ಖಾಸಗಿ ಹಣಕಾಸು ಸಂಸ್ಥೆಗಳ ಬಡ್ಡಿ ದಂಧೆಗೆ ಕಡಿವಾಣ ಹಾಕದಿದ್ದರೆ ಹೋರಾಟ : ರೈತ ಸಂಘದ ಎಚ್ಚರಿಕೆ
ಚಿಕ್ಕಮಗಳೂರು: ಆರ್‌ಬಿಐ ನಿಯಮಾವಳಿಗಳನ್ನು ಗಾಳಿಗೆ ತೂರಿ ಬಡವರ್ಗದ ಜನತೆ ಹಾಗೂ ರೈತರಿಗೆ ಕಿರುಸಾಲ ಯೋಜನೆ ಹೆಸರಿನಲ್ಲಿ ಹೆಚ್ಚು ಬಡ್ಡಿಗೆ ಸಾಲ ನೀಡುವುದಲ್ಲದೇ ಸಾಲ ವಸೂಲಿಗೆ ಕಿರುಕುಳ ನೀಡುತ್ತಿರುವ ಮೈಕ್ರೋಫೈನಾನ್ಸ್ ಸಂಸ್ಥೆಗಳು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ತಪ್ಪಿದಲ್ಲಿ ರೈತಸಂಘದಿಂದ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ನೂತನ ಜಿಲ್ಲಾಧ್ಯಕ್ಷ ಡಿ.ಮಹೇಶ್ ಎಚ್ಚರಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕಿರುಸಾಲ ನೀಡುವ ನೆಪದಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳು ರಾಜ್ಯಾದ್ಯಂತ ನಾಯಿಕೊಡೆಗಳಂತೆ ತಲೆ ಎತ್ತಿದ್ದು, ಈ ಸಂಸ್ಥೆಗಳು ಬಡಜನರು, ರೈತರ ಸಾಲ ನೀಡುವ ರೂಪದಲ್ಲಿ ಬಡ್ಡಿ ದಂಧೆ ನಡೆಸುತ್ತಿವೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯಮಾವಳಿಗಳನ್ನು ಮೀರಿ ಸಾಲದ ಮೇಲೆ ಹೆಚ್ಚು ಬಡ್ಡಿ ವಿಧಿಸುತ್ತಿವೆ. ಸಾಲ ವಸೂಲಾತಿ ಸಂದರ್ಭ ಸರಕಾರ ಹಾಗೂ ಆರ್‌ಬಿಐ ನಿಯಮಾವಳಿಗಳನ್ನು ಗಾಳಿಗೆ ತೂರಿ ಗೂಂಡಾಗಳ ಮೂಲಕ ಸಾಲ ವಸೂಲಿ ಮಾಡುತ್ತಿವೆ. ಈ ವೇಳೆ ರೈತರು, ಮಹಿಳೆಯರ ಮನೆಗಳಿಗೆ ನುಗ್ಗಿ, ಬೆದರಿಕೆ, ಮನೆ ಹರಾಜು ಹಾಕುವುದು, ಬೀಗ ಹಾಕುವುದು, ಹಲ್ಲೆ ಮಾಡುವಂತಹ ಕಾನೂನು ವಿರೋಧಿ ಕೃತ್ಯ ಎಸಗುತ್ತಿದ್ದಾರೆ. ಇದರಿಂದ ಬೇಸತ್ತ ಸಾಲ ಪಡೆದ ಜನತೆ ಮನೆ ಊರು ತೊರೆದು ತಲೆ ಮರೆಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಮೈಕ್ರೋಫೈನಾನ್ಸ್ ಹಾವಳಿಯಿಂದಾಗಿ ಬಡ ವರ್ಗದ ಜನತೆ ಮತ್ತು ಸಣ್ಣ, ಅತೀ ಸಣ್ಣ ರೈತರು ಸಾಲಕೂಪಕ್ಕೆ ಬೀಳುತ್ತಿದ್ದು, ಮೈಕ್ರೋಫೈನಾನ್ಸ್‌ನವರ ಕಿರುಕುಳಕ್ಕೆ ಬೇಸತ್ತವರು ಮನೆ ತೊರೆಯುವಂತಾಗಿದೆ. ಈ ಖಾಸಗಿ ಹಣಕಾಸು ಸಂಸ್ಥೆಗಳ ಹಾವಳಿ, ದೌರ್ಜನ್ಯದಿಂದ ಅವಮಾನಿತರಾದ ಹಲವಾರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಸರಕಾರಗಳ ನಿರ್ಲಕ್ಷ್ಯವೇ ಕಾರಣ ಎಂದು ದೂಷಿಸಿದರು.
ರಾಜ್ಯ ಸರಕಾರ ಮೈಕ್ರೋಫೈನಾನ್ಸ್ ಹಾಗೂ ಧರ್ಮಸ್ಥಳ ಹಣಕಾಸು ಸಂಸ್ಥೆಯನ್ನು ರದ್ದು ಮಾಡಿ ಸಹಕಾರಿ ಸಂಘಗಳು ಅಥವಾ ಬ್ಯಾಂಕ್‌ಗಳ ಮೂಲಕ ಬಡವರ್ಗದ ಜನತೆ, ರೈತರಿಗೆ ಬಡ್ಡಿರಹಿತವಾಗಿ 20ಲಕ್ಷ ರೂ. ವರೆಗೆ ಸಾಲ ಸೌಲಭ್ಯ ನೀಡಲು ಯೋಜನೆ ರೂಪಿಸಬೇಕು. ತಪ್ಪಿದಲ್ಲಿ ರಾಜ್ಯಾದ್ಯಂತ ಉಗ್ರಹೋರಾಟ ರೂಪಿಸಲಾಗುವುದು ಎಂದ ಅವರು, ಮೈಕ್ರೋಫೈನಾನ್ಸ್ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಫೆ.10ರಂದು ನಗರದಲ್ಲಿ ಧರಣಿ ನಡೆಸಲಾಗುವುದು ಎಂದರು.
ರೈತ ಸಂಘದ ಮಾಜಿ ರಾಜ್ಯ ಮುಖಂಡ ಕೆ.ಗುರುಶಾಂತಪ್ಪ ಮಾತನಾಡಿ, ಮಲೆನಾಡು ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಧರ್ಮಸ್ಥಳ ಸಂಘ ಬಡ್ಡಿ ದಂಧೆ ನಡೆಸುತ್ತಿದ್ದು, ಇವರ ಬಡ್ಡಿ ದಂಧೆಯಿಂದಾಗಿ ಬಡಜನರ ನೆಮ್ಮದಿ ಹಾಳಾಗುತ್ತಿದೆ. ಬಡಜನತೆ ವರ್ಷವಿಡೀ ದುಡಿದರೂ ಸಾಲ ತೀರದಂತಾಗಿದೆ. ಧರ್ಮಸ್ಥಳ ಸಂಘದ ಬಡ್ಡಿ ದಂಧೆ ವಿರುದ್ಧ ಸಾಲ ಪಡೆದವರು ದೇವರ ಭೀತಿಯಿಂದ ದೌರ್ಜನ್ಯವನ್ನು ಹೇಳಿಕೊಳ್ಳುತ್ತಿಲ್ಲ. ಆದ್ದರಿಂದ ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿರುವ ಧರ್ಮಸ್ಥಳ ಸಂಘದ ಬಡ್ಡಿದಂಧೆಗೂ ಕಡಿವಾಣ ಹಾಕಬೇಕು ಎಂದು ಹೇಳಿದರು.