ಚಿಕ್ಕಮಗಳೂರು | ಕಿಡಿಗೇಡಿಗಳಿಂದ ಮನೆ ಮೇಲೆ ಕಲ್ಲು ತೂರಾಟ: ಪ್ರಕರಣ ದಾಖಲು
ಚಿಕ್ಕಮಗಳೂರು : ಕಿಡಿಗೇಡಿಗಳ ಗುಂಪೊಂದು ಮನೆಯ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ನಗರದ ವಿಜಯಪುರ ಬಡಾವಣೆಯಲ್ಲಿ ಶುಕ್ರವಾರ ತಡರಾತ್ರಿ ವರದಿಯಾಗಿದೆ.
ಕಿಡಿಗೇಡಿಗಳು ಮಹೇಶ್ ಎಂಬವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇದರಿಂದ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮನೆಯ ಮಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಸವನಹಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿಡಿಗೇಡಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ, ತಡರಾತ್ರಿ ಮನೆಯೊಂದರ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಆರು ಜನರು ವಶಕ್ಕೆ: ಎಸ್ಪಿ ಡಾ.ವಿಕ್ರಮ್ ಅಮಟೆ
ಮನೆ ಮೇಲೆ ಕಲ್ಲು ತೂರಾಟ ಮಾಡಿದ ಘಟನೆ ಸಂಬಂಧ ಆರು ಜನರನ್ನು ವಶಕ್ಕೆ ಪಡೆದು ಪ್ರಾಥಮಿಕ ತನಿಖೆ ನಡೆಸಲಾಗಿದೆ. ಆರು ಜನರು ಅಪ್ರಾಪ್ತ ವಯಸ್ಸಿನವರಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಇದು ಕೋಮು ಸಂಬಂಧಿತ ಘಟನೆಯಲ್ಲ. ವೈಯಕ್ತಿಕ ಕಾರಣದಿಂದ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ಸ್ಪಷ್ಟಪಡಿಸಿದ್ದಾರೆ.