×
Ad

ಸುಪ್ರೀಂ ಕೋರ್ಟ್ ಆದೇಶ | ಬಿಗಿ ಭದ್ರತೆಯಲ್ಲಿ ಮರು ಮತ ಎಣಿಕೆ ಕಾರ್ಯ ಪೂರ್ಣ; ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ

Update: 2025-02-28 17:46 IST

ಚಿಕ್ಕಮಗಳೂರು : ನ್ಯಾಯಾಲಯದ ಆದೇಶದಂತೆ 2021, ಡಿ.10ರಂದು ನಡೆದಿದ್ದ ಸ್ಥಳೀಯ ಸಂಸ್ಥೆ ಪ್ರತಿನಿಧಿಸುವ ವಿಧಾನ ಪರಿಷತ್ ಚುನಾವಣೆ ಮರು ಮತಣಿಕೆ ನಗರದ ಐಡಿಎಸ್‍ಜಿ ಕಾಲೇಜಿನಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ನಡೆಯಿತು.

ಶುಕ್ರವಾರ ಬೆಳಗ್ಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಜಿಲ್ಲಾ ಖಜಾನೆಯಿಂದ ಐಡಿಎಸ್‍ಜಿ ಕಾಲೇಜಿನ ಮತ ಎಣಿಕೆ ಕೇಂದ್ರಕ್ಕೆ ಬ್ಯಾಲೆಟ್ ಪೇಪರ್‌ಗಳಿದ್ದ ಮತ ಪೆಟ್ಟಿಗೆಗಳನ್ನು ತರಲಾಯಿತು. ಮತ ಎಣಿಕೆ ಕೇಂದ್ರದೊಳಗೆ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪರ ತಲಾ ಓರ್ವ ಏಜೆಂಟರ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು.

ಅಭ್ಯರ್ಥಿಗಳು ಹಾಗೂ ಏಜೆಂಟರು ಹಾಗೂ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಮತ ಪೆಟ್ಟಿಗೆಗಳನ್ನು ತೆರೆದು ಬೆಳಗ್ಗೆ 8 ರಿಂದ ಮತ ಎಣಿಕೆ ಕಾರ್ಯ ಆರಂಭಗೊಂಡಿತು. ಮತ ಎಣಿಕೆ ಕಾರ್ಯಕ್ಕೆ ಮೂರು ಟೇಬಲ್‍ಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಎರಡು ಟೇಬಲ್‍ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಿತು.

ಮತ ಎಣಿಕೆ ಕೇಂದ್ರದ ಒಳಗೆ ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಪಾಸ್ ಹೊಂದಿದ್ದ ಸಿಬ್ಬಂದಿ ಮತ್ತು ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು. ಉಳಿದಂತೆ ಸಾರ್ವಜನಿಕರು, ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.

ಮತ ಎಣಿಕೆ ಕಾರ್ಯದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ತರೀಕೆರೆ, ಚಿಕ್ಕಮಗಳೂರು ಕಂದಾಯ ಉಪವಿಭಾಗದ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್ ಹಾಗೂ ಚುನಾವಣೆ ಆಯೋಗದಿಂದ ನೇಮಕಗೊಂಡಿದ್ದ ವೀಕ್ಷಕರ ಸಮ್ಮುಖದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು.

ಸುಪ್ರೀಂಕೋರ್ಟ್ ಆದೇಶದಂತೆ ಮತ ಎಣಿಕೆ ಕಾರ್ಯವನ್ನು ಸಂರ್ಪೂಣವಾಗಿ ವಿಡಿಯೋ ಚಿತ್ರೀಕರಣ ಮಾಡಿದ್ದು, ಮತ ಎಣಿಕೆ ಕಾರ್ಯ ಪೂರ್ಣಗೊಂಡ ಬಳಿಕ ಮುಚ್ಚಿದ ಲಕೋಟೆಯಲ್ಲಿ ಜಿಲ್ಲಾಡಳಿತ ಚುನಾವಣಾ ಆಯೋಗದ ಮೂಲಕ ನ್ಯಾಯಾಲಯಕ್ಕೆ ಮತ ಎಣಿಕೆಯ ವರದಿಯನ್ನು ಸಲ್ಲಿಸಿತು.

ಮತ ಎಣಿಕೆ ಕೇಂದ್ರದ ಸುತ್ತಮುತ್ತಲ 200 ಮೀಟರ್ ಪ್ರದೇಶದಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಮತ ಎಣಿಕೆ ಕೇಂದ್ರದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಕೆಎಸ್‍ಆರ್‌ಪಿ ತುಕಡಿ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಬಂದೋಬಸ್ತ್‌ ಗೆ ನಿಯೋಜಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಖುದ್ದು ಬಂದೋಬಸ್ತ್‌ ನ ಉಸ್ತುವಾರಿ ವಹಿಸಿದ್ದರು.

ಏನಿದು ಪ್ರಕರಣ :

ಕಳೆದ ಮೂರು ವರ್ಷಗಳ ಹಿಂದೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ವಿಧಾನ ಪರಿಷತ್ ಹಾಲಿ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಪ್ರತಿಸ್ಫರ್ಧಿ ಎ.ವಿ.ಗಾಯತ್ರಿ ಶಾಂತೇಗೌಡ ವಿರುದ್ಧ ಕೇವಲ ಆರು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಸ್ಥಳೀಯ ಪಟ್ಟಣ ಪಂಚಾಯತ್‌, ನಗರಸಭೆ, ಪುರಸಭೆಗಳ 12ಜನ ನಾಮನಿರ್ದೇಶಿತ ಸದಸ್ಯರ ತಮ್ಮ ಮತಗಳನ್ನು ಚಲಾಯಿಸಿದ್ದರು. ನಾಮನಿರ್ದೇಶಿತ ಸದಸ್ಯರ ಮತದಾನ ಪ್ರಶ್ನಿಸಿ ಎ.ವಿ.ಗಾಯತ್ರಿ ಶಾಂತೇಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು.

ಹೈಕೋರ್ಟ್ ನಾಮನಿರ್ದೇಶಿತ ಸದಸ್ಯರ ಮತಗಳನ್ನು ಬೇರ್ಪಡಿಸಿ ಮರು ಮತ ಎಣಿಕೆ ಮಾಡುವಂತೆ ನಿರ್ದೇಶನ ನೀಡಿತ್ತು. ಹೈಕೋರ್ಟ್ ಆದೇಶವನ್ನು ಪುರಸ್ಕರಿಸದಂತೆ ಎಂ.ಕೆ.ಪ್ರಾಣೇಶ್ ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಅರ್ಜೀ ವಿಚಾರಣೆ ಕೈಗೆತ್ತಿಕೊಂಡು ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದು ನಾಮನಿರ್ದೇಶಿತ ಸದಸ್ಯರ ಮತಗಳನ್ನು ಬೇರ್ಪಡಿಸಿ ಮರು ಮತಎಣಿಕೆ ಮಾಡುವಂತೆ ಆದೇಶಿಸಿತ್ತು. ನ್ಯಾಯಾಲಯದ ಆದೇಶದಂತೆ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತ ಮರು ಮತ ಎಣಿಕೆ ನಡೆಸಿ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಿದೆ. ಸುಪ್ರೀಂಕೋರ್ಟ್‍ನಲ್ಲಿ ಎಂ.ಕೆ.ಪ್ರಾಣೇಶ್ ಕೂಡ ಪರಿಷತ್ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿದೆಯೇ?, ಇಲ್ಲವೇ ?ಎಂದು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ಬಾಕಿ ಇದೆ. ಸದ್ಯ ನ್ಯಾಯಾಲಯದ ಆದೇಶದ ಮೇಲೆ ಎಲ್ಲರ ಚಿತ್ತನೆಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News