×
Ad

ಕಾಡಾನೆ ದಾಳಿಗೆ ರೈತ ಬಲಿ; ಬಾಳೆಹೊನ್ನೂರು, ಖಾಂಡ್ಯ ಬಂದ್

Update: 2025-07-28 22:42 IST

ಚಿಕ್ಕಮಗಳೂರು : ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ 4ದಿನಗಳ ಅಂತದಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿಯಾಗಿರುವ ಘಟನೆ ಖಂಡಿಸಿ ರೈತರು, ವಿವಿಧ ರಾಜಕೀಯ ಪಕ್ಷಗಳು, ಸಂಘಸಂಸ್ಥೆಗಳು ಕರೆ ನೀಡಿದ್ದ ಬಾಳೆಹೊನ್ನೂರು ಹಾಗೂ ಖಾಂಡ್ಯ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದ್ದು, ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೆ ವ್ಯಾಪಾರಿಗಳು, ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‍ಗೆ ಸಹಕಾರ ನೀಡಿದರು. ಬಂದ್‍ಗೆ ಆಟೊ, ಟ್ಯಾಕ್ಸಿ ಚಾಲಕರೂ ಸೇರಿದಂತೆ ಬಹುತೇಕ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿದ್ದವು.

ಬಂದ್ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ಪಟ್ಟಣದಲ್ಲಿ ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೆ ವಾಹನ, ಜನಸಂಚಾರ ಬಂದ್ ಆಗಿತ್ತು, ಶಾಲಾ ಕಾಲೇಜುಗಳು ಎಂದಿನಂತೆ ತೆರದಿದ್ದವು, ಸರಕಾರಿ, ಖಾಸಗಿ ಬಸ್‍ಗಳ ಸಂಚಾರ ಎಂದಿನಂತಿತ್ತು. ಬಂದ್ ಹಿನ್ನೆಲೆಯಲ್ಲಿ ಬಾಳೆಹೊನ್ನೂರು, ಖಾಂಡ್ಯ ಪಟ್ಟಣಗಳು ಬಿಕೋ ಎನ್ನುತ್ತಿದ್ದವು. ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ಬಂದ್‍ಗೆ ಬೆಂಬಲ ಸೂಚಿಸಿದ್ದವು.

ರವಿವಾರ ರಾತ್ರಿ ಬಾಳೆಹೊನ್ನರು ಹೋಬಳಿ ವ್ಯಾಪ್ತಿಯ ಬನ್ನೂರು ಗ್ರಾಪಂ ವ್ಯಾಪ್ತಿಯಲ್ಲಿರುವ ಅಂಡವಾನೆ ಎಂಬಲ್ಲಿ 65 ವರ್ಷದ ರೈತ ಸುಬ್ರಾಯಗೌಡ ಎಂಬವರು ತಮ್ಮ ತೋಟದ ಬಳಿ ಹೋಗುತ್ತಿದ್ದ ವೇಳೆ ತೋಟದಲ್ಲೇ ಇದ್ದ ಕಾಡಾನೆಯೊಂದು ಏಕಾಏಕಿ ರೈತನ ಮೇಲೆರಗಿ ತುಳಿದು ಸಾಯಿಸಿತ್ತು. ಈ ಘಟನೆಗೂ ಮುನ್ನ ಬನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆಯೊಬ್ಬರು ಮೃತ ಪಟ್ಟಿದ್ದರು.

ಈ ಎರಡು ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ರವಿವಾರ ರಾತ್ರಿಯೇ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಬಾಳೆಹೊನ್ನೂರು ಪಟ್ಟಣದಲ್ಲಿರುವ ಅರಣ್ಯ ಇಲಾಖೆ ಕಚೇರಿಗೆ ಮುಂದೆ ಜಮಾಯಿಸಿದ್ದ ರೈತರು, ಕಾಫಿ ಬೆಳೆಗಾರರು, ಸಾರ್ವಜನಿಕರು ಕೆಲ ಹೊತ್ತು ಪ್ರತಿಬಟನೆ ನಡೆಸಿ ಕಾಡಾನೆ ಹಾವಳಿ ನಿಯಂತ್ರಿಸದ ಸರಕಾರ ಮತ್ತು ಅರಣ್ಯ ಇಲಾಖೆ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ್ದರು. ನಂತರ ಸಭೆ ನಡೆಸಿದ ಮುಖಂಡರು, ಸೋಮವಾರ ಬಾಳೆಹೊನ್ನೂರು, ಖಾಂಡ್ಯ ಹೋಬಳಿ ಬಂದ್‍ಗೆ ಕರೆ ನೀಡಿದ್ದರು.

ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಯತ್ನ: ಬಂದ್ ಹಿನ್ನೆಲೆಯಲ್ಲಿ ರೈತ, ಪ್ರಗತಿಪರ ಸಂಘಟನೆಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳು ಸೋಮವಾರ ಬೆಳಗ್ಗೆ ಬಾಳೆಹೊನ್ನೂರು ಅರಣ್ಯ ಇಲಾಖೆ ಕಚೇರಿ ಎದುರು ಜಮಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನೆಗೆ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು, ಕಾರ್ಮಿಕರು, ರೈತರು, ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರಿಂದ ಪೊಲೀಸರು ಧರಣಿ ನಿರತರನ್ನು ನಿಯಂತ್ರಿಸಲು ಹರಸಾಹಸಪಡುವಂತಾಗಿತ್ತು. ಅರಣ್ಯ ಇಲಾಖೆ ಕಚೇರಿ ಎದುರು ಶೃಂಗೇರಿ-ಚಿಕ್ಕಮಗಳೂರು ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ವಾಹನ ಸಂಚಾರ ಸ್ತಬ್ಧಗೊಂಡಿದ್ದು, ಕಿಲೋ ಮೀಟರ್ ಉದ್ದಕ್ಕೂ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುವಂತಾಗಿತ್ತು.

ಕಾಡಾನೆಗಳ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಧರಣಿ ನಿರತರು ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಮುತ್ತಿಗೆ ಹಾಕಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಮುಖಂಡರು ವಾಗ್ವಾದ, ಮಾತಿನ ಚಕಮಕಿ ನಡೆಸಿ ಧಿಕ್ಕಾರದ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಮುಖಂಡರು, ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕಳೆದ ದಿನಗಳ ಅಂತರದಲ್ಲಿ ಇಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ, ಈ ಸಾಲಿನಲ್ಲಿ ಒಟ್ಟು ನಾಲ್ಕು ಮಂದಿಯನ್ನು ಕಾಡಾನೆಗಳು ಕೊಂದು ಹಾಕಿವೆ, ಕಾಡಾನೆಗಳ ಹಾವಳಿಯಿಂದ ರೈತರು, ಕಾರ್ಮಿಕರು ಜೀವಭಯದಲ್ಲಿ ಬದುಕುವಂತಾಗಿದೆ, ಇಷ್ಟಾದರೂ ಅರಣ್ಯ ಇಲಾಖೆ ಅಧಿಕಾರಿಗಳು, ರಾಜ್ಯ ಸರಕಾರ ಮೌನಕ್ಕೆ ಶರಣಾಗಿದೆಯೇ ಹೊರತು ಶಾಶ್ವತ ಯೋಜನೆ ಮೂಲಕ ಕಾಡಾನೆಗಳ ಹಾವಳಿ ನಿಯಂತ್ರಿಸುವಲ್ಲಿ ನಿರ್ಲಕ್ಷ್ಯತೋರಿದೆ, ಮಲೆನಾಡಿನಲ್ಲಿ ಇನ್ನೆಷ್ಟು ಬಲಿ ಬೀಳಬೇಕು ಎಂದು ಪ್ರಶ್ನಿಸಿ, ಸಂಸದರು, ಅರಣ್ಯ ಇಲಾಖೆ ಸಚಿವ, ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದು ಆಕ್ರೋಶ ಹೊರಹಾಕಿದರು.

ಈ ವೇಳೆ ಸ್ಥಳದಲ್ಲಿದ್ದ ಶಾಸಕ ಟಿ.ಡಿ.ರಾಜೇಗೌಡ ಅವರು ಅರಣ್ಯ ಸಚಿವ ಖಂಡ್ರೆ ಜೊತೆ ದೂರವಾಣಿಯಲ್ಲಿ ಮಾತನಾಡಿ, ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಕ್ರಮವಹಿಸಬೇಕೆಂದು ಮನವಿ ಮಾಡಿದ್ದು, ರೈತರು ಕಾರ್ಮಿಕರ ಜೀವ ಬಲಿ ಪಡೆದ ಎರಡೂ ಆನೆಗಳ ಸೆರೆಗೆ ಸಚಿವ ಖಂಡ್ರೆ ಆದೇಶಿಸಿದ್ದಾರೆಂದು ಸ್ಥಳದಲ್ಲಿದ್ದ ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿದ್ದರಿಂದ ಪರಿಸ್ಥಿತಿ ತಹಬದಿಗೆ ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News