ಶೃಂಗೇರಿ | ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಬಸ್ ಪಲ್ಟಿ; ಶಿಕ್ಷಕರು, ಹಲವು ವಿದ್ಯಾರ್ಥಿಗಳಿಗೆ ಗಾಯ
Update: 2025-11-08 13:29 IST
ಚಿಕ್ಕಮಗಳೂರು : ಶೃಂಗೇರಿಯ ಕಾವಡಿ ಸಮೀಪದ ಅಗ್ರಹಾರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಬಸ್‌ವೊಂದು ಪಲ್ಟಿಯಾಗಿರುವ ಘಟನೆ ನಡೆದಿದೆ.
ಚಳ್ಳಕೆರೆಯಿಂದ ಶೃಂಗೇರಿಗೆ ಪ್ರವಾಸಕ್ಕೆ ಬರುತ್ತಿದ್ದ ಚಳ್ಳಕೆರೆ ವಾಸವಿ ಪಿಯು ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.
ಬಸ್‌ನಲ್ಲಿ ಇದ್ದ ಮೂವರು ಶಿಕ್ಷಕರು ಹಾಗೂ 22 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗೊತ್ತಾಗಿದೆ.
ಸಣ್ಣಪುಟ್ಟ ಗಾಯಗಳಾದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.