×
Ad

ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರ ಕೊರತೆ; ಆರೋಗ್ಯ ಸೇವೆ ಮರೀಚಿಕೆ

Update: 2025-01-24 00:21 IST

ಚಿಕ್ಕಮಗಳೂರು : ಜಿಲ್ಲೆಯ ಗಡಿ ಭಾಗದಲ್ಲಿರುವ ಕಳಸ ತಾಲೂಕು ಕೇಂದ್ರದ ಸಮುದಾಯದ ಆರೋಗ್ಯ ಕೇಂದ್ರ ನಿರ್ಮಾಣವಾಗಿ ದಶಕ ಕಳೆದಿದ್ದರೂ ಖಾಯಂ ವೈದ್ಯರ ಕೊರತೆಯಿಂದಾಗಿ ಸೊರಗಿ ಹೋಗಿದೆ. ಇದರಿಂದ ತಾಲೂಕಿನಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಪರಿಶಿಷ್ಟರು ಹಾಗೂ ಕಾರ್ಮಿಕರು ನೆರೆಯ ಜಿಲ್ಲೆಗಳ ಆಸ್ಪತ್ರೆಗೆ ಹೋಗುವಂತಾಗಿದೆ.

ಸ್ಥಳೀಯರ ಹೋರಾಟದ ಫಲವಾಗಿ ಇತ್ತೀಚೆಗೆ ಈ ಆಸ್ಪತ್ರೆಗೆ ವೈದ್ಯರೊಬ್ಬರು ನೇಮಕಗೊಂಡಿದ್ದು, ಈ ವೈದ್ಯರ ಕರ್ತವ್ಯಕ್ಕೆ ಕ್ಷುಲ್ಲಕ ಕಾರಣಕ್ಕೆ ಸ್ಥಳೀಯ ರಾಜಕೀಯ ಮುಖಂಡರು ಅಡ್ಡಿಪಡಿಸಿದ್ದರಿಂದ ವೈದ್ಯರು ಕರ್ತವ್ಯಕ್ಕೆ ರಾಜೀನಾಮೆ ನೀಡಿದ್ದಾರೆ. ಪರಿಣಾಮ ಇಲ್ಲಿನ ಬಡ ಜನರಿಗೆ ಆರೋಗ್ಯ ಸೇವೆ ದಕ್ಕದಂತಾಗಿದೆ.

ಕಳಸ ತಾಲೂಕು ಕೇಂದ್ರ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ 100 ಕಿ.ಮೀ. ದೂರದಲ್ಲಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಗಡಿಯಲ್ಲಿರುವ ಹಿಂದುಳಿದ ತಾಲೂಕು ಕೇಂದ್ರವಾಗಿದೆ. ಈ ತಾಲೂಕಿನಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ಬಡಜನತೆ ಹಾಗೂ ಕಾರ್ಮಿಕ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಕಳಸದಲ್ಲಿ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊರತಾಗಿ ಖಾಸಗಿ ಆಸ್ಪತ್ರೆಯೊಂದು ಕಾರ್ಯ ನಿರ್ವಹಿಸುತ್ತಿತ್ತು. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಮೂಲಸೌಕರ್ಯಗಳ ಕೊರತೆಯಿಂದಾಗಿ ಬಡಜನರೂ ಖಾಸಗಿ ಆಸ್ಪತ್ರೆಯಲ್ಲಿ ದುಪ್ಪಟ್ಟು ಹಣ ನೀಡಿ ಚಿಕಿತ್ಸೆ ಪಡೆಯುವಂತಾಗಿತ್ತು.

ಈ ಹಿನ್ನೆಲೆಯಲ್ಲಿ ಸ್ಥಳೀಯ ರಾಜಕೀಯ ಪಕ್ಷಗಳು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರು ಸಮುದಾಯ ಆರೋಗ್ಯ ಕೇಂದ್ರಕ್ಕಾಗಿ ಹೋರಾಟ ನಡೆಸಿದ್ದರು. ಈ ಹೋರಾಟದ ಫಲವಾಗಿ ಕಳಸ ಪಟ್ಟಣಕ್ಕೆ ಸಮುದಾಯದ ಆರೋಗ್ಯ ಮಂಜೂರಾಗಿದ್ದು, ಇದರಿಂದಾಗಿ ಇಲ್ಲಿನ ಬಡಜನರಿಗೆ ಉತ್ತಮ ಆರೋಗ್ಯ ಸಿಗುವ ಭರವಸೆ ಮೂಡಿತ್ತು. ಆದರೆ, ಸಮುದಾಯ ಆರೋಗ್ಯ ಕೇಂದ್ರನಿರ್ಮಾಣವಾದರೂ ಖಾಯಂ ವೈದ್ಯರ ಕೊರತೆಯಿಂದಾಗಿ ಬಡಜನರು ಆರೋಗ್ಯ ಸೇವೆಗಾಗಿ ಮಂಗಳೂರು, ಮೂಡಿಗೆರೆ, ಚಿಕ್ಕಮಗಳೂರು, ಉಡುಪಿಗೆ ಹೋಗುವಂತಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.

ಕರ್ತವ್ಯಕ್ಕೆ ಪ್ರಭಾವಿಯಿಂದ ಅಡ್ಡಿ: ವೈದ್ಯ ರಾಜೀನಾಮೆ

ವೈದ್ಯರ ಕೊರತೆಯಿಂದಾಗಿ ಇಲ್ಲಿನ ಜನರಿಗೆ ಆರೋಗ್ಯ ಸೇವೆ ಸರಿಯಾಗಿ ಸಿಗುತ್ತಿರಲಿಲ್ಲ. ಬರುವ ವೈದ್ಯರು ಒಂದೆರೆಡು ತಿಂಗಳಲ್ಲೇ ಬೇರೆಡೆಗೆ ವರ್ಗಾವಣೆಯಾಗಿ ಹೋಗುತ್ತಿದ್ದರು. ಈ ಅವ್ಯವಸ್ಥೆ ವಿರುದ್ಧ ಅನೇಕ ಬಾರಿ ಹೋರಾಟ ನಡೆಸಿದ್ದೇವೆ. ಪರಿಣಾಮ ಇತ್ತೀಚೆಗೆ ಆಸ್ಪತ್ರೆಗೆ ಇಬ್ಬರು ವೈದ್ಯರು ಬಂದಿದ್ದರು. ಓರ್ವ ವೈದ್ಯರು ವ್ಯಾಸಂಗಕ್ಕೆಂದು ತೆರಳಿದ್ದರು. ಇದ್ದ ಮತ್ತೋರ್ವ ವೈದ್ಯರ ಮೇಲೆ ಸ್ಥಳೀಯ ಪ್ರಭಾವಿ ವ್ಯಕ್ತಿಯೊಬ್ಬರು ಹಲ್ಲೆ, ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ದೂರು ದಾಖಲಾಗಿದ್ದರೂ ಕಾನೂನು ಕ್ರಮ ಆಗಿಲ್ಲ. ಇದರಿಂದ ನೊಂದ ವೈದ್ಯರು ರಕ್ಷಣೆ ಸಿಗುವುದಿಲ್ಲ ಎಂದು ಬೇಸತ್ತು ರಾಜೀನಾಮೆ ನೀಡಿದ್ದರಿಂದ ಆಸ್ಪತ್ರೆಯಲ್ಲಿ ಮತ್ತೆ ವೈದ್ಯರ ಕೊರತೆ ಉಂಟಾಗಿದೆ. ಕೂಡಲೇ ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೇಮಿಸಬೇಕು. ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ ಕಳಸ ತಾಲೂಕು ಮುಖಂಡ ಲಕ್ಷ್ಮಣ್ ಆಚಾರ್ ಒತ್ತಾಯಿಸಿದ್ದಾರೆ.

ಕಳಸ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಡಾ.ಮುರುಳಿ ಎಂಬವರು ಕಳೆದ ಒಂದೂವರೆ ವರ್ಷದಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಯಾವುದೇ ದೂರುಗಳು ಇದುವರೆಗೂ ಕೇಳಿ ಬಂದಿಲ್ಲ. ಇತ್ತೀಚೆಗೆ ಕೆಲ ವ್ಯಕ್ತಿಗಳು ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಅವರು ಕಳಸ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳೀಯ ಪ್ರಭಾವಿಗಳ ವರ್ತನೆಯಿಂದ ನೊಂದು ಡಾ.ಮುರುಳಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಸ್ವೀಕೃತವಾಗಿಲ್ಲ. ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಸುತ್ತಿದ್ದೇನೆ. ಮುಂದಿನ ಎರಡು ಮೂರು ದಿನಗಳಲ್ಲಿ ಸಮಸ್ಯೆ ಪರಿಹರಿಸಲಾಗುವುದು.

ಡಾ.ಅಶ್ವಥ್ ಬಾಬು, ಡಿಎಚ್‌ಒ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News