ಯುವಕನೊಂದಿಗೆ ವಿವಾಹಿತ ಮಹಿಳೆ ಪರಾರಿ ಆರೋಪ; ಬಣಕಲ್ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ
ಚಿಕ್ಕಮಗಳೂರು, ಆ.14 : ವಿವಾಹಿತ ಮಹಿಳೆಯೊಬ್ಬಳು ಬೇರೆ ಸಮುದಾಯದ ಯುವಕನೊಂದಿಗೆ ಪರಾರಿಯಾಗಿದ್ದಾಳೆಂಬ ಆರೋಪದ ಹಿನ್ನೆಲೆಯಲ್ಲಿ ಆಕ್ರೋಶಿತ ಗುಂಪೊಂದು ಬಣಕಲ್ ಠಾಣೆ ಎದುರು ಜಮಾಯಿಸಿದ್ದು, ಇದರಿಂದ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾದ ಘಟನೆ ಗುರುವಾರ ವರದಿಯಾಗಿದೆ.
ಪತ್ನಿಯು ಮುಸ್ಲಿಮ್ ಯುವಕನೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ಆರೋಪಿಸಿ ಮಹಿಳೆಯ ಪತಿ ಬಣಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪತ್ತೆ ಕಾರ್ಯಕ್ಕೆ ಮುಂದಾದ ಪೊಲೀಸರು, ನಾಪತ್ತೆಯಾಗಿದ್ದ ಮಹಿಳೆಯನ್ನು ಕೂಡಲೇ ಪತ್ತೆ ಹಚ್ಚಿದ್ದಾರೆನ್ನಲಾಗಿದೆ.
ಈ ವಿಚಾರ ತಿಳಿದು ಉದ್ವಿಗ್ನಗೊಂಡಿದ್ದ ಸಂಘಪರಿವಾರದ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ವಿವಾಹಿತ ಮಹಿಳೆಯೊಂದಿಗೆ ಪರಾರಿಯಾಗಿದ್ದ ಯುವಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಪೊಲೀಸರು ಠಾಣೆಯ ಗೇಟ್ ಮುಚ್ಚಿದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಜನರು ಬಣಕಲ್ ಪಟ್ಟಣದಲ್ಲಿ ಏಕಾಏಕಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು ಎನ್ನಲಾಗಿದೆ.
ಘಟನೆ ಸಂಬಂಧ ವಿವಾಹಿತ ಮಹಿಳೆಯಿಂದ ಪೊಲೀಸರು ಹೇಳಿಕೆ ಪಡೆದಿದ್ದು, ತನ್ನನ್ನು ಯಾರೂ ಬಲವಂತದಿಂದ ಕರೆದೊಯ್ದಿಲ್ಲ. ತಾನೇ ಮನೆಯಿಂದ ಹೋಗಿದ್ದಾಗಿ ಹೇಳಿಕೆ ನೀಡಿದ್ದಾಳೆ ಎಂದು ತಿಳಿದು ಬಂದಿದೆ. ಸದ್ಯ ಮಹಿಳೆಯನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.