×
Ad

ಕೊಪ್ಪ | ಎಲೆಮಡಲು, ಹೇರೂರು ಅಂಚೆ ಕಚೇರಿ ಪಿನ್‍ಕೋಡ್ ರದ್ದು: ಆಧಾರ್‌ ಸೇವೆ ಸೇರಿ ಸರಕಾರಿ ಸೌಲಭ್ಯ ಪಡೆಯಲು ನಾಗರಿಕರ ಪರದಾಟ

Update: 2025-02-25 19:42 IST

ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪ ತಾಲೂಕಿನ ದುರ್ಗದ ಬೆಟ್ಟ(ಎಲೆಮಡಲು) ಉಪ ಅಂಚೆ ಕಚೇರಿಯನ್ನು ಅಂಚೆ ಇಲಾಖೆ ಕೆಲ ವರ್ಷಗಳ ಹಿಂದೆ ರದ್ದುಗೊಳಿಸಿದ್ದು, ಇದರಿಂದಾಗಿ ಹೇರೂರು ಮತ್ತು ಎಲೆಮಡಲು ಗ್ರಾಮಗಳ ನಾಗರಿಕರು ಆಧಾರ್ ಕಾರ್ಡ್ ಸೇರಿದಂತೆ ಅನೇಕ ಸರಕಾರಿ ನಾಗರಿಕರ ಸೌಲಭ್ಯಗಳನ್ನು ಪಡೆಯಲು ಪರದಾಡುವಂತಾಗಿದೆ ಎಂದು ಹಿರಿಯ ಪತ್ರಕರ್ತ ಎಂ.ಯೂಸೂಫ್ ಪಟೇಲ್ ತಿಳಿಸಿದ್ದಾರೆ.

ಮಂಗಳವಾರ ಈ ಸಂಬಂಧ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಕೊಪ್ಪ ತಾಲೂಕಿನ ದುರ್ಗದ ಬೆಟ್ಟ ಉಪ ಅಂಚೆ ಕಚೇರಿಯ ಶಾಖಾ ಅಂಚೆ ಕಚೇರಿಯಾಗಿ ಹೇರೂರು ಅಂಚೆ ಕಚೇರಿ ಸೇವೆ ಸಲ್ಲಿಸುತ್ತಿತ್ತು. ದುರ್ಗದ ಬೆಟ್ಟ ಅಂಚೆ ಕಚೇರಿಯ ಪಿನ್ ಕೋಡ್ 577118 ಆಗಿದ್ದು, ಇದನ್ನು ಕೆಲ ವರ್ಷಗಳ ಹಿಂದೆ ಅಂಚೆ ಇಲಾಖೆ ರದ್ದುಗೊಳಿಸಿದ್ದು, ಈ ಪಿನ್ ಕೋಡ್‍ಅನ್ನು ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ಅಂಚೆ ಕಚೇರಿಗೆ ಬದಲಾಯಿಸಿ ಆದೇಶಿಸಿದೆ. ದುರ್ಗದಬೆಟ್ಟ ಉಪ ಅಂಚೆ ಕಚೇರಿಯನ್ನು ಜಯಪುರ ಅಂಚೆ ಕಚೇರಿಯ ಗ್ರಾಮೀಣ ಅಂಚೆ ಕಚೇರಿಯನ್ನಾಗಿ ಮತ್ತು ಹೇರೂರು ಶಾಖಾ ಅಂಚೆ ಕಚೇರಿಯನ್ನು ಬಾಳೆಹೊನ್ನೂರು ಅಂಚೆ ಕಚೇರಿಯ ಗ್ರಾಮೀಣ ಅಂಚೆ ಕಚೇರಿಯಾಗಿ ಬದಲಾಯಿಸಲಾಗಿದ್ದು, ಈಗ ದುರ್ಗದ ಬೆಟ್ಟದ ಪಿನ್‍ಕೋಡ್ ಜಯಪುರದ ಪಿನ್‍ಕೋಡ್ ಆಗಿ 577123 ಬದಲಾಗಿದ್ದರೇ, ಹೇರೂರಿನ ಪಿನ್‍ಕೋಡ್ ಬಾಳೆಹೊನ್ನೂರು 577112 ಆಗಿ ಬದಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆದರೆ ಆಧಾರ್ ಕಾರ್ಡ್ ಜಾಲತಾಣ(ವೆಬ್‌ಸೈಟ್‌) ದಲ್ಲಿ ದುರ್ಗದ ಬೆಟ್ಟದ 577118 ಪಿನ್ ಕೋಡ್ ವ್ಯಾಪ್ತಿಯ ಗ್ರಾಮಗಳಿಗೆ ಮತ್ತು ಹೇರೂರು ಶಾಖಾ ಕಚೇರಿಗೆ ಸಂಬಂಧಿಸಿದ ಗ್ರಾಮಗಳಿಗೆ ನಿಗದಿ ಪಡಿಸಿರುವ ಪಿನ್ ಕೋಡ್‍ಅನ್ನು ಐದು ವರ್ಷ ಕಳೆದರೂ ಬದಲಾವಣೆ ಮಾಡಿರುವುದಿಲ್ಲ. ಹಿಂದೆ ಬಳಸುತ್ತಿದ್ದ ಪಿನ್ ಕೋಡ್ 577118 ಕೊಪ್ಪಳ ಜಿಲ್ಲೆಗೆ ಬದಲಾಗಿದ್ದರೂ ದುರ್ಗದಬೆಟ್ಟ ಮತ್ತು ಹೇರೂರು ಗ್ರಾಮ ವ್ಯಾಪ್ತಿಗೆ ನೀಡಿರುವ ಜಯಪುರ ಮತ್ತು ಬಾಳೆಹೊನ್ನೂರು ಪಿನ್ ಕೋಡ್ ಲಭ್ಯವಿರುವುದಿಲ್ಲ. ದುರ್ಗದ ಬೆಟ್ಟ (ಎಲೆಮಡಲು)ಮತ್ತು ಹೇರೂರು ಗ್ರಾಮಗಳ ನಾಗರಿಕರು ಆಧಾರ್ ಮಾಡಿಸಿದರೆ ಪಿನ್ ಕೋಡ್ ಆಧಾರದಲ್ಲಿ ಕೊಪ್ಪಳ ಜಿಲ್ಲೆಗೆ ಹೋಗುತ್ತಿದೆ. ಸರಕಾರದ ಎಲ್ಲಾ ಸೇವೆ, ಸೌಲಭ್ಯ ಪಡೆಯಲು ಆಧಾರ್ ನಂಬರ್ ಅನಿವಾರ್ಯ. ಸರಕಾರದ ಸೇವೆ ಮತ್ತು ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವ ಕೇಂದ್ರ ಸರಕಾರ ಈಗ ನಾಗರಿಕರು ಆಧಾರ್ ಕಾರ್ಡ್ ಪಡೆಯಲು ಅಲೆಯುವ ಪರಿಸ್ಥಿತಿಗೆ ನೂಕಿದೆ.

ಎಲೆಮಡಲು ಮತ್ತು ಹೇರೂರು ಅಂಚೆ ಕಚೇರಿ ವ್ಯಾಪ್ತಿಯ ನಾಗರಿಕರು ಕಳೆದ ಐದು ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದರೂ ಸಂಬಂಧಿಸಿದ ಜನಪ್ರತಿನಿಧಿಗಳು, ಸಂಸದರು ಈ ಎರಡು ಗ್ರಾಮಗಳ ಜನರು ಅಂಚೆ ಕಚೇರಿ ಪಿನ್‍ಕೋಡ್ ರದ್ದತಿಯಿಂದ ಅನುಭವಿಸುತ್ತಿರುವ ತೊಂದರೆಗಳ ಪರಿಹಾರಕ್ಕೆ ಮುಂದಾಗದಿರುವುದು ವಿಪರ್ಯಾಸ. ಇನ್ನಾದರೂ ಈ ಗ್ರಾಮಗಳ ಜನರ ಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿಗಳು, ಸಂಸದರು ಹಾಗೂ ಸಂಬಂಧಿಸಿದ ಅಂಚೆ ಇಲಾಖೆ ಅಧಿಕಾರಿಗಳು ಮುಂದಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News