ಕಳಸ | ಭದ್ರಾ ನದಿ ತೀರದಲ್ಲಿ ವಿದ್ಯುತ್ ಕಂಬಕ್ಕೆ ಢಿಕ್ಕಿ; ನದಿಯಲ್ಲಿ ವಾಹನ ಸಹಿತ ಚಾಲಕ ಕೊಚ್ಚಿ ಹೋಗಿರುವ ಶಂಕೆ
ಚಿಕ್ಕಮಗಳೂರು : ಚಾಲಕನ ನಿಯಂತ್ರಣ ತಪ್ಪಿದ ವಾಹನವೊಂದು ಭದ್ರಾ ನದಿಗೆ ಉರುಳಿ ನದಿಯಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳದಲ್ಲಿ ವಾಹನ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿರುವುದು, ನದಿ ಬದಿಯ ಕಂದಕದಲ್ಲಿ ವಾಹನದ ಟೈರ್ ನದಿಯತ್ತ ಹೋಗಿರುವ ಗುರುತು ಪತ್ತೆಯಾಗಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಹೊಸೂರು-ಕೊಳಮಗೆ ಗ್ರಾಮಗಳ ಮಧ್ಯೆ ನಡೆದಿದೆ.
ಕಳಸ-ಕಳಕೋಡು ಸಂಪರ್ಕ ರಸ್ತೆಯ ಮಧ್ಯೆ ಸಿಗುವ ಹೊಸೂರು-ಕೊಳಮಗೆ ಬಳಿ ವಾಹನವೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿರುವ ಕುರುಹು ಪತ್ತೆಯಾಗಿದೆ. ನಂತರ ಆ ವಾಹನ ಭದ್ರಾ ನದಿಯತ್ತ ಹೋಗಿರುವುದಕ್ಕೆ ನದಿಯ ಅಂಚಿನಲ್ಲಿ ಟೈರ್‌ನ ಗುರುತೂ ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ವಾಹನದೊಂದಿಗೆ ಚಾಲಕನೂ ಭದ್ರಾ ನದಿಯಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ನದಿಯಲ್ಲಿ ಭಾರೀ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಇದುವರೆಗೂ ವಾಹನವಾಗಲಿ, ಚಾಲಕನಾಗಲಿ ಪತ್ತೆಯಾಗಿಲ್ಲ. ಪೊಲೀಸರೊಂದಿಗೆ ಸುತ್ತಮುತ್ತಲಿನ ಗ್ರಾಮಸ್ಥರು, ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದು, ಭದ್ರಾ ನದಿ ಉದ್ದಕ್ಕೂ ವಾಹನ ಹಾಗೂ ಚಾಲಕನಿಗಾಗಿ ಶೋಧ ನಡೆಸಲಾಗುತ್ತಿದೆ