×
Ad

ನೋಡಿ ಹರಸಬೇಕಾದ ಚಿತ್ರ ‘ಅರಸಯ್ಯನ ಪ್ರೇಮ ಪ್ರಸಂಗ’

Update: 2025-09-27 15:31 IST

ಚಿತ್ರ: ಅರಸಯ್ಯನ ಪ್ರೇಮ ಪ್ರಸಂಗ

ನಿರ್ದೇಶನ: ಜೆ.ವಿ.ಆರ್. ದೀಪು

ನಿರ್ಮಾಣ: ಮೇಘಶ್ರೀ ರಾಜೇಶ್

ತಾರಾಗಣ: ಮಹಾಂತೇಶ ಹಿರೇಮಠ, ರಶ್ಮಿತಾ ಆರ್. ಗೌಡ ಮೊದಲಾದವರು.

ಅರಸಯ್ಯ ಎಲ್ಲ ಹಳ್ಳಿಗಳಲ್ಲೂ ಇರಬಹುದಾದ ಒಬ್ಬ ವ್ಯಕ್ತಿ. ವ್ಯಕ್ತಿತ್ವದಲ್ಲಿ ಯಾವ ನಾಯಕನಿಗೂ ಕಡಿಮೆ ಇರದಂಥ ಆದರ್ಶವಂತ. ಆದರೆ ಬಾಹ್ಯ ನೋಟಕ್ಕೆ ಆಕರ್ಷಣೀಯವಲ್ಲ ಎನ್ನುವ ಒಂದೇ ಕಾರಣಕ್ಕೆ ಅವಗಣನೆಗೆ ಒಳಗಾದಾತ. ಆದರೆ ಇಂಥ ವ್ಯಕ್ತಿಗೆ ತನ್ನೂರಿನ ಸರಕಾರಿ ಕಚೇರಿಗೆ ಕೆಲಸಕ್ಕೆಂದು ಬಂದಾಕೆಯ ಮೇಲೆ ಪ್ರೀತಿ ಮೂಡುತ್ತದೆ. ಆ ಪ್ರೇಮಪ್ರಸಂಗದ ಕಥೆಯೇ ಇದು.

ಮಂದವಾಗಿ ಕೇಳಿಸುವ ಕಿವಿ ಮತ್ತು ಅಂದವಾಗಿ ಕಾಣಿಸದ ಮುಖ ಈತನ ಪ್ರಮುಖ ಕುಂದು. ಮುಖಮುಚ್ಚುವಂತೆ ಹಬ್ಬುವ ಪೊದೆಗೂದಲು ಮತ್ತು ಸಾಮಾನ್ಯಕ್ಕಿಂತಲೂ ಕಡಿಮೆ ಎನಿಸುವಂಥ ಎತ್ತರ ಇನ್ನಿತರ ಕೊರತೆಗಳು. ಆದರೆ ಇವೆಲ್ಲವೂ ತಥಾಕಥಿತ ಸೌಂದರ್ಯ ಮೀಮಾಂಸೆಯಲ್ಲಿ ಕೊರತೆಯಾಗಿ ಕಾಣಬಹುದಷ್ಟೇ. ಇವೆಲ್ಲದರ ಆಚೆ ಕಷ್ಟದಲ್ಲಿರುವವರಿಗಾಗಿ ಕರಗುವ ಅರಸಯ್ಯ ಗುಣದಲ್ಲಿ ಬಾನೆತ್ತರ ಬೆಳೆದವನು. ಇದೇ ಕಾರಣದಿಂದಲೇ ಆ ಊರಿನ ಅಂಚೆ ಕಚೇರಿಗೆ ಪೋಸ್ಟ್ ಮಾಸ್ಟರ್ ಆಗಿ ಬಂದ ಕುಮಾರಿಯೂ ಕರಗಿ ಹೋಗುತ್ತಾಳೆ. ಅರಸಯ್ಯನಿಗಂತೂ ಅವಳೊತ್ತಿದ ಮೊದಲ ಮುದ್ರೆಯೇ ಹೃದಯ ಸೇರಿರುತ್ತದೆ.

ಕುಮಾರಿ ನಗುವಿನ ಹಳ್ಳಿಯ ಹುಡುಗಿ. ನಸುಗಪ್ಪಾದರೂ ಲಕ್ಷಣ ಇದ್ದಾಳೆ ಎಂದೇನಾದರೂ ಹೇಳಿದರೆ ಸಾಕು ಉರಿದು ಬಿಡುತ್ತಾಳೆ. ಇಂಥ ಸಬೂಬು ನೀಡಿಯೇ ವರದಕ್ಷಿಣೆ ಕೇಳಿ ಮದುವೆಗೆ ಮುಂದೆ ಬರುವವರೆಂದರೆ ಕುಮಾರಿಗೆ ಕಣ್ಣುರಿ. ಮತ್ತೊಂದೆಡೆ ಅರಸಯ್ಯನಿಗೂ ಮನೆಯಿಂದ ಮದುವೆಗಾಗಿ ಹೆಣ್ಣಿನ ಹುಡುಕಾಟ ನಡೆದಿರುತ್ತದೆ. ಆದರೆ ಅರಸಯ್ಯ ತನ್ನ ಕನಸಿನ ಹುಡುಗಿಗೆ ರೂಪ ಕಾಣುವುದೇ ಕುಮಾರಿಯನ್ನು ಕಂಡ ಬಳಿಕ. ಹೇಳಿ ಕೇಳಿ ತಾನು ಎರಡನೇ ಕ್ಲಾಸು ಮಾತ್ರ ಕಲಿತು ಊರಿನ ಗುಡಿಯಲ್ಲಿ ಪೂಜಾರಿಯಾಗಿರುವವನು. ಕುಮಾರಿ ಎನ್ನುವ ಸರಕಾರಿ ನೌಕರಿಯ ಹುಡುಗಿ ತನ್ನನ್ನು ಹೇಗೆ ಒಪ್ಪುತ್ತಾಳೆ ಎನ್ನುವುದೇ ಈತನ ಆತಂಕ. ಅಷ್ಟರಲ್ಲಾಗಲೇ ಅರಸಯ್ಯನ ಅಭಿಮಾನಿಗಳಾಗುವ ಪ್ರೇಕ್ಷಕರಲ್ಲೂ ಇದೇ ಆತಂಕ. ಕೊನೆಗೂ ಮಧ್ಯಂತರ ಮುಗಿದ ನಂತರ ಕುಮಾರಿ ಈ ಸಂಬಂಧಕ್ಕೆ ಸರಿ ಎನ್ನುತ್ತಾಳೆ. ಇನ್ನೇನು ಎಲ್ಲವೂ ಸುಸೂತ್ರವಾಗಿ ನಡೆಯಿತು ಎನ್ನುವಷ್ಟರಲ್ಲಿ ಮನೆಯವರೇ ಒಪ್ಪಿದ ಮದುವೆಗೆ ಮನೆಯವರಿಂದಲೇ ವಿಘ್ನ ಎದುರಾಗುತ್ತದೆ. ಈ ಅನಿರೀಕ್ಷಿತ ತಿರುವು ಎದುರಾಗಿದ್ದೇಕೆ? ಪರಿಹಾರ ಏನು ಎನ್ನುವುದನ್ನು ಚಿತ್ರಮಂದಿರದಲ್ಲಿ ನೋಡುವುದು ಸೊಗಸು.

ಅರಸಯ್ಯನಾಗಿ ಮಹಾಂತೇಶ್ ಹಿರೇಮಠ ಬಾಳಿ ತೋರಿಸಿದ್ದಾರೆ. ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆಯುತ್ತಿದ್ದ ಮಹಾಂತೇಶ್ ಮೊದಲ ಬಾರಿಗೆ ನಾಯಕ ನಟರಾಗಿದ್ದಾರೆ. ಸಹಜಾಭಿನಯದಲ್ಲಿ ತಾನು ನಿಜಕ್ಕೂ ಅರಸ ಎಂದು ಸಾಬೀತು ಮಾಡಿದ್ದಾರೆ.

ಕುಮಾರಿಯಾಗಿ ನವ ನಟಿ ರಶ್ಮಿತಾ ಗೌಡ ಕೂಡ ಸ್ಮರಣೀಯ ನಟನೆ ನೀಡಿದ್ದಾರೆ.

ಅಜ್ಜಿಯಾಗಿ ನೀನಾಸಂ ಹನುಮಕ್ಕ, ಸುಬ್ಬಯ್ಯ ಶಾಸ್ತ್ರಿಯಾಗಿ ರಘು ರಾಮನಕೊಪ್ಪ, ರಿಕ್ಷಾ ಚಾಲಕ ಬಸವಲಿಂಗನಾಗಿ ಪಿ.ಡಿ. ಸತೀಶ್ಚಂದ್ರ, ಟೈಲರ್ ಆಗಿ ಚಂದನ್ ಶಂಕರ್, ನಾಯಕಿಯ ತಂದೆ ಮಾಜಿ ಬಸ್ ನಿರ್ವಾಹಕನಾಗಿ ಗೋಮಾರದಹಳ್ಳಿ ಮಂಜುನಾಥ್, ಶಾಮಿಯಾನ ಮತ್ತು ಪಾತ್ರೆ ಪಗಡೆ ಬಾಡಿಗೆ ನೀಡುವ ನಾಯಕನ ತಂದೆಯಾಗಿ ಮಹಾದೇವ್ ಲಾಲಿಪಾಳ್ಯ, ಸ್ಪೆಷಲ್ ಟೀ ಹಾಕುವ ಚಿಲ್ಲರ್ ಮಂಜು, ಮಾತು ಮಾತಿಗೆ ಥೈ ಎಂದು ಬೆಚ್ಚಿ ಬೀಳಿಸುವ ನಾಟಿ ವೈದ್ಯ ನಂಜಪ್ಪನ ಪಾತ್ರಧಾರಿ ರಮೇಶ್ ಬಡಿಗೇರ್ ಸೇರಿದಂತೆ ಪ್ರತಿಯೊಂದು ಪಾತ್ರಗಳು ಕೂಡ ಒಂದಲ್ಲ ಒಂದು ದೃಶ್ಯದ ಮೂಲಕ ಮನಗೆಲ್ಲುತ್ತದೆ. ನಿರ್ದೇಶಕ ಜೆ.ವಿ.ಆರ್. ದೀಪು ಪ್ರತಿಯೊಂದು ಪಾತ್ರಕ್ಕೂ ಏನಾದರೊಂದು ಕೆಲಸ ನೀಡಿದ್ದಾರೆ. ಹಳೆಯ ರೇಡಿಯೊವನ್ನು ಕೂಡ ಒಂದು ಪಾತ್ರ ಮಾಡಿದ್ದಾರೆ.

ದೈಹಿಕ ಸದೃಢತೆಯೇ ಕಥಾನಾಯಕನ ಅರ್ಹತೆ ಎನ್ನುವುದನ್ನು ಗಂಭೀರ ಹಾಸ್ಯದ ಮೂಲಕ ಒಡೆಯುವುದು ಹೊಸದೇನಲ್ಲ. ಕನ್ನಡದ ಮಟ್ಟಿಗೆ ಮೊದಮೊದಲು ಇಂಥ ಪ್ರಯತ್ನ ಮಾಡಿ ಗೆದ್ದವರು ನಟ, ನಿರ್ದೇಶಕ ಕಾಶೀನಾಥ್. ‘ಒಂದು ಮೊಟ್ಟೆಯ ಕಥೆ’ಯಲ್ಲಿ ರಾಜ್ ಬಿ ಶೆಟ್ಟಿ ಕೂಡ ಇಂಥದೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದರು. ನಾಯಕ ನಾಯಕಿ ಎಂದಷ್ಟೇ ಅಲ್ಲದೆ ಒಂದು ಊರನ್ನೇ ಕಥೆಯಾಗಿಸಿದ ರೀತಿ ಕಾಣುವಾಗ ‘ತಿಥಿ’ ಸಿನೆಮಾ ಕೂಡ ನೆನಪಾಗುತ್ತದೆ. ಆದರೆ ಇಷ್ಟೆಲ್ಲ ಧನಾತ್ಮಕ ಅಂಶಗಳಿದ್ದರೂ ಸಿನೆಮಾ ಮಾತ್ರ ಥಿಯೇಟರ್‌ನಲ್ಲಿ ಕುಂಟುತ್ತಾ ಸಾಗಿದೆ. ವಾರದ ಹಿಂದೆ ಬಿಡುಗಡೆಯಾದ ಈ ಚಿತ್ರ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಇದ್ದರೆ ಖಂಡಿತವಾಗಿ ಕುಟುಂಬ ಸಮೇತ ನೋಡಿ ಮನರಂಜನೆ ಪಡೆಯಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಶಿಕರ ಪಾತೂರು

contributor

Similar News