×
Ad

‘ಸು ಫ್ರಮ್ ಸೋ’: ಹಾಸ್ಯದ ಕಡಲಲ್ಲಿ ದೆವ್ವದ ಒಡಲು!

ಚಿತ್ರ: ಸು ಫ್ರಮ್ ಸೋ ನಿರ್ದೇಶನ: ಜೆ.ಪಿ. ತೂಮಿನಾಡ್ ನಿರ್ಮಾಣ: ಲೈಟರ್ ಬುದ್ಧ ಫಿಲ್ಮ್ಸ್ ತಾರಾಗಣ: ಶಾನಿಲ್ ಗುರು, ರಾಜ್ ಬಿ. ಶೆಟ್ಟಿ ಮತ್ತು ಜೆ.ಪಿ. ತೂಮಿನಾಡ್ ಮೊದಲಾದವರು

Update: 2025-07-26 12:08 IST

ಪ್ರಥಮ ದೃಶ್ಯದಿಂದಲೇ ಕುತೂಹಲ ಮೂಡಿಸುವ ಚಿತ್ರ. ಆದರೆ ಆ ದೃಶ್ಯದ ಹಿನ್ನೆಲೆ ಶುರುವಾಗುವ ಹೊತ್ತಿಗೆ ನಾವು ಸು ಫ್ರಮ್ ಸೋ ಚಿತ್ರದೊಳಗೆ ಮುಳುಗಿರುತ್ತೇವೆ. ನೈಜ ಹಾಸ್ಯದ ಜೊತೆಯಲ್ಲೇ ಸಾಮಾಜಿಕ ಸಂದೇಶವನ್ನು ಕೂಡ ಸಾರುವ ಸಿನೆಮಾ ಇದು.

ಅದು ಮಂಗಳೂರು ಕರಾವಳಿಯ ಒಂದು ಊರು. ಹೆಸರು ಮರ್ಲೂರು. ರವಿಯಣ್ಣ ಆ ಊರಿನ ಓರ್ವ ಸಾಧಾರಣ ಮೇಸ್ತ್ರಿ ಕೆಲಸಗಾರ. ಆದರೆ ಎಲ್ಲ ವಿಚಾರಗಳಲ್ಲೂ ಊರಿನ ಮುಖಂಡನಂತೆ ಇರುವವನು. ಯಾರದೇ ಮನೆಯಲ್ಲಿ ಏನೇ ನಡೆದರೂ ಆ ಮನೆಯವರಿಗಿಂತಲೂ ಹೆಚ್ಚು ಪ್ರಾಶಸ್ತ್ಯ ಪಡೆಯಬಲ್ಲ ವ್ಯಕ್ತಿ. ಯುವಕರ ತಲೆಗೂ ಮೊಟಕಿ ಬುದ್ಧಿ ಹೇಳಬಲ್ಲಂಥ ಶಕ್ತಿ. ಮದುವೆ ವಯಸ್ಸು ದಾಟಿದರೂ ಇನ್ನೂ ಅವಿವಾಹಿತ. ಇಂಥ ರವಿಯಣ್ಣನ ಕಪಾಳಕ್ಕೆ ಅಶೋಕ ಎನ್ನುವ ಯುವಕ ಹೊಡೆದು ಬಿಡುತ್ತಾನೆ. ಹಾಗಂತ ಇದು ಇಬ್ಬರ ನಡುವಿನ ಜಿದ್ದಾಜಿದ್ದಿಯ ಕಥೆ ಏನಲ್ಲ. ಆದರೆ ಅಶೋಕನ ಹೊಡೆತದ ಹಿನ್ನೆಲೆಯನ್ನು ಪರದೆ ಮೇಲೆ ಮೂಡಿಸಿರುವ ರೀತಿ ಮಾತ್ರ ಅದ್ಭುತ. ಭೂತ ಮತ್ತು ವರ್ತಮಾನವನ್ನು ಸೇರಿಸುವ ರಸಮಯ ದೆವ್ವದ ಕಥೆ ಇದು.

ಚಿತ್ರದ ಕೇಂದ್ರಪಾತ್ರ ರವಿಯಣ್ಣನಾಗಿ ಶನೀಲ್ ಗೌತಮ್ ತನ್ನ ನಟನೆ ಮತ್ತು ಆಕಾರದ ಮೂಲಕ ಅಕ್ಷರಶಃ ಪರದೆ ತುಂಬಿದ್ದಾರೆ. ಮತ್ತೊಂದು ಪ್ರಮುಖ ಪಾತ್ರವಾದ ಅಶೋಕನಾಗಿ ಖುದ್ದು ನಿರ್ದೇಶಕ ಜೆ.ಪಿ. ತೂಮಿನಾಡು ಕಾಣಿಸಿದ್ದಾರೆ. ಅದರಲ್ಲೂ ಚೊಚ್ಚಲ ನಿರ್ದೇಶನದಲ್ಲೇ ಅಚ್ಚರಿಗೊಳ್ಳುವಂಥ ಚಿತ್ರ ನೀಡಿದ್ದಾರೆ. ರವಿಯಣ್ಣನ ಬಲಗೈ ಬಂಟ ಸತೀಶನಾಗಿ ದೀಪಕ್ ಪಾಣಾಜೆ, ರಿಕ್ಷಾ ಚಂದ್ರನಾಗಿ ಪ್ರಕಾಶ್ ತೂಮಿನಾಡ್ ತಮ್ಮ ಜನಪ್ರಿಯತೆಯನ್ನು ಇಲ್ಲಿಯೂ ಉಳಿಸಿಕೊಂಡಿದ್ದಾರೆ. ಪುಷ್ಪರಾಜ್ ಬೋಳಾರ್ ಹಾಸ್ಯಪಾತ್ರದ ಎಂಟ್ರಿಯ ವೇಳೆ ‘ಬಂದರೋ ಭಾವ ಬಂದರೋ’ ಎನ್ನುವ ಪಲ್ಲವಿ ನೀಡಿರುವುದು ತಾಜಾತನದಿಂದಲೇ ನಗಿಸುತ್ತದೆ.

ಸನ್ನಿವೇಶಕ್ಕೆ ಹೊಂದಿಕೊಂಡಂಥ ತುಳುನಾಡಿನ ಆಹಾರ, ಆಚಾರಗಳಿಗೆ ಕನ್ನಡಿ ಹಿಡಿಯಲಾಗಿದೆ. ಛಾಯಾಗ್ರಹಣ, ಕಲರ್ ಟೋನ್, ಕಲಾ ನಿರ್ದೇಶನ, ಸಂಗೀತ, ಮಂಗಳೂರಿನ ತುಳು ಮಿಶ್ರಿತ ಸಂಭಾಷಣೆ ಎಲ್ಲವೂ ಚಿತ್ರಕ್ಕೆ ಪೂರಕವಾಗಿವೆ.

ಪ್ರತೀ ಫ್ರೇಮ್‌ನಲ್ಲೂ ಹತ್ತಾರು ಪಾತ್ರಗಳಿವೆ. ಕುವೆಂಪು ಮಾತಿನಂತೆ ಇಲ್ಲಿ ಯಾರೂ ಮುಖ್ಯರಲ್ಲ, ಅಮುಖ್ಯರೂ ಅಲ್ಲ. ನಾಯಕ ಪ್ರಧಾನ ಪಾತ್ರಗಳಿಗೂ ಗ್ರೇ ಶೇಡ್ಸ್ ಇವೆ. ಅದೇ ಸಂದರ್ಭದಲ್ಲಿ ಪ್ರತಿಯೊಂದು ಪೋಷಕ ಪಾತ್ರಗಳಿಗೂ ಅವರದ್ದೇ ಆದ ವ್ಯಕ್ತಿತ್ವವನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಇದಕ್ಕೆ ಇಸ್ತ್ರಿ ಪ್ರಿಯ ದಾಮು ಪಾತ್ರವೂ ಉದಾಹರಣೆ. ಸಿನೆಮಾರಂಗದಲ್ಲಿ ಮಾಸ್ ಹೀರೋ ಇಮೇಜ್ ಪಡೆಯಲು ನಟರು ವರ್ಷಾನುಗಟ್ಟಲೆ ಶ್ರಮ ಪಡುತ್ತಾರೆ. ಆದರೆ ಹಾಸ್ಯನಾಯಕನಾಗಿ ಎಂಟ್ರಿ ನೀಡಿದ್ದ ರಾಜ್ ಬಿ. ಶೆಟ್ಟಿ ಮಾಸ್ ಪಾತ್ರದಲ್ಲಿ ಭಾರೀ ಡಿಮ್ಯಾಂಡ್ ಪಡೆದಿರುವಾಗಲೂ ಹಾಸ್ಯ ಪೋಷಕ ಪಾತ್ರವನ್ನು ಆಯ್ಕೆ ಮಾಡುವ ಕೆಚ್ಚು ತೋರಿದ್ದಾರೆ.

ಕಾಂತಾರದ ಬಳಿಕ ಇಡೀ ಭಾರತೀಯ ಚಿತ್ರರಂಗವೇ ಅತೀಂದ್ರೀಯ ಶಕ್ತಿಗಳ ಹಿಂದೆ ಬಿದ್ದು ಸಿನೆಮಾ ಮಾಡತೊಡಗಿತ್ತು. ಆದರೆ ಇಂಥ ನಂಬಿಕೆಯ ಬೂಡಾದ ಕರಾವಳಿಯಿಂದಲೇ, ಸ್ವತಃ ‘ಶೆಟ್ಟರ ತಂಡ’ವೇ ಈ ಚಿತ್ರದ ಮೂಲಕ ಹೊಸದೊಂದು ಸವಾಲೆಸೆದಿದೆ. ಪ್ರೇತಾತ್ಮಗಳನ್ನು ನಂಬುವ ಹೆಸರಲ್ಲಿ ಹೇಗೆ ನಾವೇ ನಮ್ಮ ಕೌಟುಂಬಿಕ ನೆಮ್ಮದಿ ಬಲಿಕೊಡುತ್ತೇವೆ ಎನ್ನುವುದನ್ನು ವಿಡಂಬನಾತ್ಮಕವಾಗಿ ತೋರಿಸಿದ್ದಾರೆ. ಇಲ್ಲದ ದೆವ್ವಕ್ಕೆ ರೂಪ ಕೊಡುತ್ತಾ ನಮ್ಮ ಜೊತೆಗಿರುವವರೇ ಹೇಗೆ ನಮ್ಮ ನಡುವೆ ತಮ್ಮ ಸ್ಥಾನವನ್ನು ಭದ್ರಪಡಿಸುತ್ತಾರೆ ಎನ್ನುವುದನ್ನು ಅನಾವರಣಗೊಳಿಸಲಾಗಿದೆ.

ಚಿತ್ರದಲ್ಲಿನ ಏಕೈಕ ಕುಂದು ಎಂದು ಗುರುತಿಸುವುದಾದರೆ ಕುಡಿತವನ್ನು ಅಪಾಯ ಎನ್ನುವುದಕ್ಕಿಂತಲೂ ನಿಜವಾದ ಮನರಂಜನೆಯಾಗಿ ತೋರಿಸಲಾಗಿದೆ. ಇದು ಆತಂಕಕಾರಿ.

ಚಿತ್ರದ ಹೆಸರಿನ ಅರ್ಥದ ಬಗ್ಗೆ ತಲೆ ಕೆಡಿಸಿಕೊಂಡವರಿಗೆ ಟ್ರೈಲರ್‌ನಲ್ಲೇ ಉತ್ತರ ನೀಡಲಾಗಿತ್ತು. ಸು ಫ್ರಮ್ ಸೋ ಅಂದರೇ ಸುಲೋಚನಾ ಫ್ರಮ್ ಸೋಮೇಶ್ವರ ಎನ್ನುವ ಉತ್ತರವೇನೋ ಸಿಕ್ಕಿತ್ತು. ಆದರೆ ಸುಲೋಚನಾ ಎನ್ನುವ ’ಕಾಲ್ಪನಿಕ ದೆವ್ವ’ ಕಥೆಯ ಆಳಕ್ಕೆ ಹೋದಂತೆ ಆಕಾರ ರೂಪುಗೊಳ್ಳುವ ರೀತಿ ಅದ್ಭುತ. ಇಲ್ಲಿನ ಕಥೆ ಹಾಸ್ಯಕ್ಕೆ, ಹಾರರ್ ಗೆ ಸೀಮಿತಗೊಳ್ಳದೆ ಒಂದು ಕೌಟುಂಬಿಕ ಭಾವನಾತ್ಮಕ ತರಂಗ ಸೃಷ್ಟಿಸಿದೆ. ಹೀಗಾಗಿಯೇ ಟ್ರೈಲರ್ ನೋಡಿ ಮೆಚ್ಚದವರಿಗೂ ಚಿತ್ರ ಅದರಾಚೆಗೆ ಮತ್ತಷ್ಟು ಸಂಭ್ರಮ ವಿಶೇಷಗಳನ್ನು ನೀಡಿ ಸಂತೃಪ್ತಿಗೊಳಿಸುತ್ತದೆ.

ಸ್ಥಳೀಯ ಮೌಲ್ಯಗಳನ್ನು ಸಾರುವ ಮಲಯಾಳಂ ಸಿನೆಮಾಗಳನ್ನು ಕಂಡು ಮೆಚ್ಚಿದವರಿಗೆ ಇದೀಗ ಅದೇ ಮಾದರಿಯ ಕನ್ನಡ ಚಿತ್ರವೊಂದನ್ನು ನೋಡುವ ಅವಕಾಶ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಶಿಕರ ಪಾತೂರು

contributor

Similar News