×
Ad

ಕಡೂರು | ಕುಡಿಯುವ ನೀರು ಪೂರೈಕೆಗೆ ನಿರ್ಲಕ್ಷ್ಯ ಆರೋಪ : ಗ್ರಾಪಂ ಕಚೇರಿಗೆ ಬೀಗ ಜಡಿದು ನಾಗರಾಳು ಗ್ರಾಮಸ್ಥರಿಂದ ಧರಣಿ, ಪಿಡಿಒಗೆ ತರಾಟೆ

Update: 2025-02-07 20:22 IST

ಚಿಕ್ಕಮಗಳೂರು : 15 ದಿನ ಕಳೆದರೂ ಕುಡಿಯುವ ಪೂರೈಕೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿ ಗ್ರಾಪಂ ಕಚೇರಿಗೆ ಬೀಗ ಹಾಕಿ ಖಾಲಿ ಕೊಡಗಳನ್ನು ಪ್ರದರ್ಶಿಸಿ ಗ್ರಾಮಸ್ಥರು ಧರಣಿ ನಡೆಸಿದ ಘಟನೆ ಶುಕ್ರವಾರ ಕಡೂರು ತಾಲೂಕಿನ ನಾಗರಹಾಳು ಗ್ರಾಮದಲ್ಲಿ ನಡೆದಿದೆ.

ನಾಗಹಾಳು ಗ್ರಾಮದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳಿದ್ದು, ಈ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದೆ. ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು 15ದಿನ ಕಳೆದರೂ ಕುಂಟು ನೆಪ ಹೇಳುತ್ತಾ ನೀರು ಪೂರೈಕೆ ಮಾಡದೇ ನಿರ್ಲಕ್ಷ್ಯವಹಿಸಿದ್ದಾರೆಂದು ಆರೋಪಿಸಿ ನೂರಾರು ಗ್ರಾಮಸ್ಥರು ಶುಕ್ರವಾರ ಬೆಳಗ್ಗೆ ನಾಗರಾಳು ಗ್ರಾಪಂ ಕಚೇರಿ ಆವರಣದಲ್ಲಿ ಜಮಾಯಿಸಿ ಗ್ರಾಪಂ ಅಧಿಕಾರಿ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಪಂ ಪಿಡಿಒ ಕಚೇರಿಗೆ ಬರುತ್ತಿದ್ದಂತೆ ಅಧಿಕಾರಿಯನ್ನು ತರಾಟೆಗೆ ಪಡೆದ ಗ್ರಾಮಸ್ಥರು ನೀರು ಪೂರೈಕೆಗೆ ಕ್ರಮವಹಿಸದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಪಿಡಿಒ ಮಾತಿನಿಂದ ಮತ್ತಷ್ಟು ಆಕ್ರೋಶಗೊಂಡ ನಿವಾಸಿಗಳು ಗ್ರಾಪಂ ಕಚೇರಿಯ ಬಾಗಿಲು ಹಾಕಿದ್ದಲ್ಲದೇ ಬೀಗವನ್ನೂ ಹಾಕಿ, ಅಧಿಕಾರಿಗಳು ಕಚೇರಿ ಒಳಗೆ ಹೋಗದಂತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಖಾಲಿ ಕೊಡಗಳನ್ನು ಗ್ರಾಪಂ ಕಚೇರಿ ಮುಂದಿಟ್ಟು ಧರಣಿ ನಡೆಸಿ ಧಿಕ್ಕಾರದ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಗ್ರಾಮಸ್ಥರು, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದರೂ ಗ್ರಾಪಂ ಅಧಿಕಾರಿ, ಜನಪ್ರತಿನಿಧಿಗಳು ಗ್ರಾಮಸ್ಥರು ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕಳೆದ 15 ದಿನಗಳಿಂದ ಗ್ರಾಮದಲ್ಲಿ ಯಾವ ಮನೆಗೂ ಹನಿ ನೀರು ಸರಬರಾಜು ಆಗಿಲ್ಲ. ನೀರು ಪೂರೈಕೆ ಮಾಡದ ಅಧಿಕಾರಿಗಳು, ಜನಪ್ರತಿನಿಧಿಗಳು ಜನರ ಕೈಗೆ ಸಿಗದೇ ನಾಪತ್ತೆಯಾಗಿದ್ದಾರೆ. ಗ್ರಾಮದಲ್ಲಿ ಹನಿ ನೀರಿಗೂ ತತ್ವಾರ ಎದ್ದಿದ್ದರೂ ಅಧಿಕಾರಿಗಳು ಇಂದು, ನಾಳೆ ಎನ್ನುತ್ತಾ ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ. ಟ್ಯಾಂಕರ್‌ಗಳ ಮೂಲಕವೂ ನೀರು ಪೂರೈಸುತ್ತಿಲ್ಲ ಎಂದು ದೂರಿದ ನಿವಾಸಿಗಳು, ಕೂಡಲೇ ನೀರು ಪೂರೈಕೆಗೆ ಕ್ರಮವಹಿಸದಿದ್ದಲ್ಲಿ ಗ್ರಾಪಂ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News