×
Ad

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮತ್ತೆ ಮಳೆ ಆರ್ಭಟ; ಧರಾಶಾಹಿಯಾದ ಬೃಹತ್‌ ಮರಗಳು

Update: 2024-07-25 10:31 IST

ಚಿಕ್ಕಮಗಳೂರು: ಮಲೆನಾಡಿನಲ್ಲಿ ಸ್ವಲ್ಪ  ಕಡಿಮೆಯಾಗಿದ್ದ ಮಳೆ ಆರ್ಭಟ ಮತ್ತೆ ಬಿರುಸುಗೊಂಡಿದೆ. ಬುಧವಾರ ರಾತ್ರಿಯಿಂದ ಮಳೆ ಗಾಳಿಯ ತೀವ್ರತೆ ಹೆಚ್ಚಾಗಿದ್ದು, ಭಾರೀ ಗಾಳಿ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಸಾವಿರಾರು ಮರಗಳು ಧರಾಶಾಹಿಯಾಗುತ್ತಿವೆ.

Delete Edit

ಮರಗಳು ರಸ್ತೆ ಬದಿಯ ವಿದ್ಯುತ್ ಕಂಬಗಳ ಮೇಲೆ ಉರುಳಿ ಬಿದ್ದು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಡಿತಗೊಂಡಿದೆ. ಗುರುವಾರ ಮುಂಜಾನೆ ಭಾರೀ ಮಳೆ ಗಾಳಿಗೆ ಮೂಡಿಗೆರೆ- ಚಿಕ್ಕಮಗಳೂರು ಹೆದ್ದಾರಿಯಲ್ಲಿ 4ಭಾರೀ ಗಾತ್ರದ ಮರಗಳು ಉರುಳಿ ಬಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಕೂಡಲೇ ಅರಣ್ಯ ಇಲಾಖೆ, ಸ್ಥಳೀಯರು ಮರ ತೆರವು ಮಾಡಿದ್ದಾರೆ.

ಮಳೆ ಗಾಳಿಗೆ ಬುಧವಾರ ರಾತ್ರಿ ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದಲ್ಲಿ ಕಲ್ಲೇಶ್ ಎಂಬವರ ಮನೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 ಮಲೆನಾಡು ಭಾಗದ ಕಳಸ, ಶೃಂಗೇರಿ, ಕೊಪ್ಪ, ಚಿಕ್ಕಮಗಳೂರು, ಮೂಡಿಗೆರೆ,ಎನ್ ಆರ್ ಪುರ ತಾಲೂಕು ವ್ಯಾಪ್ತಿಯಲ್ಲಿ ಗುರುವಾರ ಮಳೆ ಮತ್ತೆ ಬಿರುಸುಗೊಂಡಿದ್ದು ಮಳೆಯೊಂದಿಗೆ ಗಾಳಿಯ ಆರ್ಭಟ ಹೆಚ್ಚಾಗಿರುವುದು ಜನರ ಅತಂಕಕ್ಕೆ ಕಾರಣವಾಗಿದೆ.

ಮಲೆನಾಡು ಭಾಗದಲ್ಲಿ ಇದುವರೆಗೆ 2000 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕರುಳಿದ್ದು, 200ಕ್ಕೂ ಹೆಚ್ಚು ಮನೆಗಳು ಕುಸಿದಿವೆ, ಸೇತುವೆ , ಕೃಷಿ, ತೋಟಗಾರಿಕೆ ಬೆಳೆ ಸೇರಿದಂತೆ ಅಂದಾಜು 120 ಕೋಟಿ ರೂ.ಗೂ ಹೆಚ್ಚಿನ ಹಾನಿ ಸಂಭವಿಸಿದೆ. ಮಳೆ ಹಾಗೂ ಗಾಳಿ ತೀವ್ರತೆಯ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲೆಯ ಮಲೆನಾಡು ಭಾಗದ 6 ತಾಲೂಕುಗಳ ಶಾಲೆಗಳಿಗೆ ರಜೆ ನೀಡಲಾಗಿದೆ.

ಕಳಸ ತಾಲೂಕಿನಲ್ಲಿ ಭಾರೀ ಮಳೆಗೆ ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕಳಸ ಸಮೀಪದ ಕಾರಗದ್ದೆ ಗ್ರಾಮದಲ್ಲಿ ಕಾರಗದ್ದೆ- ನಡುಗುಡಿಗೆ ಸಂಪರ್ಕದ ಕಿರು ಸೇತುವೆ ಹಳ್ಳದ ನೀರಿನಲ್ಲಿ ಮುಳುಗಡೆಯಾಗಿದೆ. ಭಟ್ರು ಮಕ್ಕಿ ಎಂಬಲ್ಲಿ ಭತ್ತದ ಗದ್ದೆಗಳಿಗೆ ನೀರು ಹರಿದು ಜಲಾವೃತವಾಗಿ ಅಪಾರ ನಷ್ಟ ಸಂಭವಿಸಿದೆ.‌

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News