ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಅಪ್ಪನಿಗೆ ಚೂರಿ ಇರಿದ ಮಗ; ಮಲಗಿದ್ದಲ್ಲೇ ಪ್ರಾಣ ಬಿಟ್ಟ ತಂದೆ
ತಂದೆಯ ಸಾವಿಗೆ ಅನಾರೋಗ್ಯದ ಕಥೆ ಕಟ್ಟಿದ್ದ ಆರೋಪಿ
ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಯುವಕನೊಬ್ಬ ತನ್ನ ತಂದೆಯನ್ನು ಇರಿದು ಕೊಂದ ಘಟನೆ ಚಿಕ್ಕಮಗಳೂರಿನ ಆಲ್ದೂರು ಸಮೀಪದ ಗುಪ್ತಾ ಶೆಟ್ಟಿಹಳ್ಳಿಯಲ್ಲಿ ನಡೆದಿದೆ.
ರಂಜನ್ (21) ಆರೋಪಿ, ಮಂಜುನಾಥ್ (51) ಮಗನಿಂದ ಹತ್ಯೆಯಾದ ತಂದೆ.
ಘಟನೆ ವಿವಿರ
ಮಗ ಅಂದರೆ ತಂದೆಗೆ ಎಲ್ಲಿಲ್ಲದ ಪ್ರೀತಿ. ಜೊತೆಗೆ ಕೂತು ಕುಡಿಯುವಷ್ಟರ ಮಟ್ಟಿಗೆ ತಂದೆ ಮಗನ ನಡುವೆ ಬಾಂಧವ್ಯ ಇತ್ತು. ಕೂಲಿ ಕೆಲಸ ಮಾಡಿದ್ರೂ ಮಗ ಕೇಳಿದ್ದ ಬೈಕ್ ಕೊಡಿಸಿದ್ದರು. ಕಳೆದ ಶನಿವಾರ ತಂದೆ, ಮಗ ಇಬ್ಬರೂ ಕುಳಿತು ಮದ್ಯಪಾನ ಮಾಡುತ್ತಿರುವ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು, ಈ ವೇಳೆ ಮಗ ರಂಜನ್ ತಂದೆಗೆ ಹರಿತವಾದ ಚಾಕು ಇರಿದ್ದಿದ್ದಾನೆ. ಕೊನೆಗೆ ಜಗಳ ಬಿಡಿಸಿದ್ದ ತಾಯಿ ಚಾಕುವಿನಿಂದ ಆದ ಗಾಯಕ್ಕೆ ಅರಿಶಿನ ಹುಡಿ ಹಾಕಿ ಪ್ರಥಮ ಚಿಕಿತ್ಸೆ ಮಾಡಿ ಸುಮ್ಮನಾಗಿದ್ದರು. ಆದರೆ ಗಾಯ ಆಳವಾಗಿದ್ದರಿಂದ ರಕ್ತಸ್ರಾವದಿಂದ ಮಂಜುನಾಥ್ ಮಲಗಿದ್ದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ತಂದೆಯ ಸಾವಿನ ಬಳಿಕ ಆರೋಪಿ ಮಗ ಒಬ್ಬೊಬ್ಬರ ಬಳಿ ಒಂದೊಂದು ಕಥೆ ಕಟ್ಟಿದ್ದಾನೆ. ತಂದೆ ತಾಯಿಯ ನಡುವಿನ ಜಗಳವನ್ನು ನಾನು ಬಿಡಿಸುವ ವೇಳೆ ತಂದೆಗೆ ಮಚ್ಚು ತಾಗಿದ್ದು, ಗಾಯವಾಗಿ ತೀರಿಕೊಂಡರು ಎಂದು ಕೆಲವರ ಬಳಿ ಹೇಳಿದ್ದರೆ, ಇನ್ನು ಕೆಲವರ ಬಳಿ ತಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದ ಎನ್ನಲಾಗಿದೆ.
ಘಟನೆ ನಿಜವೆಂದು ಭಾವಿಸಿ ಕೆಲವರು ಮಂಜುನಾಥ್ ಅವರ ಶವ ಸಂಸ್ಕಾರಕ್ಕೆ ಸಿದ್ದತೆ ಮಾಡ್ಕೊಂಡಿದ್ದರು. ಈ ಮಧ್ಯೆ ಮಾಹಿತಿ ತಿಳಿದ ಆಲ್ದೂರು ಸರ್ಕಲ್ ಇನ್ಸ್‌ಪೆಕ್ಟರ್ ಸೋಮೆಗೌಡ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಕೊಲೆ ಪ್ರಕರಣವನ್ನು ಬೇಧಿಸಿದ್ದಾರೆ.
ಪೊಲೀಸರ ಕಾರ್ಯಾಚರಣೆ ಬಗ್ಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.