×
Ad

ಕೊಪ್ಪ | ವೃದ್ಧ ದಂಪತಿಯಿಂದ ಜಮೀನು ಖರೀದಿ; ಹಣ ಪಾವತಿಸದೇ ಹಿಂಸೆ ನೀಡುತ್ತಿರುವ ಕಾಂಗ್ರೆಸ್‌ ನಾಯಕ: ಆರೋಪ

Update: 2025-02-06 13:13 IST

ಮನೆಯ ಬಾಗಿಲು, ಗೇಟ್ ಮುರಿದಿರುವುದು | ರಮೇಶ್‌ ಭಟ್

ಚಿಕ್ಕಮಗಳೂರು : ವೃದ್ಧ ದಂಪತಿಯಿಂದ ಜಮೀನು ಖರೀದಿಸಿದ ಕಾಂಗ್ರೆಸ್‌ ನಾಯಕನೋರ್ವ ಹಣವನ್ನೂ ನೀಡದೆ ಸತಾಯಿಸುತ್ತಿರುವುದಲ್ಲದೇ, ಮಾನಸಿಕ ಹಿಂಸೆ ನೀಡುತ್ತಿರುವ ಘಟನೆ ಕೊಪ್ಪ ತಾಲೂಕಿನ ಬೇರುಕೂಡಿಗೆ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಕಾಂಗ್ರೆಸ್ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಎಂಬಾತ ರಮೇಶ್ ಭಟ್ (73) ವಾಣಿ (68) ದಂಪತಿಯಿಂದ 5 ಎಕರೆ 25 ಗುಂಟೆ ಜಮೀನನ್ನ ಖರೀದಿ ಮಾಡಿದ್ದಾನೆ ಎನ್ನಲಾಗಿದ್ದು, ಖರೀದಿಸಿದ ಜಮೀನಿಗೆ ಹಣವನ್ನೂ ನೀಡದೆ ವೃದ್ಧ ದಂಪತಿ ಇರುವ ವಾಸದ ಮನೆಯನ್ನು ಬಿಟ್ಟು ಹೋಗುವಂತೆ ಮಾನಸಿಕ ಹಿಂಸೆ ನೀಡುತ್ತಿದ್ದಾನೆ. ಈತ ಡಿಕೆಶಿ ಅವರ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ ಎಂದು ತಿಳಿದು ಬಂದಿದೆ.

ಮನೆ ಸಹಿತ 5 ಎಕರೆ 25 ಗುಂಟೆ ಜಮೀನನ್ನು ಸಚಿನ್ ಮೀಗಾ ಎಂಬಾತನಿಗೆ ಮಾರಾಟ ಮಾಡುವುದಾಗಿ ತಿಳಿಸಿದ್ದೆ. ಆದರೆ ಕ್ರಯ ಪತ್ರ ತಯಾರಾದಾಗ ಮನೆಯು ರಿಜಿಸ್ಟರ್‌ ಆಗಿರಲಿಲ್ಲ ಎಂದು ರಮೇಶ್ ಭಟ್ ಅವರು ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ ಸಚಿನ್ ಮೀಗಾ ಮನೆಯ ಬಾಗಿಲು, ಗೇಟ್ ಮುರಿದು, ನೀರಿನ ಮೋಟಾರ್, ವಿದ್ಯುತ್ ಮೀಟರ್ ಬೋರ್ಡ್ ಕಿತ್ತುಕೊಂಡು ಹೋಗಿದ್ದಾನೆ ಎಂದು ಆರೋಪಿಸಿದ್ದಾರೆ.

ನಾಲ್ಕೈದು ದಿನಗಳಿಂದ ಕತ್ತಲಲ್ಲಿ ಬದುಕುತ್ತಿರುವ ವೃದ್ಧ ದಂಪತಿ ಮೆಸ್ಕಾಂ ಗೆ ಹೋಗಿ ವಿದ್ಯುತ್ ಸಂಪರ್ಕ ಕೇಳಿದರೂ ಕೊಡಲಿಲ್ಲ ಎನ್ನಲಾಗುತ್ತಿದ್ದು, ನ್ಯಾಯಕ್ಕೆ ನಮಗೆ ಯಾರೂ ಸಪೋರ್ಟ್ ಮಾಡುತ್ತಿಲ್ಲ ಎಂದು ವೃದ್ಧ ದಂಪತಿ ಕಣ್ಣೀರು ಸುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮಾರಾಟ ಮಾಡಿರುವ ಜಮೀನಿನ ಹೊರತಾಗಿ ವೃದ್ಧ ದಂಪತಿಗೆ ಬೇರೆ‌ 24 ಎಕರೆ ಅಡಿಕೆ-ಕಾಫಿ ಬೆಳೆ ಇದೆ. ಆದರೆ ಆ ತೋಟದ ಬೆಳೆಯನ್ನೂ ಕೊಯ್ಯಲು ಬಿಡದ ಸಚಿನ್ ಮೀಗಾ ಕಳೆದ ವರ್ಷ 24 ಎಕರೆ ಬೆಳೆಯನ್ನು ತಾನೇ ಕೊಯ್ದುಕೊಂಡಿದ್ದಾನೆ. ಈ ವರ್ಷವೂ ಅಡಿಕೆಯನ್ನ ಕೊಯ್ಯಲು ಬಿಡದೆ ಮಾನಸಿಕ ಹಿಂಸೆ ನೀಡುತ್ತಿದ್ದಾನೆ. ದೂರು ನೀಡಿದರೆ ಪೊಲೀಸರು ಮನೆ ಖಾಲಿ ಮಾಡಿ ಅಂತಾರೆ ಎಂದು ವೃದ್ಧ ದಂಪತಿ ಗಂಭೀರ ಆರೋಪ ಮಾಡಿದ್ದಾರೆ.

ವೃದ್ಧ ದಂಪತಿಗೆ ಓರ್ವ ಇಂಜಿನಿಯರ್ ಮಗನಿದ್ದು, ಆತ ವಿದೇಶದಲ್ಲಿದ್ದಾನೆ. ಇದೀಗ ಸಚಿನ್ ಮೀಗಾ ದಾಂಧಲೆಯಿಂದ ನೊಂದ ವೃದ್ಧ ದಂಪತಿ ನ್ಯಾಯ ಕೊಡಿಸುವಂತೆ ಅಂಗಲಾಚುತ್ತಿದ್ದು, ಆತ್ಮಹತ್ಯೆಯೊಂದೇ ದಾರಿ ಎಂದು ಕಣ್ಣೀರಿಡುತ್ತಿರುವ ದಂಪತಿಗೆ ಸ್ಥಳೀಯರು ಧೈರ್ಯ ತುಂಬಿದ್ದಾರೆ ಎಂದು ತಿಳಿದು ಬಂದಿದೆ.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News