×
Ad

ಒಂದು ಕೊಲೆಯ ಸುತ್ತ!

Update: 2025-09-20 14:46 IST

ಚಿತ್ರ: ಕಮಲ್ ಶ್ರೀದೇವಿ

ನಿರ್ದೇಶನ: ಸುನೀಲ್ ಕುಮಾರ್

ನಿರ್ಮಾಣ: ಧನಲಕ್ಷ್ಮಿ ಮತ್ತು ರಾಜವರ್ಧನ್

ತಾರಾಗಣ: ಸಚಿನ್ ಚೆಲುವರಾಯ ಸ್ವಾಮಿ, ಸಂಗೀತ ಭಟ್, ಕಿಶೋರ್ ಮೊದಲಾದವರು.

ಅದು ಬೆಂಗಳೂರಿನ ಕೃಷ್ಣರಾಜ ಮಾರುಕಟ್ಟೆಯಲ್ಲಿರುವ ವೇಶ್ಯಾವಾಟಿಕೆಗೆ ಲಾಡ್ಜ್. ಮೈಸೂರು ಮಲ್ಲಿಗೆ ಹೆಸರಿನ ಆ ವಸತಿಗೃಹದಲ್ಲಿ ವೇಶ್ಯೆಯೊಬ್ಬಳ ಕೊಲೆಯಾಗಿರುತ್ತದೆ. ಕೊಲೆಗೆ ಕಾರಣರಾದ ಶಂಕಿತರ ವಿಚಾರಣೆಯೊಂದಿಗೆ ಶುರುವಾಗುವ ಚಿತ್ರ ಕೊಲೆಗಾರನ ಪತ್ತೆಯೊಂದಿಗೆ ಮುಕ್ತಾಯವಾಗುತ್ತದೆ.

ಕೊಲೆಯ ಹಿನ್ನೆಲೆ ಹುಡುಕುವ ಪೊಲೀಸರು ಆಕೆ ಅಲ್ಲಿ ವೇಶ್ಯಾವಾಟಿಕೆ ನಡೆಸಲು ಕಾರಣನಾದ ತಲೆಹಿಡುಕನಿಂದಲೇ ವಿಚಾರಣೆ ಶುರು ಮಾಡುತ್ತಾರೆ. ಆತ ಮಾರೇನಹಳ್ಳಿ ಮುನಿಸ್ವಾಮಿ. ಆಪ್ತರಿಂದ ಮಾಮು ಎಂದೇ ಕರೆಯಲ್ಪಡುವ ಆಸಾಮಿ. ಆತನಿಗೆ ಆಕೆ ಅಂದೇ ಪರಿಚಯ. ಆಕೆಗಿದ್ದ ಬೇಡಿಕೆ ಒಂದೇ. ಅರ್ಜೆಂಟ್ ಆಗಿ 70 ಸಾವಿರ ರೂ. ಸಂಪಾದನೆ ಮಾಡಬೇಕು. ಅದಕ್ಕಾಗಿ 70 ಸಾವಿರ ಕೊಡುವ ಒಬ್ಬ ದೊರಕಿದರೆ ಸಾಕು ಅಥವಾ ತಲಾ ಹತ್ತು ಸಾವಿರ ನೀಡಬಲ್ಲ ಏಳು ಮಂದಿ ಸಿಕ್ಕರೂ ಸಾಕು! ಇಂಥದೊಂದು ವಿಲಕ್ಷಣ ಬೇಡಿಕೆ ಇಡುವ ಹೆಂಗಸೇ ಶ್ರೀದೇವಿ. ಈಕೆಯ ಸುಖ ಬಯಸಿ ಬರುವ ಏಳು ಮಂದಿಯ ವಿಚಾರಣೆಯೊಂದಿಗೆ ಕಥೆ ಮುಂದುವರಿಯುತ್ತದೆ. ಕೊಲೆಗಾರನಿಗಿಂತಲೂ ಮಧ್ಯಂತರದ ಬಳಿಕ ಹೊರಬರುವ ಕೊಲೆಯಾದಾಕೆಯ ಹಿನ್ನೆಲೆಯೇ ಚಿತ್ರದ ಪ್ರಮುಖ ಅಂಶವಾಗಿ ಕಾಡುತ್ತದೆ.

ಕಮಲ್ ಶ್ರೀದೇವಿ ಎನ್ನುವುದು ಭಾರತೀಯ ಚಿತ್ರರಂಗವನ್ನೇ ಸೆಳೆದಂಥ ಪರದೆ ಮೇಲಿನ ಜೋಡಿಗಳು. ಇದೇ ಹೆಸರನ್ನು ಚಿತ್ರಕ್ಕೆ ಇಟ್ಟಿರುವ ಕಾರಣ ಇದೊಂದು ಹಳೆಯ ಅಮರ ಪ್ರೇಮಕಥೆ ಇರಬಹುದೇನೋ ಎನ್ನುವ ನಿರೀಕ್ಷೆ ಇಟ್ಟುಕೊಂಡರೆ ಅದು ನಿಮ್ಮ ತಪ್ಪು. ಯಾಕೆಂದರೆ ಚಿತ್ರಕ್ಕೆ ಸಂಬಂಧಿಸಿದ ಹಾಗೆ ಇದು ಎರಡು ಪ್ರಧಾನ ಪಾತ್ರಗಳ ಹೆಸರು ಅಷ್ಟೇ. ಅದರಲ್ಲೂ ಕೊಂಚ ಕೂಡ ಆಸಕ್ತಿಕರವಾಗಿ ಕಾಣಿಸದ ನಾಯಕನಿಗೆ ಕಮಲ್ ಎಂದು ಹೆಸರಿಟ್ಟಿರುವುದು ಮಾತ್ರ ವಿಪರ್ಯಾಸ ಎಂದೇ ಹೇಳಬೇಕು. ಚಿತ್ರದೊಳಗೆ ಕಮಲ್ ಒಬ್ಬ ನಿರ್ದೇಶಕ. ಅದರಲ್ಲೂ ಫ್ಲಾಪ್ ನಿರ್ದೇಶಕ. ಸಾಯಲೆಂದು ಹೊರಟ ನಿರ್ದೇಶಕ ತನ್ನ ನೋವನ್ನು ಹೇಳಿಕೊಳ್ಳಲೆಂದೇ ಶ್ರೀದೇವಿ ಬಳಿಗೆ ಬಂದಿರುತ್ತಾನೆ. ಆದರೆ ಆತನ ನೋವಿನ ಕಥೆಯನ್ನು ಹಾಸ್ಯಾತ್ಮಕವಾಗಿ ಹೇಳಲು ಹೊರಟ ನಿರ್ದೇಶಕರ ಪ್ರಯತ್ನ ಹಳಿ ತಪ್ಪಿದೆ.

ಕಥೆಯೊಳಗಿನ ನಿರ್ದೇಶಕನ ಕಥೆಯಂತೆಯೇ ಆತ ಹೇಳುವ ಲೈಫ್ ಸ್ಟೋರಿ ಕೂಡ ಫ್ಲಾಪ್ ಆಗಿಯೇ ಕಾಣುತ್ತದೆ. ಕಮಲ್ ಪಾತ್ರಧಾರಿ ಸಚಿನ್ ಚೆಲುವರಾಯಸ್ವಾಮಿಗೆ ಇದು ಮೂರನೇ ಚಿತ್ರವಾದರೂ ನಟನೆಯಲ್ಲಿ ಯಾವುದೇ ಸುಧಾರಣೆ ಕಾಣಿಸಿಲ್ಲ. ಬಾಲಿಶ ಧ್ವನಿಯಾದರೂ ಚಿತ್ರದಲ್ಲಿನ ಅಮಾಯಕ ಪಾತ್ರಕ್ಕೆ ಹೊಂದಿಕೊಳ್ಳುವಂತಿದೆ. ಆದರೆ ಮುಖದ ಮುಕ್ಕಾಲುಪಾಲು ಗಡ್ಡವೇ ತುಂಬಿರುವ ಕಾರಣ ಅಳಿದುಳಿದ ಮುಖಭಾವವೂ ಕಾಣದು.

ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿ ನಟಿಸಲು ಧೈರ್ಯ ಮಾಡಿದಾಗಲೇ ನಟಿಯಾಗಿ ಸಂಗೀತ ಭಟ್ ಗೆದ್ದಿದ್ದಾರೆ.

ನಟನೆಯ ವಿಚಾರದಲ್ಲಿ ತಾನು ನಟಿ ಶ್ರೀದೇವಿ ಮಟ್ಟ ತಲುಪಬಲ್ಲೆ ಎಂದು ಸಂಗೀತಾ ತೋರಿಸಿದ್ದಾರೆ. ಮಧ್ಯಂತರದ ಬಳಿಕ ವಿಷಾದದ ನಗುವಲ್ಲೇ ತನ್ನ ಹಿನ್ನೆಲೆ ಹೇಳುವ ಸಂದರ್ಭದಲ್ಲಿ ಮುಖದಲ್ಲಿ ಮೂಡಿಸಿರುವ ಕಂಪನ ಅದ್ಭುತ. ಆದರೆ ಚಿತ್ರದ ಮೊದಲಾರ್ಧ ಸಹಿಸುವುದು ಕಷ್ಟ. ದ್ವಂದ್ವಾರ್ಥದ ದೃಶ್ಯ, ಸಂಭಾಷಣೆಗಳು ತಲೆ ಕೆಡುವಂತೆ ಮಾಡುತ್ತದೆ. ಅಂಥವುಗಳಿಂದ ತುಸು ದೂರವಿದ್ದಿದ್ದರೆ ವಯಸ್ಕರ ಪ್ರಮಾಣ ಪತ್ರ ಪಡೆಯಬೇಕಾಗಿರಲಿಲ್ಲ ಎಂದು ಅನಿಸದಿರದು. ಆದರೆ ಇಂಥ ಸಂದರ್ಭದಲ್ಲಿಯೂ ಪಾತ್ರವಾಗಿಯೇ ಜೀವಿಸಿದಂತೆ ಕಾಣುವವರು ಅಂದರೆ ರಮೇಶ್ ಇಂದಿರಾ. ಮಾರೇನಹಳ್ಳಿ ಮುನಿಸ್ವಾಮಿ ಎಂಬ ತಲೆ ಹಿಡುಕನಾಗಿ ಚಿತ್ರದ ಉದ್ದಕ್ಕೂ ನೆನಪಲ್ಲಿ ಉಳಿಯುವಂಥ ಅಭಿನಯ ನೀಡಿದ್ದಾರೆ.

ಶ್ರೀದೇವಿಯ ದೇಹ ಸುಖ ಬಯಸಿ ಬರುವ ಏಳು ಮಂದಿ ಕೂಡ ವೈವಿಧ್ಯಮಯವಾಗಿರುತ್ತಾರೆ. ಅದರಲ್ಲೊಬ್ಬಾಕೆ ಯುವತಿಯೂ ಇರುತ್ತಾಳೆ. ಮಂತ್ರವಾದಿಯಂತೆ ಬರುವ ಮಿತ್ರ, ಕೊನೆಯದಾಗಿ ಬರುವ ಎಟಿಎಮ್ ಸೆಕ್ಯುರಿಟಿಯಾಗಿ ಹಿರಿಯ ನಟ ಎಂ.ಎಸ್. ಉಮೇಶ್ ಅಭಿನಯಿಸಿದ್ದಾರೆ. ತನಿಖಾ ಅಧಿಕಾರಿಯಾಗಿ ಕಿಶೋರ್ ಪಾಲಿಗೆ ಇಲ್ಲಿ ಮತ್ತೊಂದು ಪೊಲೀಸ್ ಪಾತ್ರ ಲಭಿಸಿದೆ. ತನ್ನ ಮಗುವಿಗಾಗಿ ತಾಯಿ ಯಾವ ಮಟ್ಟಕ್ಕೂ ಹೋಗಬಲ್ಲಳು ಎನ್ನುವುದನ್ನು ಈ ಕಥೆ ಮತ್ತೊಮ್ಮೆ ಸಾಬೀತು ಪಡಿಸುತ್ತದೆ. ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ನಾಯಕ ಪಾನಮತ್ತನಾಗುವುದು ಸಂದರ್ಭಕ್ಕೆ ಹೆಚ್ಚು ಸಹಜತೆ ಮೂಡಿಸಲು ಸಹಕಾರಿಯಾಗಿದೆ. ಛಾಯಾಗ್ರಹಣ ಈ ಚಿತ್ರದ ಹೈಲೈಟ್. ಇದೊಂದು ಪ್ರಯೋಗಾತ್ಮಕ ಪ್ರಯತ್ನ ಎನ್ನುವುದರಲ್ಲಿ ಸಂಶಯವಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಶಶಿಕರ ಪಾತೂರು

contributor

Similar News