×
Ad

ಚಿಕ್ಕಮಗಳೂರು: ಕಾಡುಕೋಣ ಬೇಟೆ; ಆರು ಮಂದಿಯ ಬಂಧನ, ನಾಲ್ವರು ಪರಾರಿ

Update: 2025-11-08 14:02 IST

 ಚಿಕ್ಕಮಗಳೂರು: ಕಾಫಿ ಎಸ್ಟೇಟ್ ಒಂದರಲ್ಲಿ ಮಾಂಸಕ್ಕಾಗಿ ಕಾಡುಕೋಣವನ್ನು ಶಿಕಾರಿ ಮಾಡಿದ್ದ ಆರೋಪದ ಮೇಲೆ ಎಸ್ಟೇಟ್ ಮ್ಯಾನೇಜರ್ ಸೇರಿ ಆರು ಮಂದಿಯನ್ನು ಬಂಧಿಸಿದ್ದು, ಎಸ್ಟೇಟ್ ಮಾಲೀಕ ಸೇರಿ ಇನ್ನೂ ನಾಲ್ಕು ಮಂದಿ ಪರಾರಿಯಾಗಿರುವ ಘಟನೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ಶುಕ್ರವಾರ ನಡೆದಿರುವ ಬಗ್ಗೆ ವರದಿಯಾಗಿದೆ.

ಆರೋಪಿಗಳನ್ನು ಕಲ್ಮನೆ ಎಸ್ಟೇಟ್, ತೋಟದ ಫೀಲ್ಡ್ ಆಫೀಸರ್ ರವೀಶ್ ಬಿ.ಎಸ್. (35), ರೈಟರ್ ಪ್ರದೀಪ್ ದೇವಾಡಿಗ (41), ತೋಟದ ಮೇಸ್ತ್ರಿಗಳಾದ ದೇಜಪ್ಪ (46), ಸೀನ (50) ತೋಟದ ವಾಹನ ಚಾಲಕ ಮಂಜಯ್ಯ (48) ಕೂಲಿಕೆಲಸಗಾರ ಸುಂದರ(50), ಸುಂದರೇಶ್ (45), ದಿಲೀಪ್ (45) ಜೀವನ್ (42) ಕಲ್ಮನೆ ಎಸ್ಟೇಟ್ ಮಾಲೀಕ ಮಾಲೀಕ ಧೀರಜ್ (42) ಎಂದು ಗುರುತಿಸಲಾಗಿದೆ.

ಘಟನೆ ವಿವರ

ನ.7 ರಂದು ಬೆಳಿಗ್ಗೆ ಭಾರತೀಬೈಲ್ ಶಾಖೆ ವ್ಯಾಪ್ತಿಯ ಬಾಳೂರು ಗ್ರಾಮದ ಮಂಜಯ್ಯ ಎಂಬವರ ಮನೆಯಲ್ಲಿ ಕಾಡುಪ್ರಾಣಿಯೊಂದನ್ನು ಬೇಟೆಯಾಡಿ ಮಾಂಸವನ್ನು ಶೇಖರಿಸಿರುವುದಾಗಿ ಮಾಹಿತಿ ಲಭ್ಯವಾಗಿತ್ತು. ಖಚಿತ ಮಾಹಿತಿ ಮೇರೆಗೆ ಮಂಜಯ್ಯ ಅವರ ಮನೆಯನ್ನು ತಪಾಸಣೆ ಮಾಡಿದಾಗ ಒಂದು ಪಾತ್ರೆಯಲ್ಲಿ ಅರೆಬೇಯಿಸಿದ ಸುಮಾರು 1 ಕೆ.ಜಿ.ಯಷ್ಟು ಮಾಂಸವಿರುವುದು ಕಂಡುಬಂತು. ಮಾಂಸವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಯಾವುದೋ ಕಾಡುಪ್ರಾಣಿಯ ಮಾಂಸ ಇರಬಹುದೆಂದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಮಂಜಯ್ಯನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಮೂಡಿಗೆರೆ ವಲಯ ಅರಣ್ಯಾಧಿಕಾರಿಗಳ ಕಛೇರಿಯಿಂದ ಮಾಹಿತಿ ಲಭಿಸಿದೆ.

ನಿಡುವಾಳೆ ಗ್ರಾಮದ ಕಲ್ಮನೆ ಎಸ್ಟೇಟ್ ಮಾಲೀಕರ ಡಿ.ಬಿ.ಬಿ.ಎಲ್. ಬಂದೂಕಿನಿಂದ ಜೀವನ್ ಎಂಬವರು ಕಾಡುಕೋಣವನ್ನು ಗುಂಡಿಕ್ಕಿ ಬೇಟೆಯಾಡಿದ್ದು, ಸೇಂಟ್ ಮೇರಿಸ್ ಕಲ್ಮನೆ ಎಸ್ಟೇಟ್ ಮರ್ಕಲ್ ನಲ್ಲಿ ಮಾಂಸ ಮಾಡಿ ಎಲ್ಲರೂ ಹಂಚಿಕೊಂಡಿರುವುದಾಗಿ ಮಂಜಯ್ಯ ತಿಳಿಸಿದ್ದಾನೆ. ನಂತರ ಕಲ್ಮನೆ ಎಸ್ಟೇಟ್ ಗೆ ತೆರಳಿ 6 ಆರೋಪಿಗಳನ್ನು ಇಲಾಖೆಯ ವಶಕ್ಕೆ ಪಡೆದು ವಿಚಾರಿಸಲಾಗಿದ್ದು, ಕಲ್ಮನೆ ಎಸ್ಟೇಟ್ ಮಾಲೀಕ ಧೀರಜ್ ಪ್ರಭು ಅವರ ತೋಟದ ಮಾಲೀಕತ್ವದ ಬಂದೂಕಿನಿಂದ ಬೇಟೆಯಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳು ತೋರಿಸಿದ ಮರ್ಕಲ್ ಕೆರೆಯ ಸುತ್ತ ಪರಿಶೀಲಿಸಿದಾಗ ಕೆರೆಯ ನೀರಿನಲ್ಲಿ ಕಾಡುಕೋಣದ ತಲೆಬುರುಡೆ ತೇಲುತಿರುವುದು ಕಂಡುಬಂದಿದ್ದು,ಇತರ ಅಂಗಾಂಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ತಲೆಬುರುಡೆ, ಮಂಜಯ್ಯನ ಮನೆಯಲ್ಲಿ ದೊರೆತ ಅರೆಬೇಯಿಸಿದ ಸುಮಾರು 1 ಕೆ.ಜಿ. ಕಾಡುಕೋಣದ ಮಾಂಸ ಮತ್ತು ಬೇಟೆಗೆ ಉಪಯೋಗಿಸಿದ ಡಿ.ಬಿ.ಬಿ.ಎಲ್.ಬಂದೂಕನ್ನು ವಶಪಡಿಸಲಾಗಿದೆ.

ಆರೋಪಿಗಳನ್ನು ಬಂಧಿಸಿ ವನ್ಯಪ್ರಾಣಿ ಹತ್ಯೆ ಪ್ರಕರಣ ಸಂಖ್ಯೆ:04/2025-26 ಯಡಿ ಪ್ರಕರಣ ದಾಖಲು ಮಾಡಲಾಗಿದೆ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ತನಿಖೆಯು ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ರ.ಸಂ 1 ರಿಂದ ಕ್ರಸಂ 6 ರವರೆಗಿನ ಆರೋಪಿಗಳನ್ನು ಬಂಧಿಸಲಾಗಿದೆ. ಕ್ರಸಂ 7ರಿಂದ ಕ್ರಸಂ 10 ರವರೆಗಿನ ಆರೋಪಿಗಳು ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಯಶ್‌ಪಾಲ್ ಕ್ಷೀರಸಾಗರ್, ಅರಣ್ಯ ಸಂರಕ್ಷಣಾಧಿಕಾರಿಗಳು, ರಮೇಶ್ ಬಾಬು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಆಕರ್ಷ್ ಟಿ.ಎಮ್. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳವರ ಮಾರ್ಗದರ್ಶನದಲ್ಲಿ, ಕಾರ್ಯಾಚರಣೆಯ ನೇತೃತ್ವವನ್ನು ಮಂಜುನಾಥ ಜಿ. ವಲಯ ಅರಣ್ಯಾಧಿಕಾರಿ, ಸುಹಾಸ್ ಕೆ.ಟಿ. ಉಪ ವಲಯ ಅರಣ್ಯಾಧಿಕಾರಿ, ಗಸ್ತು ಅರಣ್ಯ ಪಾಲಕರಾದ ರಘು, ಎಸ್.ಆರ್, ಉಮೇಶ್ ಎ.ಬಿ. ಲಕ್ಷ್ಮಣ್ ಬಿ.ಎಂ, ಹಾಗೂ ಸಿಬ್ಬಂದಿಗಳಾದ ಸುಮಂತ್, ನವರಾಜ್, ಸುಧೀರ್, ಕೃಷ್ಣಮೂರ್ತಿ, ಗಿರೀಶ್ ಇವರುಗಳು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News