×
Ad

ಕೇಂದ್ರ ಸಚಿವ ಸುರೇಶ್ ಗೋಪಿ ಅಭಿನಯಿಸಿರುವ ‘ಜಾನಕಿ’ ಚಿತ್ರದ ಶೀರ್ಷಿಕೆಗೆ ಸಿಬಿಎಫ್‌ಸಿ ಆಕ್ಷೇಪ: ಚಿತ್ರದ ವೀಕ್ಷಣೆಗೆ ಮುಂದಾದ ಕೇರಳ ಹೈಕೋರ್ಟ್

Update: 2025-07-02 15:36 IST

ತಿರುವನಂತಪುರಂ: ಕೇಂದ್ರ ಸಚಿವ ಸುರೇಶ್ ಗೋಪಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಮಲಯಾಳಂ ಚಿತ್ರ ‘ಜೆಎಸ್‌ಕೆ: ಜಾನಕಿ vs ಸ್ಟೇಟ್ ಆಫ್ ಕೇರಳ’ದ ಶೀರ್ಷಿಕೆಗೆ ಸಂಬಂಧಿಸಿದ ವಿವಾದ ಇದೀಗ ಕಾನೂನು ಹಾದಿ ಹಿಡಿದಿದ್ದು, ಕೇರಳ ಹೈಕೋರ್ಟ್ ಚಿತ್ರವನ್ನು ವೀಕ್ಷಿಸುವ ವೀಕ್ಷಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ.

ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್ (ಸಿಬಿಎಫ್‌ಸಿ) ಎತ್ತಿದ ಆಕ್ಷೇಪಣೆಗಳ ಕುರಿತು ನಿರ್ಧಾರ ಕೈಗೊಳ್ಳುವ ಮೊದಲು, ನ್ಯಾಯಾಲಯವು ಸ್ವತಃ ಚಿತ್ರವನ್ನು ವೀಕ್ಷಿಸಲು ನಿರ್ಧರಿಸಿದೆ.

ನ್ಯಾಯಮೂರ್ತಿ ಎನ್ ನಾಗರೇಶ್ ಅವರು ಜುಲೈ 5 ರಂದು ನಿರ್ಮಾಣ ಸಂಸ್ಥೆ ಆಯ್ಕೆಮಾಡುವ ಸ್ಟುಡಿಯೋದಲ್ಲಿ ಚಿತ್ರವನ್ನು ವೀಕ್ಷಿಸಲಿದ್ದಾರೆ. ಆ ಬಳಿಕ ಚಿತ್ರ ಶೀರ್ಷಿಕೆಯಾದ ‘ಜಾನಕಿ’ ಬಗ್ಗೆ ಸಿಬಿಎಫ್‌ಸಿ ವ್ಯಕ್ತಪಡಿಸಿದ ಆಕ್ಷೇಪಣೆಗಳನ್ನು ಪರಿಗಣಿಸುವ ಕಾರ್ಯ ನಡೆಯಲಿದೆ ಎಂದು Bar and Bench ವರದಿ ಮಾಡಿದೆ.

ಈ ಚಿತ್ರವು ಅತ್ಯಾಚಾರ ಸಂತ್ರಸ್ತೆಯ ನ್ಯಾಯಕ್ಕಾಗಿ ಹೋರಾಟವನ್ನು ಕೇಂದ್ರಬಿಂದುವಾಗಿಟ್ಟುಕೊಂಡಿದ್ದು, ಚಿತ್ರದ ಪ್ರಮುಖ ಪಾತ್ರದ ಹೆಸರು ‘ಜಾನಕಿ’ ಆಗಿದೆ. ಹಿಂದೂ ಪುರಾಣದ ಮಹತ್ವಪೂರ್ಣ ಪಾತ್ರ ‘ಸೀತಾ’ ಅವರ ಮತ್ತೊಂದು ಹೆಸರು ‘ಜಾನಕಿ’ ಆಗಿರುವುದರಿಂದ, ಈ ಶೀರ್ಷಿಕೆಯು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಬಹುದು ಎಂದು ಸಿಬಿಎಫ್‌ಸಿ ಆಕ್ಷೇಪಣೆ ವ್ಯಕ್ತಪಡಿಸಿದೆ.

ಜೂನ್ 27ರಂದು ಚಿತ್ರವು ವಿಶ್ವದಾದ್ಯಂತ ಬಿಡುಗಡೆಯಾಗಬೇಕಿತ್ತು. ಹೀಗಾಗಿ, ಜೂನ್ 12 ರಂದು ನಿರ್ಮಾಣ ಸಂಸ್ಥೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರೂ, ಸಿಬಿಎಫ್‌ಸಿ ಸೆನ್ಸಾರ್ ಪ್ರಮಾಣಪತ್ರ ನೀಡುವಲ್ಲಿ ವಿಳಂಬ ಮಾಡಿತು. ಇದರಿಂದ ತೀವ್ರ ಅಸಮಾಧಾನಗೊಂಡ ನಿರ್ಮಾಪಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ನಿರ್ಮಾಣ ಸಂಸ್ಥೆ ಮೆಸ್ಸರ್ಸ್ ಕಾಸ್ಮೋಸ್ ಎಂಟರ್‌ಟೈನ್‌ಮೆಂಟ್ಸ್ ಪರ ವಾದಿಸಿದ ವಕೀಲರು, ಟೀಸರ್ ಮತ್ತು ಟ್ರೇಲರ್‌ಗಳನ್ನು ಸಿಬಿಎಫ್‌ಸಿ ಮುಂಚಿತವಾಗಿ ಅನುಮೋದಿಸಿದ್ದರೂ, ಶೀರ್ಷಿಕೆ ಮತ್ತು ಪಾತ್ರದ ಹೆಸರಿನ ವಿಚಾರದಲ್ಲಿ ಮಾತ್ರ ವಿಳಂಬ ಮಾಡುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ನಿರ್ಮಾಪಕರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸಿಬಿಎಫ್‌ ಯ ನಡೆಯು ಭಾರತೀಯ ಸಂವಿಧಾನದ 19(1)(ಎ) ಮತ್ತು 19(1)(ಜಿ) ವಿಧಿಗಳ ಅಡಿಯಲ್ಲಿ ಖಾತರಿಪಡಿಸಲಾದ ವಾಕ್‌ಸ್ವಾತಂತ್ರ್ಯ ಮತ್ತು ವೃತ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ವಾದಿಸಿದರು.

ಸಿಬಿಎಫ್‌ಸಿಯ ಪರ ವಾದ ಮಂಡಿಸಿದ ವಕೀಲ ಅಭಿನವ್ ಚಂದ್ರಚೂಡ್, ‘ಜಾನಕಿ’ ಎಂಬ ಹೆಸರನ್ನು ಲೈಂಗಿಕ ಹಿಂಸೆ ಕುರಿತ ಚಿತ್ರದಲ್ಲಿ ಬಳಸುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು ಎಂದು ತಮ್ಮ ನಿಲುವನ್ನು ತಿಳಿಸಿದರು.

ಚಿತ್ರದಲ್ಲಿ ‘ಜಾನಕಿ’ ಎಂಬ ಹೆಸರಿನ ಅತ್ಯಾಚಾರ ಸಂತ್ರಸ್ತೆಯ ಪಾತ್ರ ಇರುವುದರಿಂದ, ಹಿಂದೂ ಸಮುದಾಯದಲ್ಲಿ ಭಾವನಾತ್ಮಕ ನಂಟು ಹೊಂದಿರುವ ಹೆಸರನ್ನು ಈ ರೀತಿಯಲ್ಲಿ ಬಳಸುವುದು ಆಕ್ಷೇಪಾರ್ಹ ಎಂದು ಅವರು ಅಭಿಪ್ರಾಯಪಟ್ಟರು.

ಆದರೆ ನ್ಯಾಯಮೂರ್ತಿ ಎನ್ ನಾಗರೇಶ್ ಈ ನಿಲುವಿಗೆ ಒಪ್ಪದೆ, ಭಾರತೀಯ ಚಿತ್ರರಂಗದಲ್ಲಿ ದಶಕಗಳಿಂದ ಹಲವು ಧಾರ್ಮಿಕ ಹೆಸರುಗಳನ್ನು ಚಲನಚಿತ್ರ ಶೀರ್ಷಿಕೆಗಳಲ್ಲಿ ಮತ್ತು ಪಾತ್ರಗಳಲ್ಲಿ ಬಳಸಿರುವ ಪರಂಪರೆ ಇದೆ ಎಂದು ಉಲ್ಲೇಖಿಸಿದರು.

ನ್ಯಾಯಾಲಯವು ಸಿಬಿಎಫ್‌ಸಿಗೆ ತಮ್ಮ ನಿರ್ಧಾರಕ್ಕೆ ಸೂಕ್ತ ಕಾರಣಗಳನ್ನು ವಿವರಿಸುವಂತೆ ಸೂಚನೆ ನೀಡಿದೆ. ಇದರ ಜೊತೆಗೆ ಡೆಪ್ಯೂಟಿ ಸಾಲಿಸಿಟರ್ ಜನರಲ್ ಅವರು ವಿವರವಾದ ಪ್ರತಿಕ್ರಿಯೆ ಸಲ್ಲಿಸಲು ಸೂಚನೆ ನೀಡಿತು.

ಸಿಬಿಎಫ್‌ಸಿ ಪರವಾಗಿ ವಕೀಲ ಅಭಿನವ್ ಚಂದ್ರಚೂಡ್ ಅವರು ನ್ಯಾಯಾಲಯದಲ್ಲಿ ಹಾಜರಿದ್ದು, ಹೆಚ್ಚಿನ ಸಮಯ ಕೋರಿ ಮನವಿ ಸಲ್ಲಿಸಿದರು. ಜುಲೈ 5 ರಂದು ನ್ಯಾಯಾಲಯವು ಚಿತ್ರ ವೀಕ್ಷಣೆ ನಡೆಸಲಿದ್ದು, ಬಳಿಕ ಜುಲೈ 9 ರಂದು ಮುಂದಿನ ವಿಚಾರಣೆ ನಡೆಯಲಿದೆ.

ನಿರ್ಮಾಪಕರ ಪರವಾಗಿ ವಕೀಲರಾದ ಆನಂದ್ ಬಿ ಮೆನನ್, ಹ್ಯಾರಿಸ್ ಬೀರನ್, ಅಝರ್ ಅಸ್ಸೀಸ್ ಮತ್ತು ನಬಿಲ್ ಖಾದರ್ ವಾದ ಮಂಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News