×
Ad

ಚಿಕ್ಕಮಗಳೂರು-ಹಾಸನ ರೈಲ್ವೆ ಯೋಜನೆ ಶೀಘ್ರ ಪೂರ್ಣ : ಕೇಂದ್ರ ಸಚಿವ ಸೋಮಣ್ಣ

Update: 2025-07-11 22:47 IST

ಚಿಕ್ಕಮಗಳೂರು : ಚಿಕ್ಕಮಗಳೂರು-ಹಾಸನ ರೈಲ್ವೆ ಯೋಜನೆ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಶುಕ್ರವಾರ ನಗರದ ರೈಲು ನಿಲ್ದಾಣದಲ್ಲಿ ತಿರುಪತಿ-ಚಿಕ್ಕಮಗಳೂರು ನೂತನ ರೈಲು ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರದ ರೈಲು ನಿಲ್ದಾಣದಲ್ಲಿ 22 ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಸಕಲೇಶಪುರ ರೈಲ್ವೆ ಯೋಜನೆಯನ್ನು 26 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಹಾಸನ ರೈಲು ನಿಲ್ದಾಣದಲ್ಲಿ 23 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.

ಅರಸೀಕೆರೆ-ಹಾಸನ ದ್ವಿಪಥ ರೈಲು ಹಳಿ ನಿರ್ಮಾಣಕ್ಕೆ 750 ಕೋಟಿ ರೂ. ಅನುದಾನ ಖರ್ಚು ಮಾಡಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. 187 ಕೋಟಿ ರೂ. ವೆಚ್ಚದಲ್ಲಿ ಚಿಕ್ಕ ಬಾಣಾವರ-ಹಾಸನ ರೈಲು ಮಾರ್ಗದ ವಿದ್ಯುಧೀಕರಣ ಮಾಡಲಾಗಿದೆ. ಚಿಕ್ಕಮಗಳೂರು, ಬೀರೂರು ರೈಲು ನಿಲ್ದಾಣಗಳಲ್ಲಿ ಡಬಲ್ ಕ್ರಾಸಿಂಗ್‌ಗೆ 70 ಕೋಟಿ ರೂ. ಹಾಗೂ ಮೇಲ್ಸೇತುವೆ ಕಾಮಗಾರಿಗೆ 70 ಕೋಟಿ ರೂ. ಅನುದಾನ ಮಂಜೂರು ಮಾಡಲಾಗುತ್ತಿದೆ. ಬೀರೂರು, ಅಜ್ಜಂಪುರ, ನಾಗಮಂಗಲ ಆರ್‌ಯುಪಿಗೆ ತಲಾ 50 ಕೋಟಿ ರೂ. ಅನುದಾನ ನೀಡಲಾಗಿದೆ. 63 ಕಿ.ಮೀ. ಉದ್ದದ ಬೀರೂರು-ಶಿವಮೊಗ್ಗ ದ್ವಿಪಥ ರೈಲು ಮಾರ್ಗ ಹಾಗೂ 333 ಕಿ.ಮೀ. ಉದ್ದದ ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಮಾರ್ಗಕ್ಕೆ ಸರ್ವೇ ಕಾರ್ಯವನ್ನೂ ಆರಂಭಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸದ್ಯ 644 ಕೆಳಸೇತುವೆ, ಮೇಲ್ಸೇತುವೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ರಾಜ್ಯದಲ್ಲಿನ ರೈಲ್ವೆ ಯೋಜನೆಗಳಿಗಾಗಿ ಕೇಂದ್ರ ಸರಕಾರ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿದೆ. ರಾಜ್ಯದಲ್ಲಿ ಈಗಾಗಲೇ 10 ವಂದೇ ಮಾತರಂ ರೈಲುಗಳು ಸಂಚಾರ ಆರಂಭಿಸಿವೆ. 1,981 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗಿದ್ದು, ಇನ್ನೂ 65 ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಸಾವಿರ ಕೋಟಿ ರೂ. ಖರ್ಚು ಮಾಡಲಾಗುವುದು ಎಂದರು.

ಚಿಕ್ಕಮಗಳೂರಿನಿಂದ ತಿರುಪತಿಗೆ ರೈಲು ಸಂಚಾರ ಆರಂಭಿಸಬೇಕೆಂಬುದು ಜಿಲ್ಲೆಯ ಜನರ ದಶಕಗಳ ಬೇಡಿಕೆಯಾಗಿತ್ತು. ಈ ನಿಟ್ಟಿನಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದರು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಪ್ರಧಾನಿ ಮೋದಿ ಅವರು ಚಿಕ್ಕಮಗಳೂರು ಜನರ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದು ಹೇಳಿದರು.

ಚಿಕ್ಕಮಗಳೂರು-ತಿರುಪತಿ ನಡುವೆ ವಾರದಲ್ಲಿ ಮೂರು ದಿನ ರೈಲು ಸಂಚರಿಸಲು ಕ್ರಮ ವಹಿಸಬೇಕೆಂಬ ಬೇಡಿಕೆ ಇದೆ. ಆದರೆ, ಒಮ್ಮೆ ಒಂದು ರೈಲು ನಿಲ್ದಾಣದಿಂದ ಸಂಚಾರ ಆರಂಭಿಸಿದರೆ 36 ಸಾವಿರ ರೂ. ಖರ್ಚು ಬರುತ್ತದೆ. ಹೀಗೆ ಖರ್ಚಾಗುವ ಹಣ ಮತ್ತೆ ಇಲಾಖೆಗೆ ಬರಬೇಕು. ಆಗ ಮಾತ್ರ ರೈಲು ಸಂಚಾರವನ್ನು ಹೆಚ್ಚು ಹೆಚ್ಚು ಮಾಡಲು ಸಾಧ್ಯ. ಆದರೆ, ಚಿಕ್ಕಮಗಳೂರಿನಲ್ಲಿ ಎಷ್ಟು ಮಂದಿ ತಿರುಪತಿಗೆ ಹೋಗಿ ಬರುತ್ತಾರೆ ಎಂಬುದನ್ನು ಮೊದಲು ಮಾಹಿತಿ ಸಂಗ್ರಹಿಸಬೇಕು. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ವಿ.ಪ. ಸದಸ್ಯ ಸಿ.ಟಿ.ರವಿ ರವಿ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ವಿ.ಪ. ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಮಾಜಿ ಶಾಸಕ ಡಿ.ಎಸ್.ಸುರೇಶ್, ದೀಪಕ್ ದೊಡ್ಡಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ಮುಖಂಡರಾದ ಕಲ್ಮುರುಡಪ್ಪ, ಎಸ್ಪಿ ಡಾ.ವಿಕ್ರಮ್ ಅಮಟೆ, ಜಿಪಂ ಸಿಇಒ ಎಚ್.ಎಸ್.ಕೀರ್ತನಾ ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

‘ಗುರು ದತ್ತಾತ್ರೇಯ’ ನಾಮಕರಣಕ್ಕೆ ಪ್ರಸ್ತಾವ

ಚಿಕ್ಕಮಗಳೂರು-ತಿರುಪತಿ ರೈಲಿಗೆ ‘ಗುರು ದತ್ತಾತ್ರೇಯ’ ನಾಮಕರಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಸಂಬಂಧ ಚರ್ಚಿಸಿ ಕ್ರಮ ವಹಿಸಲಾಗುವುದು. ಶಿವಮೊಗ್ಗ-ಶೃಂಗೇರಿ ರೈಲು ಮಾರ್ಗದ ಸರ್ವೇಗೆ ಅನುದಾನ ಮೀಸಲಿಟ್ಟಿದ್ದು, ಶೃಂಗೇರಿ-ಉಡುಪಿ-ಕೊಲ್ಲೂರು ರೈಲ್ವೆ ಯೋಜನೆ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.

ಮೋದಿ ಸರಕಾರದ ಅವಧಿಯಲ್ಲೇ ಹಾಸನ-ಚಿಕ್ಕಮಗಳೂರು ರೈಲ್ವೆ ಯೋಜನೆ ಪೂರ್ಣಗೊಳ್ಳಲಿದೆ. ಈ ಯೋಜನೆ ಪೂರ್ಣಗೊಂಡಲ್ಲಿ ಚಿಕ್ಕಮಗಳೂರಿನ ಜನರಿಗೆ ಲಾಟರಿ ಹೊಡೆಯಲಿದೆ. ಕೇಂದ್ರ ಸರಕಾರದ ರೈಲ್ವೆ ಯೋಜನೆಗಳ ಸಮರ್ಪಕ, ಶೀಘ್ರ ಜಾರಿಗೆ ರಾಜ್ಯ ಸರಕಾರದ ಸಹಕಾರ ಅತ್ಯಗತ್ಯ. ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸಲೇಬೇಕು. ರಾಜ್ಯ ಸರಕಾರದ ಸಹಕಾರದಿಂದಾಗಿ ಚಿಕ್ಕಮಗಳೂರು-ಹಾಸನ ರೈಲ್ವೆ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಲು ಸಾಧ್ಯವಾಗಿದೆ.

ವಿ.ಸೋಮಣ್ಣ, ಕೇಂದ್ರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News