×
Ad

"ನಿಮ್ಮ ಮೇಲಿನ ಪ್ರೀತಿ ನನ್ನ ಅಹಂಗಿಂತ ದೊಡ್ಡದು": ಕನ್ನಡಿಗರ ಕ್ಷಮೆಯಾಚಿಸಿದ ಸೋನು ನಿಗಮ್

Update: 2025-05-05 22:48 IST

ಸೋನು ನಿಗಮ್ (PTI)

ಮುಂಬೈ: ಕನ್ನಡ ಗೀತೆ ಹಾಡುವಂತೆ ಒತ್ತಾಯಿಸಿದ್ದ ಅಭಿಮಾನಿಯೊಬ್ಬರನ್ನುದ್ದೇಶಿಸಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದ್ದ ಖ್ಯಾತ ಬಾಲಿವುಡ್ ಗಾಯಕ ಸೋನು ನಿಗಮ್ ಕನ್ನಡಿಗರ ಕ್ಷಮೆ ಕೋರಿದ್ದಾರೆ.

ಈ ಕುರಿತು ಪೋಸ್ಟ್‌ ಮಾಡಿರುವ ಅವರು, “ಕ್ಷಮೆ ಕೋರುತ್ತೇನೆ ಕರ್ನಾಟಕ. ನಿಮ್ಮ ಮೇಲಿನ ಪ್ರೀತಿ ನನ್ನ ಅಹಂಗಿಂತ ದೊಡ್ಡದು. ನಿಮ್ಮನ್ನು ಸದಾ ಪ್ರೀತಿಸುತ್ತೇನೆ” ಎಂದು ಹೇಳಿದ್ದಾರೆ.

ಕಳೆದ ವಾರ ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ಕನ್ನಡ ಗೀತೆ ಹಾಡುವಂತೆ ಒತ್ತಾಯಿಸಿದ್ದ ಅಭಿಮಾನಿಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಸೋನು ನಿಗಮ್, “ನಿಮ್ಮಂಥವರಿಂದಲೇ ಪಹಲ್ಗಾಮ್ ನಂಥ ಭಯೋತ್ಪಾದಕ ದಾಳಿಯಾಗುತ್ತಿರುವುದು” ಎಂದು ಹೇಳಿದ್ದರು. ಸೋನು ನಿಗಮ್ ರ ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಭಾಷಾ ಪ್ರೇಮವನ್ನು ಭಯೋತ್ಪಾದನೆಗೆ ಹೋಲಿಸಿದ್ದ ಸೋನು ನಿಗಮ್ ರನ್ನು ಕನ್ನಡ ಚಿತ್ರರಂಗ ಬಹಿಷ್ಕರಿಸಬೇಕು ಎಂಬ ಅಭಿಯಾನವೂ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ಆಗಿತ್ತು.

ಇದರ ಬೆನ್ನಿಗೇ, ವಿಡಿಯೊ ಸಂದೇಶವೊಂದರ ಮೂಲಕ ಸ್ಪಷ್ಟನೆ ನೀಡಿದ್ದ ಸೋನು ನಿಗಮ್, “ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ಸಂತ್ರಸ್ತರ ಪ್ಯಾಂಟ್ ಬಿಚ್ಚಿಸುವಾಗ ನೀವು ಯಾವ ಭಾಷೆಯವರು ಎಂದು ಕೇಳಿರಲಿಲ್ಲ. ಅದನ್ನು ಕನ್ನಡಿಗರಿಗೆ ನೆನಪಿಸಲೆಂದೇ ನಾನು ಹಾಗೆ ಹೇಳಿದ್ದೆ” ಎಂದು ಸಮಜಾಯಿಷಿ ನೀಡಿದ್ದರು. ಅವರ ಈ ಸ್ಪಷ್ಟನೆಯ ವಿರುದ್ಧವೂ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಈ ಬಳಿಕ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

ಕನ್ನಡಿಗರ ಆಕ್ರೋಶ ಹಾಗೂ ಬಹಿಷ್ಕಾರದ ಬೆದರಿಕೆಗೆ ಬಳಿಕ ಇಂದು ಸೋನು ನಿಗಮ್, ಕನ್ನಡಿಗರ ಕ್ಷಮೆ ಕೋರಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News