ಚಿಕ್ಕಮಗಳೂರು : ನಾಳೆ(ಫೆ.28) ವಿಧಾನ ಪರಿಷತ್ ಚುನಾವಣೆಯ ಮರು ಮತ ಎಣಿಕೆ
ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್
ಚಿಕ್ಕಮಗಳೂರು : ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದಂತೆ 2021ರಲ್ಲಿ ನಡೆದಿದ್ದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಮರು ಮತಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಫೆ.28ರಂದು ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ಬೆಳಗ್ಗೆ 8ಕ್ಕೆ ಮರು ಮತ ಎಣಿಕೆ ಕಾರ್ಯ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನ ನಡೆದಿರುವ ಮತಪತ್ರಗಳನ್ನು ಈಗಾಗಲೇ ಟ್ರಂಕ್‌ಗಳಲ್ಲಿ ಜಿಲ್ಲಾ ಖಜಾನೆಯಲ್ಲಿಡಲಾಗಿದೆ. ಬೆಳಗ್ಗೆ 6:30ಕ್ಕೆ ಅಭ್ಯರ್ಥಿಗಳು ಮತ್ತು ಚುನಾವಣಾ ಏಜೆಂಟರ ಸಮ್ಮುಖದಲ್ಲಿ ಮರು ಮತ ಎಣಿಕೆ ಕೇಂದ್ರಕ್ಕೆ ಭದ್ರತೆಯೊಂದಿಗೆ ತರಲಾಗುವುದು. ಮರು ಮತ ಎಣಿಕೆ ಮೂರು ಟೇಬಲ್‌ಗಳನ್ನು ಬಳಸಿಕೊಳ್ಳುತ್ತಿದ್ದು, ಎರಡು ಟೇಬಲ್‌ಗಳಲ್ಲಿ ಮರು ಮತ ಎಣಿಕೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಮರು ಮತ ಎಣಿಕೆ ಪ್ರಕ್ರಿಯೆಯಲ್ಲಿ ಇಬ್ಬರು ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್‌ರನ್ನು ಬಳಸಿಕೊಳ್ಳಲಾಗುತ್ತಿದೆ. ವೀಕ್ಷಕರಿಗೆ ಈಗಾಗಲೇ ತರಬೇತಿಯನ್ನು ನೀಡಲಾಗಿದೆ. ಚುನಾವಣಾ ಆಯೋಗ ಉಜ್ವಲ್ ಕುಮಾರ್ ಘೋಷ್ ಅವರನ್ನು ವೀಕ್ಷಕರಾಗಿ ನೇಮಿಸಿದೆ. ಮರು ಮತ ಎಣಿಕೆ ಮಾಹಿತಿ, ಸಿದ್ಧತೆಗಳನ್ನು ಅವರಿಗೆ ಜಿಲ್ಲಾಡಳಿತ ನೀಡಲಿದೆ ಎಂದರು.
ಮರು ಮತ ಎಣಿಕೆಗೆ ಎರಡು ಕ್ಯಾಮರಾಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆರಂಭದಿಂದ ಕೊನೆಯವರೆಗಿನ ದೃಶ್ಯಗಳನ್ನು ಕವರ್ ಮಾಡಿದ ಪ್ರೊಸೀಡಿಂಗನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ನೀಡಲಾಗುತ್ತದೆ. ಜೊತೆಗೆ ಚುನಾವಣಾ ಆಯೋಗಕ್ಕೂ ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ನಿಷೇಧಾಜ್ಞೆ :
ಮರುಮತ ಎಣಿಕೆ ನಡೆಯುವ ಐಡಿಎಸ್‌ಜಿ ಕಾಲೇಜು ಸುತ್ತಮುತ್ತ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಸಗಿದೆ. ಚುನಾವಣೆಯಲ್ಲಿ ಸ್ಫರ್ಧಿಸಿದ್ದ ಅಭ್ಯರ್ಥಿಗಳು ಮತ್ತು ಚುನಾವಣಾ ಏಜೆಂಟರಿಗೆ ಗುರುತಿನ ಚೀಟಿ ನೀಡಿದ್ದು, ಅವರಿಗೆ ಮಾತ್ರ ಪ್ರವೇಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬಿಗಿ ಬಂದೋಬಸ್ತ್ :
ನ್ಯಾಯಾಲಯಗಳು ಮತ್ತು ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಐಡಿಎಸ್‌ಜಿ ಕಾಲೇಜಿನ ಹೊಸ ಕಟ್ಟಡದಲ್ಲಿ ವಿಧಾನ ಪರಿಷತ್ ಚುನಾವಣೆಯ ಮರು ಮತ ಎಣಿಕೆ ನಡೆಯುತ್ತಿದ್ದು, 4 ಕೆಎಸ್‌ಆರ್‌ಪಿ ತುಕಡಿಗಳು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಮರು ಮತ ಎಣಿಕೆ ಹಿನ್ನಲೆಯಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ ಎಲ್ಲಾ ರೀತಿಯ ಮದ್ಯ ಮಾರಾಟವನ್ನು ಫೆ.28ರಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12ರವರೆಗೆ ನಿಷೇಧಿಸಲಾಗಿದೆ ಎಸ್ಪಿ ಡಾ.ವಿಕ್ರಮ್ ಅಮಟೆ ತಿಳಿಸಿದರು.