×
Ad

ಇಲ್ಲಿ ‘ಟೈಮ್ ಪಾಸ್’ ಮಾಡುವುದು ಕಷ್ಟವೇ!

Update: 2025-10-18 12:48 IST

ಚಿತ್ರ: ಟೈಮ್ ಪಾಸ್

ನಿರ್ದೇಶನ: ಕೆ. ಚೇತನ್ ಜೋಡಿದಾರ್

ನಿರ್ಮಾಪಕರು: ಗುಂಡೂರ್ ಶೇಖರ್,

ಕಿರಣ್ ಕುಮಾರ್ ಶೆಟ್ಟಿ ಮತ್ತು

ಎಂ.ಎಚ್. ಕೃಷ್ಣ ಮೂರ್ತಿ

ತಾರಾಗಣ: ಇಮ್ರಾನ್ ಪಾಶ, ರಾಮ್ ಮೊದಲಾದವರು.

ನಿಜ ಜೀವನದಲ್ಲಿ ಸಿನೆಮಾದವರ ಕಥೆ ಕೇಳಲು ಇರುವ ಆಸಕ್ತಿ ಇರುವವರಿದ್ದಾರೆ. ಆದರೆ ಅದನ್ನೇ ಸಿನೆಮಾವಾಗಿ ನೋಡಲು ಆಸಕ್ತಿ ತೋರಿಸುವವರು ಕಡಿಮೆ. ಅದರಲ್ಲೂ ಸಿನೆಮಾ ಮಾಡಲು ಹೊರಟಾಗ ಎದುರಾಗುವ ಗೋಳಾಟವನ್ನೇ ಪರದೆ ಮೇಲೇಯೂ ಬಡಿಸಿದರೆ ಜನ ಏನು ಮಾಡುತ್ತಾರೆ? ಟೈಮ್ ಪಾಸ್ ನೋಡಲು ಬರುವ ಪ್ರೇಕ್ಷಕರೇ ಇದಕ್ಕೆ ಉತ್ತರ ಹೇಳಬೇಕು.

ಏಳು ಸಿನೆಮಾ ಮಾಡಿದ ನಿರ್ಮಾಪಕ ಪರಮೇಶ್ವರ್ ನಷ್ಟಕ್ಕೊಳಗಾಗಿ ಬೀದಿ ಸೇರುತ್ತಾನೆ. ಈತನನ್ನು ಉದ್ಧಾರ ಮಾಡಲೆಂದೇ ಬರುವಂತೆ ನಿರ್ದೇಶನದ ಹುಚ್ಚಲ್ಲಿ ಯುವಕನೋರ್ವ ಮನೆ ಬಿಟ್ಟು ಹೊರಗೆ ಬರುತ್ತಾನೆ. ಬೇನಾಮಿಯಾಗಿ ಸೆಕ್ಸ್ ಕಥೆ ಬರೆದು ದುಡ್ಡು ಮಾಡುವ ಬರಹಗಾರನೋರ್ವ ಇವರಿಗೆ ಜೊತೆಯಾಗುತ್ತಾನೆ. ಕೊಳೆತ ಕುಂಬಳ ಕಾಯಿಗೆ ಕೆಟ್ಟು ಹೋದ ತೆಂಗಿನಕಾಯಿ ಜೋಡಿ ಎನ್ನುವ ಅರ್ಥದ ತುಳು ಗಾದೆಯಂತೆ ಈ ಜೋಡಿ ಕಾಣಿಸುತ್ತದೆ. ಅದಕ್ಕೆ ತಕ್ಕಂತೆ ಈ ಪಾತ್ರವನ್ನು ನಟಿಸಿದ ಕಲಾವಿದರ ಅಭಿನಯವೂ ಸೇರಿದೆ. ಮ್ಯಾನೇಜರ್ ಪಾತ್ರಧಾರಿ ನವೀನ್ ಮಹಾಬಲೇಶ್ ದ್ವಂದ್ವಾರ್ಥ ಪ್ರಯೋಗದ ಸಂಭಾಷಣೆಗಳೊಂದಿಗೆ ಮಧ್ಯಂತರ ಸಂಪನ್ನವಾಗುತ್ತದೆ.

ಚಿತ್ರರಂಗದಲ್ಲಿ ಏನೋ ಸಾಧನೆ ಮಾಡಬೇಕು ಎಂದು ಬರುವವರ ಕಥೆಯನ್ನು ಭಾವನಾತ್ಮಕವಾಗಿ ಹೇಳುವುದು ಜನಪ್ರಿಯ ರೀತಿ. ಆದರೆ ಈ ಸಿದ್ಧ ಸೂತ್ರವನ್ನು ಮುರಿಯುವ ರೀತಿಯಲ್ಲಿ ಹಾಸ್ಯಮಯವಾಗಿ ಚಿತ್ರಿಸಿದ್ದಾರೆ ನಿರ್ದೇಶಕ ಚೇತನ್ ಜೋಡಿದಾರ್. ಕನ್ನಡಕ್ಕೆ ಇದು ಸ್ವಲ್ಪ ಹೊಸದು ಎಂದು ಅನಿಸಿದರೂ, ದಶಕಗಳ ಹಿಂದೆಯೇ ‘ಬಾಯ್ಸ್’ ಮೂಲಕ ನಿರ್ದೇಶಕ ಶಂಕರ್ ಬಳಸಿ ಹಳಸಿದ ಶೈಲಿ ಇದು. ಅಲ್ಲಿ ಹದಿ ವಯಸ್ಸಿನ ಹುಡುಗರ ಹಸಿ ಹಸಿ ಚಿತ್ರಣಕ್ಕಾಗಿ ಅದಕ್ಕೆ ತಕ್ಕಂಥ ಸನ್ನಿವೇಶಗಳಿದ್ದವು. ಆದರೆ ಯುವಕರ, ಮಧ್ಯ ವಯಸ್ಕರ ಕತೆ ತೋರಿಸಿರುವ ಇಲ್ಲಿಯೂ ಹಾಸ್ಯಕ್ಕಾಗಿ ಅವರು ದ್ವಂದ್ವಾರ್ಥ ಪ್ರಯೋಗವನ್ನು ಆಯ್ದುಕೊಂಡಿರುವುದು ಮಾತ್ರ ವಿಪರ್ಯಾಸ. ಚಿತ್ರದಲ್ಲಿನ ಕೊಲೆ ದೃಶ್ಯದ ಹೊರತಾಗಿಯೂ ಈ ಡಬಲ್ ಮೀನಿಂಗ್ ಮತ್ತು ಹಸಿಬಿಸಿ ದೃಶ್ಯಕ್ಕಾಗಿಯೇ ಎ ಸರ್ಟಿಫಿಕೇಟ್ ನೀಡಲಾಗಿದೆಯೇನೋ ಎಂದು ಅನಿಸದೆ ಇರದು. ಕುಟುಂಬ ಸಮೇತ ನೋಡುವ ಚಿತ್ರ ಮಾಡಲ್ಲ ಎಂದು ಪಣ ತೊಟ್ಟ ಕಾರಣವೇ ಇರಬೇಕು, ಈ ಚಿತ್ರದಲ್ಲಿ ಕೌಟುಂಬಿಕ ಸನ್ನಿವೇಶಗಳಿಗೂ ಭಾವನಾತ್ಮಕ ಸ್ಪರ್ಶ ಇಲ್ಲ. ಕಥಾ ನಾಯಕಿಯನ್ನು ಚಿತ್ರದಲ್ಲಿ ನಟಿಸಲು ಒಪ್ಪಿಸುವ ಹಂತದಲ್ಲಿ ಇಡೀ ತಂಡ ಆಕೆಯ ಒಪ್ಪಿಗೆಗಾಗಿ ಮಳೆಯಲ್ಲಿ ಕಾಯುವ ದೃಶ್ಯವಂತೂ ಒಂಟಿ ಕಣ್ಣಲ್ಲಿ ನೀರು ಸುರಿಯುವಂತೆ ಮಾಡುತ್ತದೆ.

ಇಡೀ ಚಿತ್ರದಲ್ಲಿ ಛಾಯಾಗ್ರಾಹಕನ ಪಾತ್ರಧಾರಿಯ ನಟನೆ ಮತ್ತು ಸಿನೆಮಾದ ಛಾಯಾಗ್ರಹಣ ಮೆಚ್ಚುವಂತಿದೆ. ಡಿ.ಕೆ. ಸಂಗೀತದಲ್ಲಿ ಒಂದು ಹಾಡು ತಕ್ಕಮಟ್ಟಿಗೆ ಮೆಚ್ಚುವಂತೆ ಇದೆ. ಆದರೆ ಅದೇ ಹಾಡಿನಲ್ಲಿನ ಕನ್ನಡ ಉಚ್ಚಾರಣೆ ದೇವರಿಗೆ ಪ್ರೀತಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಶಿಕರ ಪಾತೂರು

contributor

Similar News