ಕೊಟ್ಟಿಗೆಹಾರ: ಪ್ರವಾಸಿಗರಿದ್ದ ಬಸ್ ಪಲ್ಟಿ: 5 ಮಂದಿಗೆ ಗಂಭೀರ ಗಾಯ
ಚಿಕ್ಕಮಗಳೂರು: ವೀಕೆಂಡ್ ಪ್ರವಾಸಕ್ಕೆ ತೆರಳುತ್ತಿದ್ದ ಪ್ರವಾಸಿಗರಿದ್ದ ಖಾಸಗಿ ಬಸ್ ಪಲ್ಟಿಯಾದ ಘಟನೆ ಮೂಡಿಗೆರೆ ತಾಲೂಕಿನ ದೇವನಗೂಲ್ ಗ್ರಾಮದ ಬಳಿ ಶನಿವಾರ ನಡೆದಿದೆ. ಬೆಂಗಳೂರು ಮೂಲದ ಖಾಸಗಿ MNC ಕಂಪನಿಯ ಸಿಬ್ಬಂದಿಗಳನ್ನು ಕುದುರೆಮುಖ ಹಾಗೂ ನೇತ್ರಾವತಿ ಪೀಕ್ ಟ್ರಕ್ಕಿಂಗ್‌ಗೆ ಕರೆದೊಯ್ಯುತ್ತಿದ್ದ ಈ ಬಸ್, ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಒಟ್ಟು 40 ಮಂದಿ ಸಿಬ್ಬಂದಿ ಬಸ್‌ನಲ್ಲಿ ಇದ್ದರು. ಬಸ್ ಬೆಂಗಳೂರಿನಿಂದ ಚಿಕ್ಕಮಗಳೂರಿನ ಕುದುರೆಮುಖದತ್ತ ತೆರಳುತ್ತಿತ್ತು. ದಟ್ಟ ಮಂಜಿನಿಂದ ರಸ್ತೆಯು ಸ್ಪಷ್ಟವಾಗಿ ಕಾಣದೇ, ತೀವ್ರ ತಿರುವಿನಲ್ಲಿ ಚಾಲಕನಿಗೆ ನಿಯಂತ್ರಣ ತಪ್ಪಿದ್ದು, ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ 20 ಜನರಿಗೆ ಸಣ್ಣಪುಟ್ಟ ಗಾಯಗಳು, ಹಾಗೂ 5 ಜನರಿಗೆ ಗಂಭೀರ ಗಾಯಗಳಾಗಿವೆ.
ಗಾಯಾಳುಗಳನ್ನು ಚಿಕ್ಕಮಗಳೂರು ಮತ್ತು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಬಗ್ಗೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರಕ್ಕಿಂಗ್ ಕಾರ್ಯಕ್ರಮಕ್ಕಾಗಿ ಹತ್ತು ದಿನಗಳ ಹಿಂದೆಯೇ ಆನ್‌ಲೈನ್ ಮೂಲಕ ಬುಕಿಂಗ್ ಮಾಡಲಾಗಿತ್ತು.