×
Ad

'ಜಂಗಲ್ ಮಂಗಲ್' | ಕಾಡಿನ ನಡುವೆ ಪ್ರಕೃತಿ ಕಲಿಸುವ ಪಾಠ !

Update: 2025-07-06 10:20 IST

ಚಿತ್ರ: ಜಂಗಲ್ ಮಂಗಲ್

ನಿರ್ದೇಶನ: ರಕ್ಷಿತ್ ಕುಮಾರ್ ರೈ

ನಿರ್ಮಾಣ: ಸಹ್ಯಾದ್ರಿ ಸ್ಟುಡಿಯೋಸ್

ತಾರಾಗಣ: ಯಶ್ ಶೆಟ್ಟಿ, ಹರ್ಷಿತಾ ರಾಮಚಂದ್ರ

ಯುವಕ ಯುವತಿ ಬೈಕ್ನಲ್ಲಿ ಕಾಡು ಸೇರುವುದು ಮತ್ತು ಅವರನ್ನು ಪತ್ತೆ ಮಾಡಲು ಊರಿನ ಜನ ಬೆನ್ನು ಬೀಳುವುದು ಇದು ಚಿತ್ರದ ಟ್ರೈಲರ್ನಲ್ಲಿ ಕಂಡ ದೃಶ್ಯ. ಆದರೆ ಸಿನಿಮಾ ಇದರಾಚೆಗಿನ ಬೇರೆಯೇ ಒಂದು ರೋಮಾಂಚಕಾರಿ ಕಥೆಯನ್ನು ತೆರೆದಿಡುತ್ತದೆ.

ಇದು 2020ರ ಕೊರೊನಾ ಕಾಲದಲ್ಲಿ ನಡೆಯುವ ಕಥೆ. ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂಥ ಊರೊಂದರಲ್ಲಿ ನಡೆಯುವ ಕಥೆ. ಕಲ್ಲುಗುಂಡಿ ಪ್ರವೀಣ ಮತ್ತು ಆತನ ಪ್ರೇಯಸಿ ದಿವ್ಯಾ ನಡೆಸುವ ಮಾತುಕತೆಯೊಂದಿಗೆ ಚಿತ್ರ ಶುರುವಾಗುತ್ತದೆ. ಅವರಿಬ್ಬರೂ ಪ್ರೇಮಿಗಳು. ಪ್ರವೀಣನ ಒತ್ತಾಯಕ್ಕೆ ಕಟ್ಟು ಬಿದ್ದು ದಿವ್ಯಾ ಊರಾಚೆಯ ಕಾಡಿನಲ್ಲಿ ಭೇಟಿಯಾಗಲು ಒಪ್ಪುತ್ತಾಳೆ. ಕಾಡಿನ ನಡುವೆ ಒಂದು ಸರೋವರದ ಪಕ್ಕ ಕುಳಿತುಕೊಳ್ಳುವ ಜೋಡಿಗಳು ಎದುರಿಸುವ ಸಮಸ್ಯೆಗಳಲ್ಲೇ ಚಿತ್ರ ಮಧ್ಯಂತರ ತಲುಪುತ್ತದೆ.

ಆದರೆ ಈ ಚಿತ್ರ ಜೋಡಿ ಪ್ರೇಮಿಗಳ ಕಥೆಗಷ್ಟೇ ಸೀಮಿತವಾಗಿಲ್ಲ. ಅದೊಂದು ನಿಮಿತ್ತ ಮಾತ್ರ. ಆದರೆ ಅದರ ಹಿನ್ನೆಲೆಯಲ್ಲೇ ಒಂದು ಕೌಟುಂಬಿಕ ಹಾಗೂ ಸಾಮಾಜಿಕ ಕಥೆಯನ್ನು ತೆರೆದಿಡಲಾಗಿದೆ. ಅಂಗನವಾಡಿ ಶಿಕ್ಷಕಿಯಾಗಿರುವ ದಿವ್ಯಾಳದ್ದು ತೀರ ಬಡ ಕುಟುಂಬ. ಮನೆಯಲ್ಲಿರುವ ತಾಯಿ, ಇಬ್ಬರು ತಂಗಿಯರು ಮತ್ತು ಕುಡುಕ ತಂದೆಯ ಜವಾಬ್ದಾರಿ ಈಕೆಯದ್ದೇ ಆಗಿರುತ್ತದೆ. ಪ್ರಿಯಕರ ಕಲ್ಲುಗುಂಡಿ ಪ್ರವೀಣ ಆಗಷ್ಟೇ ಶುರುಮಾಡಿದ್ದ ಐಸ್ ಕ್ರೀಮ್ ಉದ್ಯಮಕ್ಕೆ ಕೊರೊನಾ ಮತ್ತು ಲಾಕ್ಡೌನ್ ಬರೆ ಎಳೆದಿರುತ್ತದೆ. ಮತ್ತೊಂದೆಡೆ ದಿವ್ಯಾಳ ಮಾವ ಮತ್ತು ಬಾಬು ಎನ್ನುವ ದಂಧಕೋರನ ಮಧ್ಯೆ ಹೊಡೆದಾಟ ನಡೆದಿರುತ್ತದೆ. ಈ ಪಾತ್ರಗಳಿಗೆ ಇದರಾಚೆಗೆ ಕೂಡ ಸಾಕಷ್ಟು ತಿರುವುಗಳಿವೆ. ಆದರೆ ಅವೆಲ್ಲವನ್ನೂ ಪರದೆಯ ಮೇಲೆ ನೋಡಿ ಅರಗಿಸಿಕೊಳ್ಳುವುದೇ ಸೊಗಸು.

ಯಶ್ ಶೆಟ್ಟಿ ಇದುವರೆಗೆ ಖಳನಾಗಿ ಕಾಣಿಸಿದ್ದೇ ಹೆಚ್ಚು. ಆದರೆ ಆ ಇಮೇಜ್ ಸಂಪೂರ್ಣವಾಗಿ ಮರೆಯುವಂತೆ ಮುಗ್ದ ಪ್ರೇಮಿ ಕಲ್ಲುಗುಂಡಿ ಪ್ರವೀಣನ ಪಾತ್ರಕ್ಕೆ ಜೀವನೀಡಿ ಸೈ ಎನಿಸಿದ್ದಾರೆ. ನಾಯಕಿ ದಿವ್ಯಾಳಾಗಿ ಹರ್ಷಿತಾ ರಾಮಚಂದ್ರ ಪ್ರಥಮ ಚಿತ್ರದಲ್ಲೇ ಪಕ್ಕದ ಗ್ರಾಮದ ಹುಡುಗಿಯಾಗಿದ್ದಾರೆ. ನಿರ್ದೇಶಕ ರಕ್ಷಿತ್ ಕುಮಾರ್ ರೈಗೆ ಇದು ಮೊದಲ ಚಿತ್ರ. ಆದರೆ ಅಂಥದ್ದೊಂದು ಸಣ್ಣ ಸುಳಿವನ್ನೂ ಕೊಡದಂತೆ ಶುದ್ಧ ಮಲಯಾಳಂ ಶೈಲಿಯಲ್ಲಿ ಕರಾವಳಿಯ ಕಥೆ ನೀಡಿದ್ದಾರೆ. ಪುಟ್ಟ ಮಗುವಿನಿಂದಲೂ ನಟನೆ ಹೊರತೆಗೆದಿರುವ ರೀತಿ ಅಮೋಘ.

ಇದು ಒಂದೂವರೆ ಗಂಟೆ ಕಾಲಾವಧಿಯ ಚಿತ್ರ. ಕೇವಲ ತೊಂಬತ್ತೆರಡು ನಿಮಿಷಗಳಲ್ಲಿ ನಿಮ್ಮನ್ನು ಸಿನಿಮಾ ಪರಿಸರದ ಭಾಗವಾಗಿಸುವಲ್ಲಿ ಚಿತ್ರತಂಡ ಗೆದ್ದಿದೆ. ಪ್ರಕೃತಿ ಮತ್ತು ಮನೆಗಳನ್ನು ಯಥಾವಾತ್ತಾಗಿ ತೋರಿಸಿರುವುದಕ್ಕಾಗಿಯೇ ವರದರಾಜ್ ಕಾಮತ್ ಕಲಾ ನಿರ್ದೇಶನವನ್ನು ಮೆಚ್ಚಬೇಕು. ಒಂದೇ ಘಟನೆಯನ್ನು ಬೇರೆ ಬೇರೆ ಪಾತ್ರಗಳ ದೃಷ್ಟಿಕೋನದಲ್ಲಿ ತೋರಿಸುವಾಗ ಕಥೆಯಲ್ಲಿ ಹೊಸ ಹೊಸ ತಿರುವುಗಳು ಸೃಷ್ಟಿಯಾಗಿ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತದೆ. ಅಶ್ಲೀಲತೆ, ಐಟಂ ಸಾಂಗ್, ದ್ವಂದ್ವಾರ್ಥ ಪದ ಪ್ರಯೋಗಗಳಿಂದ ದೂರವಾಗಿರುವ ಚಿತ್ರ ಅದೇ ಕಾರಣಕ್ಕೆ ಪ್ರಶಂಸೆಗೆ ಪಾತ್ರವಾಗುತ್ತದೆ.

ಸಾಮಾಜಿಕ ಜಾಲತಾಣದ ಯುವಕರ ಭಾಷೆಯಲ್ಲಿ ಜಂಗಲ್ ಮಂಗಲ್ ಎನ್ನುವುದಕ್ಕೊಂದು ಪ್ರತ್ಯೇಕ ಅರ್ಥವಿದೆ. ತಮ್ಮ ಬಯಕೆ ತೀರಿಸಲು ಕೆಲವು ಯುವಕ ಯುವತಿಯರು ಪೊದೆ, ಕಾಡು ಸೇರುತ್ತಾರೆ. ಇಂಥವರು ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದರೆ ಆ ದೃಶ್ಯಗಳನ್ನು ಜಂಗಲ್ ಮಂಗಲ್ ಹ್ಯಾಶ್ ಟ್ಯಾಗ್ ನಲ್ಲಿ ತಂದು ಹಾಕುತ್ತಾರೆ. ಈ ಸಿನಿಮಾದ ಟ್ರೇಲರ್ ಕೂಡ ಇದು ಅಂಥದೇ ಕಥೆ ಹೇಳುವ ಸಿನಿಮಾ ಎನ್ನುವ ಸೂಚನೆ ನೀಡಿತ್ತು. ಆದರೆ ಚಿತ್ರಮಂದಿರಕ್ಕೆ ಹೋಗಿ ನೋಡಿದರೆ ಅದ್ಯಾವುದೂ ಅಲ್ಲದ ಹೊಸ ಕಥೆಯೊಂದು ತೆರೆದುಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಶಿಕರ ಪಾತೂರು

contributor

Similar News