×
Ad

ನೋಡಿ.. ಈ ‘ಸ್ವಾಮಿ’ ಇರೋದೇ ಹೀಗೇ..!

Update: 2025-08-30 12:53 IST

ಚಿತ್ರ: ರಿಪ್ಪನ್ ಸ್ವಾಮಿ

ನಿರ್ದೇಶನ: ಕಿಶೋರ್ ಮೂಡುಬಿದಿರೆ

ನಿರ್ಮಾಣ: ಪಂಚಾನನ ಫಿಲ್ಮ್ಸ್

ತಾರಾಗಣ: ವಿಜಯ ರಾಘವೇಂದ್ರ, ಅಶ್ವಿನಿ ಚಂದ್ರಶೇಖರ್

ಮೊದಲಾದವರು.

ರಿಪ್ಪನ್ ಸ್ವಾಮಿ ಎನ್ನುವ ಹೆಸರು ಕೇಳಿದರೆ ಎಂಭತ್ತರ ದಶಕದಲ್ಲಿ ಕರುನಾಡ ಕರಾವಳಿ, ಮಲೆನಾಡನ್ನು ನಡುಗಿಸಿದ ರಿಪ್ಪರ್ ಚಂದ್ರನ ನೆನಪಾಗುವುದು ಸಹಜ. ಹಾಗೆಂದು ಆತನಿಗೂ ಈ ಚಿತ್ರಕ್ಕೂ ಯಾವ ಸಂಬಂಧವೂ ಇಲ್ಲ. ಆದರೆ ಆ ಡಕಾಯಿತನಷ್ಟೇ ಕ್ರೌರ್ಯ ತುಂಬಿದ ಕೌಟುಂಬಿಕ ವ್ಯಕ್ತಿಯೋರ್ವನಾಗಿ ರಿಪ್ಪನ್ ಸ್ವಾಮಿಯ ಪಾತ್ರವಿದೆ.

ಬಾಚಣಿಗೆ ಕಾಣದ ತಲೆಗೂದಲು, ಇಸ್ತ್ರಿ ಕಾಣದ ಬಟ್ಟೆ, ಎಲ್ಲಕ್ಕಿಂತ ಮುಖ್ಯವಾಗಿ ದ್ವೇಷದ ಹೊರತು ಮತ್ತೊಂದು ಭಾವವನ್ನೇ ಹೊರಸೂಸದ ಮುಖ..! ಬಹುಶಃ ವಿಜಯ ರಾಘವೇಂದ್ರ ಇಂಥದೊಂದು ನೆಗೆಟಿವ್ ಶೇಡ್ ಪಾತ್ರ ಮಾಡಬಲ್ಲರು ಎಂದು ಊಹಿಸುವುದು ಕೂಡ ಕಷ್ಟ. ಆದರೆ ಪರದೆ ಮೇಲೆ ಎಂಟ್ರಿ ಕೊಟ್ಟ ಕೆಲವೇ ಕ್ಷಣಗಳಲ್ಲಿ ಚಿನ್ನಾರಿ ಮುತ್ತ ಮರೆಯಾಗುತ್ತಾನೆ. ನೋಡಿ ನಾನು ‘ಸ್ವಾಮಿ’ ಅಷ್ಟೇ ಎಂದು ಮನದೊಳಗೆ ಸೇರಿಕೊಳ್ಳುತ್ತಾರೆ. ವರ್ಸಟೇಲ್ ಸ್ಟಾರ್ ವಿಜಯರಾಘವೇಂದ್ರ. ಪಾತ್ರಕ್ಕಾಗಿ ಮೈ ಹುರಿಗೊಳಿಸಿರುವಲ್ಲಿಂದ ಧ್ವನಿ ಬದಲಾವಣೆ ತನಕ ಈ ಕಲಾವಿದನ ಅರ್ಪಣಾಭಾವ ಎದ್ದು ಕಾಣುತ್ತದೆ.

ಸ್ವಾಮಿ ಬೃಹತ್ ಎಸ್ಟೇಟ್‌ಗೆ ಒಡೆಯ. ತನಗೆ ಎದುರಾದವರನ್ನು ಬಡಿದು ಬದಿಗಿರಿಸುವುದರಲ್ಲಿ ಎತ್ತಿದ ಕೈ. ರಿಪ್ಪನ್ ಎನ್ನುವ ರೌಡಿಯನ್ನು ಹೊಡೆದೋಡಿಸಿದ ಬಳಿಕವೇ ಸ್ವಾಮಿ ಹೆಸರಿನೊಂದಿಗೆ ರಿಪ್ಪನ್ ಸೇರಿಕೊಂಡಿರುತ್ತದೆ. ಮಾಂಸಕ್ಕಾಗಿ ಹಂದಿ ಸಾಕಣೆ ಮಾಡುವುದು ಈತನ ವೃತ್ತಿ. ಬೇಟೆಗಿಳಿದರೆ ಹಂದಿಗೂ ಮನುಷ್ಯನಿಗೆ ವ್ಯತ್ಯಾಸವೇ ಇರದಂಥ ಪ್ರವೃತ್ತಿ. ವಿಜಯರಾಘವೇಂದ್ರರ ವೃತ್ತಿ ಬದುಕಿನಲ್ಲೇ ಇಂಥದೊಂದು ಪಾತ್ರ ಹೊಸ ಆಯಾಮ. ಇತ್ತೀಚೆಗೆ ಸಸ್ಪೆನ್ಸ್ ಥ್ರಿಲ್ಲರ್, ಆ್ಯಕ್ಷನ್ ಕಡೆಗೆ ಮುಖಮಾಡಿರುವ ಇವರ ಹಿಂದಿನ ಎಲ್ಲ ಸಿನೆಮಾಗಳ ಹ್ಯಾಂಗೋವರ್ ಮರೆಸುವಂಥ ಪಾತ್ರ ಇದು. ಬಾಲ್ಯದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಈ ನಟನ ವೈವಿಧ್ಯಮಯ ಪ್ರತಿಭೆಗೆ ನಿರ್ದೇಶಕ ಕಿಶೋರ್ ರಿಪ್ಪನ್ ಸ್ವಾಮಿ ಮೂಲಕ ಕನ್ನಡಿಯಾಗಿದ್ದಾರೆ.

ಪೂರ್ತಿ ಚಿತ್ರ ಸ್ವಾಮಿಯ ಸುತ್ತಲೇ ಗಿರಕಿ ಹೊಡೆಯುತ್ತದೆ. ಆದರೆ ಅಲ್ಲಲ್ಲೇ ಕಾಣಿಸುವ ಸ್ವಾಮಿ ಪತ್ನಿ ಮಂಗಳಾ ದೃಶ್ಯದಿಂದ ದೃಶ್ಯಕ್ಕೆ ಬೆಳೆಯುತ್ತಾ ಹೋಗುತ್ತಾಳೆ. ಕಟುಕನ ಮನೆಯಲ್ಲಿನ ಗಿಣಿಯಂತೆ ಕಾಣಿಸುವ ಮಂಗಳಾ ಪಾತ್ರಕ್ಕೆ ನಟಿ ಅಶ್ವಿನಿ ಚಂದ್ರಶೇಖರ್ ಜೀವ ತುಂಬಿದ್ದಾರೆ. ಒಂದೆಡೆ ಸುಕ್ಕುಗೊಂಡ ಬಟ್ಟೆಯಲ್ಲೇ ಊರಿಡೀ ಓಡಾಡುವ ರಿಪ್ಪನ್ ಸ್ವಾಮಿ. ಮತ್ತೊಂದೆಡೆ ಮನೆಯಲ್ಲೇ ಜರತಾರಿ ಸೀರೆಯುಟ್ಟು ಕಾಣಿಸುವ ಪತ್ನಿ! ಇಂಥದೊಂದು ವಿಚಿತ್ರ ಜೋಡಿಗೆ ಕಾರಣವಾದ ಅಂಶ ಕೊನೆಯಲ್ಲಿ ಅನಾವರಣಗೊಳ್ಳುತ್ತದೆ. ಸ್ವಾಮಿಯದು ಭಾವರಹಿತ ನೋಟ. ಈಕೆಯದು ಕಣ್ಣೋಟದಲ್ಲೇ ಪ್ರೀತಿ, ಪ್ರೇಮ, ನವರಸಗಳ ಆಟ. ಸ್ವಾಮಿ ಪತ್ನಿ ಸ್ವಾಮಿನಿಷ್ಠಳೇನಾ? ಎನ್ನುವುದಕ್ಕೆ ಉತ್ತರ ಸಿಗಬೇಕಾದರೆ ಕ್ಲೈಮ್ಯಾಕ್ಸ್ ತನಕ ಕಾಯಬೇಕು. ಕಥೆಗೆ ಮಂಗಳ ಹಾಡಬಲ್ಲಂಥ ಪಾತ್ರವನ್ನು ಅಶ್ವಿನಿ ಅದ್ಭುತವಾಗಿಯೇ ನಿಭಾಯಿಸಿದ್ದಾರೆ.

ಇದು ಸಂಪೂರ್ಣವಾಗಿ ಮಲೆನಾಡು ಭಾಗದಲ್ಲಿ ನಡೆಯುವ ಕಥೆ. ಹೀಗಾಗಿ ಮಂಗಳೂರು ಕನ್ನಡವನ್ನು ನೆನಪಿಸುವ ಸಂಭಾಷಣೆಗಳಿವೆ. ಹೆಚ್ಚಿನ ಪಾತ್ರಗಳನ್ನು ಮಂಗಳೂರು ಕರಾವಳಿಯ ಕಲಾವಿದರೇ ನಿಭಾಯಿಸಿದ್ದಾರೆ. ಸ್ವಾಮಿ ಮನೆಯ ಕೆಲಸಗಾರರು ಅದರಲ್ಲೂ ಪ್ರಕಾಶ್ ತೂಮಿನಾಡು ಪ್ರೇಕ್ಷಕರಲ್ಲಿ ನಗು ಮೂಡಿಸುತ್ತಾರೆ. ಸ್ವಾಮಿ ಸಹಚರ ಸಂತೋಷನಾಗಿ ಸಂತೋಷ್ ಶೆಟ್ಟಿ, ಸಂತೋಷ್ ತಾಯಿ ಪಾತ್ರದಲ್ಲಿ ಯಮುನಾ ಶ್ರೀನಿಧಿ, ಮಹಿಳಾ ಪೊಲೀಸ್ ಅಧಿಕಾರಿಯಾಗಿ ಅನುಷ್ಕಾ, ಪಿ.ಸಿ. ದೇಜಣ್ಣನಾಗಿ ರಂಗನಟ ಕೃಷ್ಣಮೂರ್ತಿ ಕವತ್ತಾರು, ಸಮವಸ್ತ್ರ ಧರಿಸದೆಯೂ ಪೊಲೀಸ್‌ನಂತೆ ಕಾಣಿಸುವ ಆನಂದನಾಗಿ ವಜ್ರಧೀರ್ ಜೈನ್ ಸೇರಿದಂತೆ ಪಾತ್ರಧಾರಿಗಳ ಆಯ್ಕೆ ಮಾದರಿಯನ್ನು ಮೆಚ್ಚಲೇಬೇಕು.

ಜನಪದ ಶೈಲಿಯ ಗೀತೆ ಸೇರಿದಂತೆ ಚಿತ್ರದಲ್ಲಿನ ಹಾಡುಗಳು ಪರಿಣಾಮ ಬೀರುವುದಿಲ್ಲ. ಆದರೆ ಹಲವೆಡೆಗಳಲ್ಲಿ ಸ್ಯಾಮುಯೆಲ್ ನೀಡಿರುವ ಹಿನ್ನೆಲೆ ಸಂಗೀತ ಪ್ರಶಂಸಾತ್ಮಕವಾಗಿದೆ. ಮಾಸ್ ಮಾದ ನಿರ್ದೇಶನದಲ್ಲಿ ಸಹಜ ಮಾದರಿ ಹೊಡೆದಾಟಕ್ಕೆ ರಂಗನಾಥ್ ಛಾಯಾಗ್ರಹಣ ಆಕರ್ಷಕ ಜೊತೆ ನೀಡಿದೆ. ಒಂದಿಡೀ ಊರಿನ ಮಂದಿಯನ್ನೆಲ್ಲ ಆ ಪ್ರದೇಶಕ್ಕೆ ಹೊಂದಿಕೊಳ್ಳುವಂಥ ವಸ್ತ್ರಶೈಲಿಯಲ್ಲಿ ತೋರಿಸಿರುವ ಕೀರ್ತಿ ವಸ್ತ್ರ ವಿನ್ಯಾಸಕಿ ಶಿಲ್ಪಾ ಹೆಗ್ಡೆಗೆ ಸಲ್ಲುತ್ತದೆ.

ಚಿತ್ರಕಥೆಯನ್ನು ವಿಭಿನ್ನವಾಗಿ ಕಟ್ಟಿಕೊಡುವ ಕಿಶೋರ್ ಮೂಡುಬಿದಿರೆ ಪ್ರಯತ್ನ ಯಶಸ್ವಿಯಾಗಿದೆ. ಆದರೆ ಒಂದಷ್ಟು ಕಣ್ತಪ್ಪುಗಳು ಕೂಡ ನುಸುಳಿದಂತಿವೆ. ಕುಪ್ಪು ಎನ್ನುವಾತ ಸ್ವಾಮಿಯ ಬಾಳೆ ತೋಟ ಕಡಿದಿರುವ ಸಮಯ ರಾತ್ರಿ ಹೊತ್ತು ಎನ್ನುವುದು ಸಂಭಾಷಣೆಗಳಲ್ಲಿದೆ. ಆದರೆ ದೃಶ್ಯದಲ್ಲಿ ಹಗಲು ಹೊತ್ತಿನಲ್ಲಿ ಕಡಿಯುವುದನ್ನು ತೋರಿಸಲಾಗಿದೆ.

ಸ್ವಾಮಿ ರಕ್ತ ಕಾರಿಕೊಳ್ಳುವ ದೃಶ್ಯವೊಂದರಲ್ಲಿ ತುಟಿಗಳಲ್ಲಷ್ಟೇ ರಕ್ತ ಕಾಣಿಸುತ್ತದೆ. ಬಾಯಿ ತೊಳೆದ ಬಳಿಕ ಪದೇ ಪದೇ ಕುಸಿದರೂ ಕೂಡ ಬಾಯೊಳಗೆ ತುಸು ರಕ್ತದ ಅಂಶವೂ ಕಾಣದು. ಬರೀ ತುಟಿಗೆ ಏಟಾದಂತೆ ಕಂಡಿರುವುದು ದೃಶ್ಯದ ಗಂಭೀರತೆಗೆ ಸವಾಲಾಗಿದೆ.

ಮಾತ್ರವಲ್ಲ, ಕ್ಲೈಮ್ಯಾಕ್ಸ್‌ನಲ್ಲಿನ ತಿರುವುಗಳು ಒಂದಷ್ಟು ಎಳೆದಾಡಿದಂತೆ ಅನಿಸದಿರದು. ಅಷ್ಟರಲ್ಲಾಗಲೇ ಚಿತ್ರದ ನಾಯಕ ಮತ್ತು ನಾಯಕಿ ಎರಡೂ ಪಾತ್ರಗಳ ಸ್ವಭಾವ ಅನಾವರಣಗೊಂಡಿರುತ್ತದೆ. ನಾಗರಿಕ ಪ್ರೇಕ್ಷಕರ ದೃಷ್ಟಿಯಲ್ಲಿ ಅವರಿಬ್ಬರ ಕುರಿತಾದ ಯಾವ ಸಮರ್ಥನೆಯೂ ಭಾವನಾತ್ಮಕ ಅನಿಸದು. ಹೇಗೂ ತನಿಖೆ ಪೂರ್ತಿಯಾಗದ ಪ್ರಕರಣದಲ್ಲಿ ಪೊಲೀಸ್ ಹೇಳಿಕೆಗಳು ಕೂಡ ಅಪ್ರಸ್ತುತವಾಗಿಯೇ ಕಾಣುತ್ತವೆ. ಆದರೆ ಕನ್ನಡದ ಮಟ್ಟಿಗೆ ಈ ಸಿನೆಮಾ ಒಂದೊಳ್ಳೆಯ ಪ್ರಯತ್ನ. ಹೀಗಾಗಿ ಇವೆಲ್ಲ ದೊಡ್ಡ ಕುಂದಾಗಿ ಕಾಣುವುದಿಲ್ಲ.

ಹೊರಗೆ ಪ್ರಕೃತಿ ರಮಣೀಯವೆನಿಸುವ ಎಸ್ಟೇಟ್ ಒಂದರ ಒಳಗೆ ಎಷ್ಟೆಲ್ಲ ಕ್ರೌರ್ಯ ಇರಬಹುದೆನ್ನುವುದನ್ನು ಇಲ್ಲಿ ಬಹಿರಂಗಗೊಳಿಸಲಾಗಿದೆ. ಇತ್ತೀಚೆಗೆ ಕನ್ನಡದಲ್ಲಿ ಮಲಯಾಳಂ ಛಾಯೆಯ ವೈವಿಧ್ಯಮಯ ಚಿತ್ರಗಳು ಸೆಳೆಯುತ್ತಿವೆ. ‘ದೃಶ್ಯಂ’ ಮತ್ತು ‘ಜೋಜಿ’ ಸಿನೆಮಾಗಳ ಶೈಲಿಯಲ್ಲಿರುವ ನಿರ್ದೇಶಕರ ಈ ಪ್ರಯತ್ನ ಕೂಡ ಪ್ರೇಕ್ಷಕರನ್ನು ಗೆದ್ದರೆ ಅಚ್ಚರಿ ಇಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಶಿಕರ ಪಾತೂರು

contributor

Similar News