ದಶಕದ ಬಳಿಕ ಬಂದರೂ ಅಪೂರ್ಣವೆನಿಸುವ ಚಿತ್ರ!
ಚಿತ್ರ: ರಾಜದ್ರೋಹಿ
ನಿರ್ದೇಶನ: ಸಮರ್ಥರಾಜ್
ನಿರ್ಮಾಣ: ಧನುಶ್ ಕಂಬೈನ್ಸ್ ಬ್ಯಾನರ್
ತಾರಾಗಣ: ಪಟ್ರೆ ಅಜಿತ್, ಮಾನಸ ಶಿವಣ್ಣ, ಶರಣ್, ಲಕ್ಷ್ಮೀ, ಅನಂತನಾಗ್ ಮೊದಲಾದವರು.
ತಮಿಳುನಾಡಿನ ಒಂದು ಹಳ್ಳಿಯಿಂದ ಚಿತ್ರದ ಕತೆ ಶುರು. ಅನಾಥವಾಗಿ ಬಂದ ಕನ್ನಡತಿಯೊಬ್ಬಳಿಗೆ ಹೋಟೆಲ್ ಮಾಲಕರೋರ್ವರು ಆಶ್ರಯ ನೀಡುತ್ತಾರೆ. ಆಕೆ ಬಂದ ದಿನವೇ ಹೋಟೆಲ್‌ಗೆ ಲಾಭವಾಯಿತೆಂದು ಆಕೆಯನ್ನು ಅನ್ನಪೂರ್ಣೇಶ್ವರಿ ಎಂದು ಕರೆಯುತ್ತಾರೆ.
ಮತ್ತೊಂದು ಕಡೆ ಕರ್ನಾಟಕದ ಆಶ್ರಮವೊಂದರಲ್ಲಿ ಗುರುಗಳಿಂದ ಆಶೀರ್ವಾದ ಪಡೆಯುವ ಯುವಕ ಶಿವು ತಮಿಳುನಾಡಿಗೆ ಹೊರಡುತ್ತಾನೆ. ಅನಾಥನಾಗಿದ್ದ ಶಿವುನನ್ನು ಗುರುಗಳೇ ಬೆಳೆಸಿರುತ್ತಾರೆ. ವಿಸಾಗೆ ಅಪ್ಲೈ ಮಾಡಿದ್ದ ಶಿವು ಅದನ್ನು ಪಡೆಯಲು ಚೆನ್ನೈ ಸೇರುತ್ತಾನೆ. ಚೆನ್ನೈನಲ್ಲಿ ಮೊದಲ ಊಟಕ್ಕೆಂದು ಹೋಗುವ ಜಾಗವೇ ಅನ್ನಪೂರ್ಣೇಶ್ವರಿಯ ಹೋಟೆಲ್ ಆಗಿರುತ್ತದೆ. ಶಿವು ಮತ್ತು ಅನ್ನಪೂರ್ಣೇಶ್ವರಿ ಮಧ್ಯೆ ಇರುವುದು ತಾಯಿ ಮಗನ ಸಂಬಂಧವೇ? ಈ ಸಂಬಂಧವನ್ನು ಇವರು ಅರಿತುಕೊಳ್ಳುತ್ತಾರೆಯೇ? ಗಂಡ ಮತ್ತು ಮಗನನ್ನು ಬಿಟ್ಟು ಅನ್ನಪೂರ್ಣೇಶ್ವರಿ ತಮಿಳುನಾಡು ಸೇರಲು ಕಾರಣವೇನು? ಮೊದಲಾದ ಪ್ರಶ್ನೆಗಳಿಗೆ ಚಿತ್ರದಲ್ಲಿ ಉತ್ತರ ಹುಡುಕಬಹುದು. ಮತ್ತೊಂದೆಡೆ ಬೆಂಗಳೂರಲ್ಲಿ ರೌಡಿ ಕೋಳಿ ಮಂಜ ನಡೆಸುವ ಕೊಲೆ, ರೌಡಿಗಳನ್ನಿಟ್ಟುಕೊಂಡು ರಾಜಕಾರಣಿಗಳು ನಡೆಸುವ ಆಟಾಟೋಪಗಳನ್ನು ಕೂಡ ತೋರಿಸಲಾಗಿದೆ. ಇಂಥದೇ ರಾಜಕಾರಣ ಮತ್ತು ರೌಡಿಸಂನ ಸುಳಿ ಹೇಗೆ ಶಿವು ಮತ್ತು ಅನ್ನಪೂರ್ಣೇಶ್ವರಿ ಬಾಳಿನಲ್ಲೂ ದುರ್ಘಟನೆಗಳಿಗೆ ಕಾರಣವಾಗಿದೆ ಎಂದು ಚಿತ್ರದಲ್ಲಿ ತೋರಿಸಲು ಪ್ರಯತ್ನಿಸಲಾಗಿದೆ.
ಚಿತ್ರದ ಕೇಂದ್ರ ಬಿಂದು ಶಿವು ಪಾತ್ರವನ್ನು ನಟ ಪಟ್ರೆ ಅಜಿತ್ ಸಿಕ್ಕ ಅವಕಾಶದಲ್ಲಿ ಚೊಕ್ಕವಾಗಿಯೇ ನಿರ್ವಹಿಸಿದ್ದಾರೆ. ಶಿವು ತಾಯಿ ಅನ್ನಪೂರ್ಣೇಶ್ವರಿಯಾಗಿ ಹಿರಿಯ ನಟಿ ಲಕ್ಷ್ಮೀ ಅಭಿನಯಿಸಿದ್ದಾರೆ. ಸಿನೆಮಾ ಚಿತ್ರೀಕರಣವಾಗಿ ದಶಕವೇ ಕಳೆದಿರುವ ಕಾರಣ ವರ್ಷಗಳ ಹಿಂದಿನ ದಿನಗಳ ಲಕ್ಷ್ಮಿಯ ನಟನೆಯನ್ನು ನೋಡಬಹುದಾಗಿದೆ. ಇದೊಂದು ಖುಷಿಯ ವಿಚಾರದ ಹೊರತಾಗಿ ತಡವಾದ ರಿಲೀಸ್ ಚಿತ್ರದ ಗುಣಮಟ್ಟಕ್ಕೆ ಕುಂದು ಮಾಡಿದೆ. ಉದಾಹರಣೆಗೆ ಲಕ್ಷ್ಮೀ ಪಾತ್ರಕ್ಕೆ ಬೇರೆಯವರಿಂದ ಕಂಠದಾನ ಕೊಡಿಸಲಾಗಿದೆ. ರಿಲೀಸ್ ವೇಳೆಗೆ ಇನ್ನಿಲ್ಲವಾಗಿರುವ ಬ್ಯಾಂಕ್ ಜನಾರ್ದನ್ ಸೇರಿದಂತೆ ಅವಿನಾಶ್ ಪಾತ್ರಗಳಿಗೂ ಒಂದು ಹಂತದಲ್ಲಿ ಕಂಠದಾನದ ಕಾಟವಿದೆ.
ಚಿತ್ರದ ಪೋಸ್ಟರ್ ನಂತೆ ದೃಶ್ಯಗಳಲ್ಲಿ ಕೂಡ ನಾಯಕನಿಗಿಂತಲೂ ನಾಯಕನ ಸ್ನೇಹಿತನಾಗಿ ಶರಣ್ ಹೆಚ್ಚು ಸ್ಕೋರ್ ಮಾಡಿದ್ದಾರೆ. ಹಾಸ್ಯದ ಪಾತ್ರವಾದರೂ ಚಿತ್ರದ ಉದ್ದಕ್ಕೂ ಇರುವ ಮಧು ಅಲಿಯಾಸ್ ಉಪ್ಪುಕಡಲೆ ಎನ್ನುವ ಪಾತ್ರ ನಿರ್ವಹಿಸಿದ್ದಾರೆ. ಒರಟ ಪ್ರಶಾಂತ್ ಅತಿಥಿ ಪಾತ್ರದಲ್ಲಿ ಆಗಮಿಸಿ ಒಂದು ಹೊಡೆದಾಟ ದೃಶ್ಯದ ಭಾಗವಾಗಿದ್ದಾರೆ. ಅದೇ ರೀತಿ ಫ್ಲ್ಯಾಶ್ ಬ್ಯಾಕ್ ಕತೆಯಲ್ಲಿ ಅಭಿಜಿತ್ ಕೂಡ ಒಂದು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ವರ್ಷಗಳ ಬಳಿಕ ಅನಂತನಾಗ್ ಲಕ್ಷ್ಮೀ ಜೋಡಿ ಎಂದು ಇಲ್ಲಿ ತೋರಿಸಲಾಗಿದೆ. ಆದರೆ ಜೋಡಿಯ ಫ್ಲ್ಯಾಶ್ ಬ್ಯಾಕ್ ದೃಶ್ಯದಲ್ಲಿ ಅನಂತ್ ಪಾತ್ರವನ್ನು ಅಚ್ಯುತ್ ಕುಮಾರ್ ನಿಭಾಯಿಸಿದ್ದಾರೆ. ಹೀಗಾಗಿ ಇಬ್ಬರನ್ನು ಒಂದೇ ಬಾರಿ ಪರದೆಯ ಮೇಲೆ ನೋಡಲು ಸಾಧ್ಯವಾಗಿಲ್ಲ.
ಚಿತ್ರದಲ್ಲಿ ವಿವಿಧ ವಿಚಾರಗಳನ್ನು ತುರುಕಿರುವ ಕಾರಣ ಚಿತ್ರಕಥೆ ಗೋಜಲುಮಯವಾಗಿದೆ. ದಶಕದ ಹಿಂದೆ ಜನಪ್ರಿಯವಾಗಿದ್ದ ಸಿನೆಮಾದೊಳಗೆ ಸಿನೆಮಾ ಕಥೆ ಹೇಳುವ ಉಪೇಂದ್ರ ಶೈಲಿ ಅನುಕರಿಸುವ ಯತ್ನದಲ್ಲಿ ಸ್ವತಃ ನಿರ್ದೇಶಕರೇ ಎಡವಿದಂತೆ ಕಾಣಿಸುತ್ತಿದೆ. ಹಲವಾರು ದೃಶ್ಯಗಳಿಗೆ ಲಾಜಿಕ್ ಇಲ್ಲ.
ಸಿನೆಮಾದೊಳಗಿನ ಸಿನೆಮಾದಲ್ಲಿ ದರ್ಶನ್, ಸುದೀಪ್, ಕುಮಾರಣ್ಣನ ಅಭಿಮಾನಿಗಳ ಬಗ್ಗೆ ವಿಮರ್ಶೆ ಇದೆ. ಇದಕ್ಕೆ ಇಂದಿನ ಸಂದರ್ಭವನ್ನು ಹೊಂದಿಸಲು ಪ್ರಯತ್ನಿಸಿರುವ ನಿರ್ದೇಶಕರು ಅಭಿಮಾನಿಗಳೇ ದೇವರು ನಿಜ. ಆದರೆ ರಾಕ್ಷಸ ರೂಪದ ನಕಲಿ ಅಭಿಮಾನಿಗಳಿದ್ದಾರೆ ಎನ್ನುವ ಸಾಲನ್ನು ಹಿನ್ನೆಲೆ ಧ್ವನಿಯಾಗಿ ಕೊಡಿಸಿದ್ದಾರೆ. ವಿಶೇಷ ಎಂದರೆ ನಾಯಕಿಯ ಸ್ನೇಹಿತೆ ಧರ್ಮಸ್ಥಳದ ಭಕ್ತಿಯ ಬಗ್ಗೆ ಆಡುವ ಮಾತು ಇಂದಿಗೂ ಹೊಂದಿಕೊಳ್ಳುವಂತಿದೆ.
ತಮಿಳು ನಾಡಿನಲ್ಲಿರುವ ನಾಯಕಿಯ ಸ್ನೇಹಿತೆ ಧರ್ಮಸ್ಥಳದ ಮಂಜುನಾಥನನ್ನು ಪ್ರಾರ್ಥಿಸುತ್ತಾಳೆ. ಆಗ ನಾಯಕಿ ಹತ್ತಿರದ ದೇವರನ್ನು ನೆನಪಿಸ್ಕೋ ಮತ್ತು ಹೆಣ್ಣು ದೇವರನ್ನು ನೆನೆಸ್ಕೋ ಎನ್ನುವುದು ಇಂದಿನ ಸಂದರ್ಭದಲ್ಲಿ ವಿಶೇಷ ಅರ್ಥ ಉದ್ಭವಗೊಳ್ಳಲು ಕಾರಣವಾಗುತ್ತದೆ. ಸದ್ಯದ ಅಭಿಮಾನಿಗಳ ಮಧ್ಯದ ಕಲಹದ ಲಾಭ ಪಡೆಯುವಂತೆ ತೆರೆಗೆ ಬಂದಿರುವ ಈ ಚಿತ್ರ ಮುಗಿದರೂ ಅಪೂರ್ಣಗೊಂಡಂತೆ ಭಾಸವಾಗುತ್ತದೆ. ಒಟ್ಟು ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಮಾನಸ ಶಿವಣ್ಣ ಅಭಿನಯ ಮತ್ತು ರಘು ತುಮಕೂರು ನೀಡಿರುವ ಸಂಗೀತದ ಹೊರತು ಧನಾತ್ಮಕ ಅಂಶಗಳೇ ಇಲ್ಲ ಎನ್ನಬಹುದು.