ಹಿಂದೂ ಮಹಾರ್ಯಾಲಿಯಲ್ಲಿ ನಯನಾ ಮೋಟಮ್ಮ ಭಾಗವಹಿಸಿದ್ದು ವೈಯಕ್ತಿಕ ನಿರ್ಧಾರ : ಬ್ಲಾಕ್ ಕಾಂಗ್ರೆಸ್ ಸ್ಪಷ್ಟನೆ
ನಯನಾ ಮೋಟಮ್ಮ
ಮೂಡಿಗೆರೆ : ಶಾಸಕಿ ನಯನಾ ಮೋಟಮ್ಮ ಅವರು ಶ್ರೀ ಹಿಂದೂ ಮಹಾಗಣಪತಿ ಸಮಿತಿಯಿಂದ ಮಂಗಳವಾರ ನಡೆದ ಹಿಂದೂ ಸಂಗಮ ರ್ಯಾಲಿಯಲ್ಲಿ ಲಾಂಛನ ಬಿಡುಗಡೆ ಮತ್ತು ಭಗವಾಧ್ವಜ ಕಟ್ಟೆಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರೊಂದಿಗೆ ಕೇಸರಿ ಶಾಲು ಧರಿಸಿ ವೇದಿಕೆ ಹಂಚಿ ಕೊಂಡಿರುವುದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅವರು ವೈಯಕ್ತಿಕವಾಗಿ ಹಿಂದೂ ಮಹಾ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಮರಗುಂದ ಪ್ರಸನ್ನಸ್ಪಷ್ಟಪಡಿಸಿದ್ದಾರೆ.
ಬುಧವಾರ ಹೇಳಿಕೆ ನೀಡಿರುವ ಅವರು, ಪ್ರಮೋದ್ ಮುತಾಲಿಕ್ ಅವರ ಯಾವುದೇ ವಿಚಾರವನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುವುದಿಲ್ಲ. ಪ್ರಮೋದ್ ಮುತಾಲಿಕ್ ಅವರು 45ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಎದುರಿಸುತ್ತಿದ್ದಾರೆ. ಅವರು ಮಹಿಳೆಯರ ಮೇಲೆ ಹಲವು ಬಾರಿ ಹಲ್ಲೆ ಮತ್ತು ದೌರ್ಜನ್ಯ ನಡೆಸಿದ್ದಾರೆ. ಅಂತಹ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯೊಂದಿಗೆ ಶಾಸಕಿ ನಯನಾ ಮೋಟಮ್ಮ ಅವರು ವೇದಿಕೆ ಹಂಚಿ ಕೊಂಡಿದ್ದು, ದುರದೃಷ್ಟಕರವೆಂದು ಕಾಂಗ್ರೆಸ್ ಪಕ್ಷ ಭಾವಿಸುತ್ತದೆ ಎಂದು ತಿಳಿಸಿದ್ದಾರೆ.
ಶಾಸಕಿ ನಯನಾ ಮೋಟಮ್ಮ ಅವರು ಸಾರ್ವಜನಿಕ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಕಾರ್ಯಧ್ಯಕ್ಷರಾಗಿರುವುದರ ಬಗ್ಗೆ ಆಕ್ಷೇಪವಿಲ್ಲ. ಆದರೆ, ಗೋಹತ್ಯೆಗೆ ಪ್ರತಿಯಾಗಿ ಮಾನವ ಹತ್ಯೆಗೆ ಪ್ರಚೋದಿಸುವ ಪ್ರಮೋದ್ ಮುತಾಲಿಕ್ ಅವರನ್ನು ಹಿಂದೂ ಮಹಾ ರ್ಯಾಲಿಗೆ ಕರೆ ತಂದದ್ದು ಶಾಸಕರ ವೈಯಕ್ತಿಕ ನಿರ್ಧಾರವಾಗಿದೆ. ಹಿಂದೆ ಮೋಟಮ್ಮ ಅವರು ಸಚಿವರಾಗಿದ್ದಾಗ ಪ್ರಮೋದ್ ಮುತಾಲಿಕ್ ಅವರನ್ನ ಚಿಕ್ಕಮಗಳೂರು ಜಿಲ್ಲೆಗೆ ಕಾಲಿಡಲು ಬಿಟ್ಟಿರಲಿಲ್ಲ. ಸಂವಿಧಾನಕ್ಕೆ ವಿರುದ್ಧವಾದ ಕೃತ್ಯಗಳಲ್ಲಿ ತೊಡಗಿರುವ, ಜಾತ್ಯತೀತ ಪರಿಕಲ್ಪನೆಯನ್ನು ತಿರಸ್ಕರಿಸಿ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಕರೆ ಕೊಡುತ್ತಿರುವ ಪ್ರಮೋದ್ ಮತಾಲಿಕ್ ಅವರ ವಿಚಾರವನ್ನು ಕಾಂಗ್ರೆಸ್ ಪಕ್ಷ ತಿರಸ್ಕರಿಸುತ್ತದೆ. ಕೋಮುವಾದಿ ಮತ್ತು ಕ್ರಿಮಿನಲ್ ಹಿನ್ನೆಲೆಯವರೊಂದಿಗೆ ಸಂಪರ್ಕದಲ್ಲಿರಬಾರದೆಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಅನೇಕ ಬಾರಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. ಸಂಘ ಪರಿವಾರದ ಬಗ್ಗೆ ಭಯ ಇರುವವರು ಮತ್ತು ಸಂಘ ಪರಿವಾರದ ಬಗ್ಗೆ ಪ್ರೀತಿ ಇರುವವರು ಕಾಂಗ್ರೆಸ್ ಪಕ್ಷಕ್ಕೆ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.
ಶಾಸಕಿ ನಯನಾ ಮೋಟಮ್ಮ ಅವರು ಹಿಂದೂ ಮಹಾ ರ್ಯಾಲಿಯ ಭಾಷಣದಲ್ಲಿ ನಾನು ಕಾಂಗ್ರೆಸ್ ನಲ್ಲಿ ಇರುತ್ತೇನಾ ಅಥವಾ ಬಿಜೆಪಿ, ಎಸ್‌ಡಿಪಿಐ, ಬಿಎಸ್‌ಪಿ ಪಕ್ಷಕ್ಕೆ ಹೋಗುತ್ತೇನಾ ಎಂದು 3 ವರ್ಷದ ನಂತರ ನಿರ್ಧರಿಸುತ್ತೇನೆ ಎಂದು ಶಾಸಕರ ಸೈದ್ಧಾಂತಿಕ ದಿವಾಳಿತನವನ್ನು ತೋರಿಸುತ್ತದೆ. 3 ವರ್ಷದ ನಂತರ ನಿರ್ಧರಿಸುವ ಬದಲು ಈಗಲೇ ನಿರ್ಧರಿಸಿದರೆ ಸೂಕ್ತ ಎಂದ ಅವರು, ಸ್ವಾತಂತ್ರ್ಯಕ್ಕೆ ಹೋರಾಡಿ, ತ್ಯಾಗ, ಬಲಿದಾನದಿಂದ ಹಿರಿಯರು ಕಟ್ಟಿದ ಐತಿಹಾಸಿಕವಾದ ಕಾಂಗ್ರೆಸ್ ಪಕ್ಷಕ್ಕೆ ವ್ಯಕ್ತಿಗಿಂತ ಸಿದ್ದಾಂತವೇ ಮುಖ್ಯವಾಗಿದೆ. ಶಾಸಕರ ನಡೆಯ ಬಗ್ಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಗಮನಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ