×
Ad

ʼಛಾವಾʼ, ʼದಿ ಕಾಶ್ಮೀರ್ ಫೈಲ್ಸ್ʼ ರೀತಿಯ ಚಿತ್ರಗಳನ್ನು ಮಾಡುವುದಿಲ್ಲ: ಬಾಲಿವುಡ್ ನಟ ಜಾನ್ ಅಬ್ರಹಾಂ

Update: 2025-08-12 11:56 IST

ಬಾಲಿವುಡ್ ನಟ ಜಾನ್ ಅಬ್ರಹಾಂ (Photo: PTI)

ಮುಂಬೈ: ʼಛಾವಾʼ ಮತ್ತು ʼದಿ ಕಾಶ್ಮೀರ್ ಫೈಲ್ಸ್ʼ ಮಾದರಿಯ ಚಿತ್ರಗಳನ್ನು ಮಾಡುವ ಆಕರ್ಷಣೆ ಎಂದಾದರೂ ಉಂಟಾಯಿತೇ ಎಂಬ ಪ್ರಶ್ನೆಗೆ ಜಾನ್ ಸ್ಪಷ್ಟನೆ ನೀಡಿದರು.

“ನಾನು ಛಾವಾ ನೋಡಿಲ್ಲ, ಆದರೆ ಜನರು ಅದನ್ನು ಮೆಚ್ಚಿದ್ದಾರೆ ಎಂಬುದು ತಿಳಿದಿದೆ. ʼದಿ ಕಾಶ್ಮೀರ್ ಫೈಲ್ಸ್ʼ ಗೂ ಪ್ರೇಕ್ಷಕರ ಮೆಚ್ಚುಗೆ ದೊರಕಿದೆ. ಆದರೆ ಅತಿಯಾದ ರಾಜಕೀಯ ವಾತಾವರಣದಲ್ಲಿ ಜನರನ್ನು ಪ್ರಭಾವಿಸಲು ಚಿತ್ರಗಳನ್ನು ನಿರ್ಮಿಸುತ್ತಿರುವುದು ತುಂಬಾ ಆತಂಕಕಾರಿ ಬೆಳವಣಿಗೆ. ನಾನು ಅಂತಹ ಚಿತ್ರಗಳನ್ನು ಮಾಡುವುದಿಲ್ಲ,” ಎಂದು ಬಾಲಿವುಡ್ ನಟ ಜಾನ್ ಅಬ್ರಹಾಂ ಹೇಳಿದ್ದಾರೆ.

India Today ಗೆ ನೀಡಿದ ಸಂದರ್ಶನದಲ್ಲಿ ನಟ ಜಾನ್ ಅಬ್ರಹಾಂ ಈ ಹೇಳಿಕೆ ನೀಡಿದ್ದಾರೆ. ಪ್ರಸಕ್ತ ಅವರು 2012ರಲ್ಲಿನ ಇಸ್ರೇಲ್ ನ ರಾಜತಾಂತ್ರಿಕರ ಮೇಲಿನ ದಾಳಿಯನ್ನು ಆಧರಿಸಿದ ತಮ್ಮ ಮುಂಬರುವ ಟೆಹ್ರಾನ್ ಚಿತ್ರದ ಬಿಡುಗಡೆಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ದೇಶಭಕ್ತಿ ಮತ್ತು ರಾಷ್ಟ್ರೀಯತಾವಾದಿ ಛಾಪು ಹೊಂದಿದ ಚಿತ್ರಗಳ ಬಗ್ಗೆ ತಮ್ಮ ಸ್ಪಷ್ಟ ನಿಲುವು ಹಂಚಿಕೊಂಡಿದ್ದಾರೆ.

ಬಾಕ್ಸ್ ಆಫೀಸ್‌ ನಲ್ಲಿ ದೊಡ್ಡ ಯಶಸ್ಸು ಪಡೆದ ʼಛಾವಾʼ ಮತ್ತು ʼದಿ ಕಾಶ್ಮೀರ್ ಫೈಲ್ಸ್ʼ ತರಹದ ಚಿತ್ರಗಳನ್ನು ಮಾಡಬೇಕು ಎಂದೆನಿಸಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ‘ಛಾವಾ’ ನೋಡಿಲ್ಲ, ಆದರೆ ಜನರು ಅದನ್ನು ಇಷ್ಟಪಟ್ಟಿದ್ದಾರೆಂದು ತಿಳಿದಿದ್ದೇನೆ. ‘ದಿ ಕಾಶ್ಮೀರ್ ಫೈಲ್ಸ್’ಗೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಜನರನ್ನು ರಾಜಕೀಯವಾಗಿ ಓಲೈಸುವ ಉದ್ದೇಶದಿಂದ ಚಿತ್ರಗಳನ್ನು ತಯಾರಿಸುವುದು ನನಗೆ ಭಯ ಹುಟ್ಟಿಸುತ್ತದೆ. ನಾನು ಆಮಿಷಕ್ಕೆ ಒಳಗಾಗಿಲ್ಲ, ಮುಂದೆ ಕೂಡ ಅಂತಹ ಚಿತ್ರಗಳನ್ನು ಮಾಡುವುದಿಲ್ಲ” ಎಂದು ಹೇಳಿದರು.

ಜಾನ್ ಅಬ್ರಹಾಂ ಅವರು ಸೆನ್ಸಾರ್‌ ಶಿಪ್ ಅಗತ್ಯವಿದೆ ಎಂದು ಒಪ್ಪಿಕೊಂಡರೂ, ಅದರ ಪ್ರಸ್ತುತ ನಿರ್ವಹಣಾ ವಿಧಾನ ಪ್ರಶ್ನಾರ್ಹವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ನಾನು ಬಲಪಂಥೀಯನೂ ಅಲ್ಲ, ಎಡಪಂಥೀಯನೂ ಅಲ್ಲ. ನಾನು ರಾಜಕೀಯ ವಿರೋಧಿ” ಎಂದು ಅವರು ಸ್ಪಷ್ಟಪಡಿಸಿದರು.

ಬಲಪಂಥೀಯ ಚಿತ್ರಗಳು ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಜಾನ್ ಅಬ್ರಹಾಂ ಅಭಿಪ್ರಾಯಪಟ್ಟರು. “ಚಿತ್ರರಂಗದಲ್ಲಿ ಒಬ್ಬ ಕಲಾವಿದ ಅಥವಾ ನಿರ್ಮಾಪಕನಿಗೆ ಎರಡು ದಾರಿಗಳಿವೆ. ವಾಣಿಜ್ಯ ಯಶಸ್ಸಿನ ದಾರಿ ಅಥವಾ ತನ್ನದೇ ನಿಲುವು ಮತ್ತು ಕತೆಗಳ ಪ್ರಾಮಾಣಿಕತೆಯ ದಾರಿ. ನಾನು ಯಾವತ್ತೂ ಎರಡನೆಯ ದಾರಿಯನ್ನು ಆಯ್ಕೆ ಮಾಡಿದ್ದೇನೆ,” ಎಂದು ಅವರು ಹೇಳಿದರು.

ವಿಕ್ಕಿ ಕೌಶಲ್ ಅಭಿನಯದ ಛಾವಾ ಮರಾಠಾ ಸಾಮ್ರಾಜ್ಯದ ಎರಡನೇ ದೊರೆ ಸಂಭಾಜಿ ಮಹಾರಾಜರ ಜೀವನ ಮತ್ತು ಔರಂಗಜೇಬನೊಂದಿಗೆ ನಡೆದ ಹೋರಾಟದ ಕಥೆಯನ್ನು ಒಳಗೊಂಡಿದ್ದು, 800 ಕೋಟಿ ರೂಪಾಯಿ ಗಳಿಸಿ ವರ್ಷದ ಅತಿದೊಡ್ಡ ಹಿಟ್ ಆಗಿದೆ. ಆದರೆ ಇದರಲ್ಲಿ ಐತಿಹಾಸಿಕ ತಪ್ಪು ಮಾಹಿತಿ ಇರುವ ಬಗ್ಗೆ ಬಗ್ಗೆ ಟೀಕೆಗಳು ಕೇಳಿಬಂದಿವೆ.

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ʼದಿ ಕಾಶ್ಮೀರ್ ಫೈಲ್ಸ್ʼ ಕಾಶ್ಮೀರಿ ಹಿಂದೂಗಳ ವಲಸೆ ಕುರಿತ ಕಥೆಯನ್ನು ಹೇಳುತ್ತಿದ್ದು, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಾದ ನರ್ಗಿಸ್ ದತ್ ಪ್ರಶಸ್ತಿಯನ್ನು ಗಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News