×
Ad

ಡಾ.ಅಂಬೇಡ್ಕರ್ ಕೊಟ್ಟ ಸಂವಿಧಾನ ಉಳಿಸಿಕೊಳ್ಳಬೇಕಾದದ್ದು ಇಂದಿನ ಅಗತ್ಯ : ಸುಧೀರ್ ಕುಮಾರ್ ಮುರೊಳ್ಳಿ

Update: 2025-06-12 17:56 IST

ಕೊಪ್ಪ: ʼವೈವಿದ್ಯತೆಯಲ್ಲಿ ಏಕತೆ ಹೊಂದಿರುವ ಭಾರತದಲ್ಲಿ ಬಹುತ್ವ ಉಳಿಸಿಕೊಳ್ಳಬೇಕಾದದ್ದು, ಅಂಬೇಡ್ಕರ್ ಕೊಟ್ಟ ಸಂವಿಧಾನ ಉಳಿಸಿಕೊಳ್ಳಬೇಕಾದದ್ದು ಇಂದಿನ ಅಗತ್ಯʼ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ(ಎಪಿಸಿಆರ್‌) ರಾಜ್ಯ ಘಟಕದ ಅಧ್ಯಕ್ಷ, ವಕೀಲ ಎಂ.ಎಚ್.ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.

ಪಟ್ಟಣದ ಪುರಭವನದಲ್ಲಿ ಬುಧವಾರ ತಾಲ್ಲೂಕು ಮುಸ್ಲಿಂ ಸಂಯುಕ್ತ ಜಮಾತ್ ಒಕ್ಕೂಟ ಆಯೋಜಿಸಿದ್ದ ಕೇಂದ್ರ ಸರಕಾರ ಜಾರಿಗೊಳಿಸಿದ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, 'ಪ್ರಸ್ತುತ ದೇಶ ಕಟ್ಟುವವರು ಮತ್ತು ಆಳುವವರ ನಡುವೆ ಹೋರಾಟ ನಡೆಯುತ್ತಿದೆ. ಈ ಹಿಂದೆಯೂ ಸಿಎಎ, ಎನ್.ಆರ್.ಸಿ ಹೆಸರಲ್ಲಿ ಬಹುತ್ವ ಒಡೆಯಲು ಪ್ರಯತ್ನಿಸಿದ್ದರು' ಎಂದರು.

'ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ವಕ್ಫ್ ಹೆಸರಿನಲ್ಲಿ ಹಿಂದೂ, ಮುಸ್ಲಿಮರ ಭೂಮಿ ಎಂದು ಎಲ್ಲಿಯೂ ಗೊಂದಲಗಳಿಲ್ಲ. ತಿದ್ದುಪಡಿ ಕಾಯ್ದೆಯಲ್ಲಿನ ಕೆಲವು ಅಂಶಗಳಿಂದ ಗೊಂದಲ ಹುಟ್ಟು ಹಾಕಲಾಗುತ್ತಿದೆ. ಸ್ವಾತಂತ್ರ್ಯ ಬಂದ ನಂತರ ಕಂದಾಯ, ಅರಣ್ಯ ಜಾಗ ಎಂದು ಸರಿಯಾಗಿ ಗುರುತಿಸಲು ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ವಕ್ಫ್ ಹೆಸರಿನಲ್ಲಿ ಭೂ ವಿವಾದ ಹುಟ್ಟು ಹಾಕಲಾಗುತ್ತಿದೆ' ಎಂದು ತಿಳಿಸಿದರು.

'ವಕ್ಫ್ ಆಸ್ತಿ ಎಂದರೆ ಅದು ಭಗವಂತನ ಹೆಸರಿನಲ್ಲಿ ದಾನಕೊಟ್ಟ ಜಾಗ, ಅದು ದೇಶಕ್ಕೆ ಮೀಸಲು, ಅದು ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ್ದು ಅಲ್ಲ. ಇಂತಹ ಸಂಗತಿ ಅರ್ಥ ಮಾಡಿಕೊಳ್ಳಬೇಕು. ಉರಿಗೌಡ, ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳ ಮೂಲಕ ಒಡೆದು ಆಳುವ ಮನಸ್ಥಿತಿ ಹೊಂದಿದವರಿಗೆ ಜಾತ್ಯಾತೀತತೆ ಎಂದರೆ ಗೊತ್ತಿಲ್ಲ. ಎಪಿಸಿಆರ್ ನಿಂದಲೂ ವಕ್ಫ್ ತಿದ್ದುಪಡಿ ಬಗ್ಗೆ ರಿಟ್ ಅರ್ಜಿ ಸಲ್ಲಿಸಲಾಗಿದೆ' ಎಂದರು.

ಕರ್ನಾಟಕ ಉಲೇಮಾ ಒಕ್ಕೂಟ ಕಾರ್ಯದರ್ಶಿ ಅಬ್ದುಲ್ ಅಝೀಝ್‌ ದಾರಿಮಿ ಮಾತನಾಡಿ, 'ನಾವು ಪರಕೀಯರಲ್ಲ, ಇದೇ ಮಣ್ಣಿನಲ್ಲಿ ಹುಟ್ಟಿದವರು. ಗತ ಕಾಲದಲ್ಲೂ ಶೋಷಣೆ, ದಬ್ಬಾಳಿಕೆ ಅನುಭವಿಸಿದೆವು. ಎನ್.ಆರ್.ಸಿ, ತ್ರಿವಳಿ ತಲಾಕ್ ಬಳಿಕ ವಕ್ಫ್ ತಿದ್ದುಪಡಿ ಕಾಯ್ದೆ ಸಮಸ್ಯೆ ಎದುರಿಸುತ್ತಿದ್ದೇವೆ. ಈ ಹೋರಾಟ ಸರಕಾರದ ವಿರುದ್ಧವಲ್ಲ. ಸಂವಿಧಾನಾತ್ಮಕ ಹಕ್ಕಿಗಾಗಿ. ವಕ್ಫ್ ಎಂದರೇನು ಎಂದು ಗೊತ್ತಿಲ್ಲದವರು ವಿರೋಧಿಸುತ್ತಿದ್ದಾರೆ' ಎಂದರು.

'ಛತ್ರಪತಿ ಶಿವಾಜಿ ಸೇನೆಯಲ್ಲಿ ಬಹುವಾಗಿ ಮುಸಲ್ಮಾನರು ಇದ್ದರು. ಶಿವಾಜಿ, ಟಿಪ್ಪು ಸುಲ್ತಾನ್ ಮತೀಯವಾದಿಯಾಗಿರಲಿಲ್ಲ. ಬಿಕ್ಕಟ್ಟು ಎಂಬುದು ಆಡಳಿತಾತ್ಮಕ ಕೇಂದ್ರದಿಂದಲೇ ಆರಂಭಗೊಂಡಿದೆ. ವಂಚನೆ, ದೌರ್ಜನ್ಯ, ಅನ್ಯಾಯದಿಂದ ಏನೂ ಸಾಧಿಸಲಾಗದು' ಎಂದು ಹೇಳಿದರು.

'ತ್ರಿವರ್ಣ ಧ್ವಜವನ್ನು ನಮ್ಮ ಎದೆಯಲ್ಲಿ ಹಾರಡಿಸುತ್ತೇವೆ. ನಮ್ಮ ಪೂರ್ವಿಕರು ದೇಶಕ್ಕಾಗಿ ಪ್ರಾಣ ಕೊಟ್ಟವರು. ಅಲ್ಪ ಸಂಖ್ಯಾತರ ಹಕ್ಕು ಕಾಪಾಡಿದರೆ ಮಾತ್ರ ದೇಶ ಉಜ್ವಲವಾಗಿ ಬೆಳೆಯುತ್ತದೆ. ಜಾತ್ಯಾತೀತ ಕಲ್ಪನೆ ವಿರೋಧಿಸುವವರು ಸಂವಿಧಾನ ವಿರೋಧಿಯಾಗಿದ್ದಾರೆ ಎಂದು ಹೇಳಿದರು.

'ಮುಸಲ್ಮಾರು, ಹಿಂದೂಗಳಿಗೆ ತೊಂದರೆಯಾದಾಗ ಪರಸ್ಪರ ಜತೆಯಾಗಿ ನಿಲ್ಲಬೇಕು. ಹಕ್ಕುಗಳ ದಮನ ಮಾಡಬಾರದು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1922 ರಲ್ಲಿ ಮಸೀದಿ ನಿರ್ಮಿಸಿಕೊಟ್ಟ ಉದಾಹರಣೆ ಇದೆ. ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬದುಕುವಂತಾಗಬೇಕು. ವಕ್ಫ್ ಮಂಡಳಿಯಲ್ಲಿ ಇತರರನ್ನು ಸೇರಿಸಿ ಪ್ರಾತಿನಿಧ್ಯ ದುರ್ಬಲ ಮಾಡುವ ಹುನ್ನಾರ ಇದೆ' ಎಂದು ದೂರಿದರು.

ತಾಲ್ಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಒಕ್ಕೂಟ ಅಧ್ಯಕ್ಷ ಸೈಯದ್ ಎಜಾಝ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಮೊಹಮ್ಮದ್ ಶಾಹಿದ್ ರಿಝ್ವಿ, ಜಾಮಿಯ ಮಸೀದಿ ಅಧ್ಯಕ್ಷ ಜಾಹೂರ್ ಹುಸೇನ್, ಮೋಹಿದ್ದಿನ್ ಶಾಫಿ ಜುಮಾ ಮಸೀದಿ ಖತೀಬ್‌ ಹನೀಫ್ ಖಾಸಿಮಿ, ಜಾಮಿಯಾ ಮಸೀದಿ ಖತೀಬ್ ಅಬ್ದುಲ್ ಖಲೀಲ್ ಸಾಹೇಬ್, ನೂರುಲ್ ಆಲಂ ಜುಮ್ಮಾ ಮಸೀದಿ ಖತೀಬ್‌ ಸದ್ದಾಂ ಹುಸೇನ್ ಫೈಝಿ ಅಲ್ ಬುರ್ಹಾನಿ, ಕೆಡಿಪಿ ಸದಸ್ಯ ನಾರ್ವೆ ಸಾದಿಕ್, ತಾಲ್ಲೂಕಿನ ಮದರಸ, ಮಸೀದಿಗಳ ಪದಾಧಿಕಾರಿಗಳು ಇದ್ದರು.

ವಕ್ಫ್ ತಿದ್ದುಪಡಿ ಕಾಯ್ದೆ ಒಪ್ಪಿಕೊಳ್ಳುವ ಪ್ರಮೇಯವೇ ಇಲ್ಲ 

ವಕ್ಫ್ ತಿದ್ದುಪಡಿ ಕಾಯ್ದೆಗೆ ತಂದ 45 ತಿದ್ದುಪಡಿಗಳಲ್ಲಿ 15 ತಿದ್ದುಪಡಿಗೆ ವಿರೋಧ ಎಂದು ಒಕ್ಕೂಟ ಅಭಿಪ್ರಾಯ ವ್ಯಕ್ತಪಡಿಸಿತು. ಮುಸ್ಲಿಂ ಸಮುದಾಯದವರು ಕಪ್ಪು ಪಟ್ಟಿ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪಟ್ಟಣದಲ್ಲಿ ಸಮಾವೇಶಕ್ಕೂ ಮೊದಲು ಮೌನ ಮೆರವಣಿಗೆ ಮಾಡಲು ಅವಕಾಶ ಕೇಳಿದ್ದ ಮುಖಂಡರಿಗೆ ಪೊಲೀಸರು ಅವಕಾಶ ಕೊಟ್ಟಿಲ್ಲ ಎಂದು ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಆಕ್ಷೇಪ ವ್ಯಕ್ತಪಡಿಸಿದರು.

'ವಿವಿಧತೆಯಲ್ಲಿ ಏಕತೆ ಈ ದೇಶದ ಮಣ್ಣಿನ ಸತ್ವ. ಅದನ್ನು ಇಲ್ಲವಾಗಿಸಲು ಯಾರಿಂದಲೂ ಸಾಧ್ಯವಿಲ್ಲ. ದೇವಸ್ಥಾನ, ರೈತರ ಒಂದಿಂಚು ಭೂಮಿ ಕೂಡ ವಕ್ಫ್ ಗೆ ಸೇರಿಸಲು ಸಾಧ್ಯವಿಲ್ಲ. ವಕ್ಫ್ ಬಗ್ಗೆ ಗೊತ್ತಿಲ್ಲದವರಿಂದ ಸುಳ್ಳು ಪ್ರಚಾರ ಮಾಡಿ ಜನರನ್ನು ಯಾಮಾರಿಸುವ ಕೆಲಸ ನಡೆಯುತ್ತಿದೆ'

ಅಬ್ದುಲ್ ಅಝೀಝ್ ದಾರಿಮಿ, ಕರ್ನಾಟಕ ಉಲೇಮಾ ಒಕ್ಕೂಟದ ಕಾರ್ಯದರ್ಶಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News