×
Ad

ಪರೇಶ್ ರಾವಲ್‌ರ ‘ದಿ ತಾಜ್ ಸ್ಟೋರಿ’ ಚಿತ್ರದ ಪೋಸ್ಟರ್‌ಗೆ ವ್ಯಾಪಕ ಆಕ್ರೋಶ; ಸ್ಪಷ್ಟನೆ ನೀಡಿದ ನಿರ್ಮಾಪಕರು

Update: 2025-09-30 16:35 IST

Photo credit: indiatoday.in

ಹೊಸದಿಲ್ಲಿ: ನಟ ಪರೇಶ್ ರಾವಲ್ ಅವರು ತನ್ನ ಮುಂಬರುವ ಚಿತ್ರ ‘ದಿ ತಾಜ್ ಸ್ಟೋರಿ’ಯ ಪೋಸ್ಟರ್‌ನ್ನು ಸೋಮವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ತಾಜ್ ಮಹಲ್‌ನ ಗುಮ್ಮಟದಿಂದ ಶಿವನ ವಿಗ್ರಹ ಹೊರಹೊಮ್ಮುವ ದೃಶ್ಯವನ್ನೊಳಗೊಂಡಿರುವ ಈ ಪೋಸ್ಟರ್ ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗಳಿಗೆ ಕಾರಣವಾಗಿದೆ.

ಚಿತ್ರ ನಿರ್ಮಾಪಕರು ವಿವಾದಾತ್ಮಕ ಹೇಳಿಕೆಗಳನ್ನು,‌ ವಿಶೇಷವಾಗಿ ಮುಘಲ್‌ರ ಕಾಲದ ಸಮಾಧಿಯನ್ನು ಅದಾಗಲೇ ಅಸ್ತಿತ್ವದಲ್ಲಿದ್ದ ಹಿಂದು ದೇವಸ್ಥಾನದ ಮೇಲೆ ನಿರ್ಮಿಸಲಾಗಿತ್ತು ಎಂಬ ದೀರ್ಘಕಾಲೀನ, ಆದರೆ ಸಾಬೀತಾಗದ ಪ್ರತಿಪಾದನೆಯನ್ನು ಉತ್ತೇಜಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಹೆಚ್ಚುತ್ತಿರುವ ಟೀಕೆಗಳ ನಡುವೆ ರಾವಲ್ ತನ್ನ ಮೂಲ ಪೋಸ್ಟ್‌ ಅನ್ನು ಅಳಿಸಿದ್ದಾರೆ ಮತ್ತು ಚಿತ್ರದ ನಿರ್ಮಾಣ ತಂಡದ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ಚಲನಚಿತ್ರದ ಹಿಂದಿನ ಉದ್ದೇಶ ಮತ್ತು ಅದರ ಪ್ರಚಾರ ಸಾಮಗ್ರಿಗಳ ಕುರಿತು ಸ್ಪಷ್ಟನೆ ನೀಡುವ ಮೂಲಕ ಸಾರ್ವಜನಿಕರ ಕಳವಳಗಳನ್ನು ಪರಿಹರಿಸಲು ಹೇಳಿಕೆಯು ಪ್ರಯತ್ನಿಸಿದೆ.

‘ಚಿತ್ರವು ಯಾವುದೇ ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿಲ್ಲ ಅಥವಾ ತಾಜ್‌ಮಹಲ್‌ನ ಒಳಗೆ ಶಿವ ದೇವಾಲಯವಿದೆ ಎಂದು ಅದು ಹೇಳಿಕೊಳ್ಳುವುದಿಲ್ಲ. ಅದು ಕೇವಲ ಐತಿಹಾಸಿಕ ಸಂಗತಿಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದೆ. ದಯವಿಟ್ಟು ಚಿತ್ರವನ್ನು ವೀಕ್ಷಿಸಿ ಮತ್ತು ನಿಮ್ಮ ಸ್ವಂತ ಅಭಿಪ್ರಾಯವನ್ನು ರೂಪಿಸಿಕೊಳ್ಳಿ ಎಂದು ನಾವು ವಿನಂತಿಸಿಕೊಳ್ಳುತ್ತೇವೆ’ ಎಂದು ಸ್ವರ್ಣಿಮ್ ಗ್ಲೋಬಲ್ ಸರ್ವಿಸಿಸ್ ಪ್ರೈ.ಲಿ.ಹೇಳಿಕೆಯಲ್ಲಿ ತಿಳಿಸಿದೆ.

ಎಕ್ಸ್ ನಲ್ಲಿ ತನ್ನ ಫಾಲೋಅಪ್ ಸಂದೇಶದಲ್ಲಿ ರಾವಲ್ ಅವರೂ ಚಿತ್ರ ನಿರ್ಮಾಪಕರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ ಹಾಗೂ ಚಿತ್ರವು ಯಾವುದೇ ಧಾರ್ಮಿಕ ವಿಷಯಕ್ಕೆ ಸಂಬಂಧಿಸಿಲ್ಲ ಮತ್ತು ಐತಿಹಾಸಿಕ ಅಂಶಗಳನ್ನು ಆಧರಿಸಿದೆ ಎಂಬ ನಿರ್ಮಾಪಕರ ನಿಲುವನ್ನು ಪುನರುಚ್ಚರಿಸಿದ್ದಾರೆ.

17ನೇ ಶತಮಾನದಲ್ಲಿ ಮುಘಲ್ ಚಕ್ರವರ್ತಿ ಶಹಜಹಾನ್ ನಿರ್ಮಿಸಿದ ತಾಜ್‌ಮಹಲ್ ಆಗಾಗ್ಗೆ ತನ್ನ ಮೂಲಗಳ ಕುರಿತು ಚರ್ಚೆಗಳ ಕೇಂದ್ರಬಿಂದುವಾಗಿದ್ದು,‌ ಕೆಲವು ಅಮುಖ್ಯ ಸಿದ್ಧಾಂತಗಳು ಅದನ್ನು ಹಿಂದೂ ದೇವಸ್ಥಾನದ ಮೇಲೆ ನಿರ್ಮಿಸಲಾಗಿದೆ ಎಂದು ಆರೋಪಿಸಿವೆ. ಈ ಸಿದ್ಧಾಂತಗಳನ್ನು ಮುಖ್ಯವಾಹಿನಿ ಇತಿಹಾಸಕಾರರು ಎಂದಿಗೂ ಸಮರ್ಥಿಸಿಲ್ಲ.

‘ದಿ ತಾಜ್ ಸ್ಟೋರಿ’ ಐತಿಹಾಸಿಕ ಘಟನೆಗಳನ್ನು ಕೇಂದ್ರೀಕರಿಸಿದೆಯೇ ಹೊರತು ಧಾರ್ಮಿಕ ವಿವಾದಗಳಲ್ಲಿ ಸಿಲುಕಿಕೊಳ್ಳಲು ಅಥವಾ ಪರಿಶೀಲಿಸಲ್ಪಡದ ಹಕ್ಕುಗಳನ್ನು ಮಂಡಿಸಲು ಬಯಸುವುದಿಲ್ಲ ಎಂದು ನಿರ್ಮಾಪಕರು ಒತ್ತಿ ಹೇಳಿದ್ದಾರೆ.

ಸ್ವರ್ಣಿಮ್ ಗ್ಲೋಬಲ್ ಸರ್ವಿಸಿಸ್ ಪ್ರೈ.ಲಿ. ಮತ್ತು ಸಿಎ ಸುರೇಶ ಝಾ ನಿರ್ಮಿಸಿರುವ ‘ದಿ ತಾಜ್ ಸ್ಟೋರಿ’ಯನ್ನು ತುಷಾರ ಅಮರೀಶ ಗೋಯಲ್ ಬರೆದು ನಿರ್ದೇಶಿಸಿದ್ದಾರೆ. ಚಿತ್ರವು ಅ.31ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News