದಿಗಿದ್ದಾರೆ. ಈ ವಿಚಾರದಲ್ಲಿ ನಾವು ಸಿದ್ಧಾಂತ ಮೀರಿ ನಿಂತಿದ್ದೇವೆ. ಅಲ್ಲಿನ ಅಸಹಜ ಸಾವುಗಳ ಸತ್ಯ ಹೊರಬರಬೇಕು, ನೊಂದ ಕುಟುಂಬಗಳಿಗೆ ನ್ಯಾಯ ಸಿಗಬೇಕೆಂದರು.
ಪ್ರತಿಭಟನೆ ಮಾಡುವವರು ಯಾವ ಮಾದರಿಯಲ್ಲಿ ಹೋರಾಟ ಮಾಡುತ್ತಾರೆ ಎಂಬುದು ಅವರ ಇಷ್ಟ. ಆದರೆ ಹೆದರಿಸಿ, ಬೆದರಿಸಿ, ಧಮ್ಕಿ ಹಾಕಿ ಪ್ರತಿಭಟನೆ ಮಾಡುವುದು ಸಂವಿಧಾನ ವಿರೋಧಿ ಕೃತ್ಯ. ಇಂತಹವರ ವಿರುದ್ಧ ಜನ ಎಚ್ಚರಿಕೆಯಿಂದಿರಬೇಕು. ಇಂತಹ ರಾಜಕಾರಣಿಗಳನ್ನು ಚುನಾವಣೆಗಳಲ್ಲಿ ಸೋಲಿಸಬೇಕೆಂದು ಹೇಳಿದರು.
ಎಸ್‌ಐಟಿ ತನಿಖೆಯನ್ನು ಅರ್ಧಕ್ಕೆ ನಿಲ್ಲಿಸುವ ಕೆಲಸ ಆಗಬಾರದು. ಕಾಂಗ್ರೆಸ್ ಪಕ್ಷದಲ್ಲಿ ಈ ವಿಚಾರದ ಬಗ್ಗೆ ಇಚ್ಛಾಶಕ್ತಿ ಇಲ್ಲದೇ ಇರಬಹುದು. ಆದರೆ, ಎಸ್‌ಐಟಿ ರಚನೆ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ತನಿಖೆ ನಡೆಯಲು ಬಿಡಬೇಕು. ಇದರಿಂದ ಅಲ್ಲಿ ಅನ್ಯಾಯ ಆಗಿದೆಯೇ ಇಲ್ಲವೋ ಎಂಬುದಾದರೂ ತಿಳಿದು ಬರುತ್ತದೆ ಎಂದು ಪ್ರತಿಕ್ರಿಯಿಸಿದರು.
ನಟ ದರ್ಶನ್ ಜಾಮೀನು ರದ್ದತಿ ವಿಚಾರದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚೇತನ್, ಜಾಮೀನು ರದ್ದು ಮಾಡಿರುವ ಸುಪ್ರೀಂ ಕೋಟ್ ತೀರ್ಪಿನಿಂದಾಗಿ ಜನರಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ಇದ್ದ ಗೌರವ ಮತ್ತಷ್ಟು ಹೆಚ್ಚಾಗಿದೆ. ಆರೋಪಿಗಳು ಎಷ್ಟೇ ಪ್ರಭಾವಿಗಳು, ಖ್ಯಾತರಾಗಿದ್ದರೂ ಗಂಭೀರ ಅಪರಾಧ ಪ್ರಕರಣಗಳಲ್ಲಿ ಕಾನೂನಿನ ಕಣ್ಣಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂಬುದು ಈ ತೀರ್ಪಿನಿಂದ ಸಾಬೀತಾಗಿದೆ ಎಂದು ಹೇಳಿದರು.