×
Ad

ಕೊಲೆ ಬೆದರಿಕೆಗಳ ನಂತರ ನಟ ಶಾರುಖ್‌ ಖಾನ್‌ಗೆ ವೈ+ ಭದ್ರತೆ

Update: 2023-10-09 11:13 IST

ಶಾರುಖ್‌ ಖಾನ್‌ (PTI)

ಮುಂಬೈ: “ಪಠಾಣ್”‌ ಮತ್ತು “ಜವಾನ್”‌ ಸಿನೆಮಾಗಳ ಯಶಸ್ಸಿನ ನಂತರ ತಮಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ನಟ ಶಾರುಖ್‌ ಖಾನ್‌ ಅವರು ದೂರಿದ ನಂತರ ಮುಂಬೈ ಪೊಲೀಸರು ಅವರಿಗೆ ವೈ+ಭದ್ರತೆ ನೀಡಲು ನಿರ್ಧರಿಸಿದ್ದಾರೆ.

ಈ ವೈ+ಭದ್ರತೆಯ ಭಾಗವಾಗಿ ಶಾರುಖ್‌ ಖಾನ್‌ ಜೊತೆಗೆ ದಿನದ 24 ಗಂಟೆಯೂ ಆರು ಮಂದಿ ಸಶಸ್ತ್ರ ಭದ್ರತಾ ಸಿಬ್ಬಂದಿ ಇರಲಿದ್ದಾರೆ. ಇಲ್ಲಿಯ ತನಕ ಶಾರುಖ್‌ ಖಾನ್‌ ಅವರೊಂದಿಗೆ ಸದಾ ಇಬ್ಬರು ಭದ್ರತಾ ಸಿಬ್ಬಂದಿಯಿರುತ್ತಿದ್ದರು.

ಬೆನ್ನುಬೆನ್ನಿಗೆ ಎರಡು ಸೂಪರ್‌ ಹಿಟ್‌ ಚಿತ್ರಗಳು ತೆರೆಕಂಡ ನಂತರ ತಮ್ಮ ಜೀವಕ್ಕೆ ಬೆದರಿಕೆಯೊಡ್ಡಿ ಕರೆಗಳು ಬರುತ್ತಿವೆ ಎಂದು ಶಾರುಖ್‌ ಖಾನ್‌ ಅವರು ಇತ್ತೀಚೆಗೆ ಮಹಾರಾಷ್ಟ್ರ ಸರಕಾರಕ್ಕೆ ಪತ್ರ ಬರೆದಿದ್ದರೆಂದು ಪೊಲೀಸರಿಂದ ಮಾಹಿತಿ ದೊರಕಿದೆ. ಈ ಹಿನ್ನೆಲೆಯಲ್ಲಿ ಅವರ ಭದ್ರತೆಯನ್ನು ಹೆಚ್ಚಿಸಲು ಸರಕಾರ ನಿರ್ಧರಿಸಿದೆ.

ಶಾರುಖ್‌ ಖಾನ್‌ ಅವರಿಗೆ ಈ ಹಿಂದೆ ಕೂಡ ಮುಂಬೈ ಭೂಗತ ಜಗತ್ತಿನಿಂದ ಬೆದರಿಕೆಗಳು ಬಂದಿತ್ತು.

ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುವ ಶಾರುಖ್‌ ಖಾನ್‌ ಅವರ ದೃಢಚಿತ್ತತೆಯನ್ನು ಇತ್ತೀಚೆಗೆ ಚಿತ್ರ ನಿರ್ದೇಶಕ ಸಂಜಯ್‌ ಗುಪ್ತಾ ಶ್ಲಾಘಿಸಿದ್ದರು.

“90ರ ದಶಕದಲ್ಲಿ ಚಿತ್ರ ತಾರೆಯರಿಗೆ ಭೂಗತಜಗತ್ತು ಬೆದರಿಕೆಯೊಡ್ಡುವುದು ಹೆಚ್ಚಾಗಿರುವಾಗ ಅದಕ್ಕೆ ಬಗ್ಗದೇ ಇದ್ದ ಏಕೈಕ ನಟ ಶಾರುಖ್‌ ಆಗಿದ್ದರು. ಗುಂಡು ಹೊಡೀತೀರಾದರೆ ಹೊಡೆಯಿರಿ, ಆದರೆ ನಾ ನಿಮಗಾಗಿ ಕೆಲಸ ಮಾಡೆನು, ನಾನೊಬ್ಬ ಪಠಾಣ್”‌ ಎಂದು ಅವರು ಹೇಳಿದ್ದರು. ಈಗಲೂ ಅವರು ಹಾಗೆಯೇ ಇದ್ದಾರೆ,” ಎಂದು ಗುಪ್ತಾ ಟ್ವೀಟ್‌ ಮಾಡಿದ್ದರು.

ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನಿಂದ ಬೆದರಿಕೆಗಳ ನಂತರ ಕಳೆದ ವರ್ಷ ನಟ ಸಲ್ಮಾನ್‌ ಖಾನ್‌ ಅವರಿಗೂ ವೈ+ ಭದ್ರತೆ ಒದಗಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News