ಅಭ್ಯಾಸದ ವೇಳೆ ಕುತ್ತಿಗೆಗೆ ಚೆಂಡು ಬಡಿದು ಯುವ ಕ್ರಿಕೆಟಿಗ ಮೃತ್ಯು
PC: x.com/gillianlant
ಮೆಲ್ಬೋರ್ನ್: ಅಭ್ಯಾಸ ಪಂದ್ಯದ ವೇಳೆ ಕುತ್ತಿಗೆಗೆ ಚೆಂಡು ಬಡಿದು ಭರವಸೆಯ ಯವ ಕ್ರಿಕೆಟ್ ಪ್ರತಿಭೆ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಮಂಗಳವಾರ ಮಧ್ಯಾಹ್ನ ಫೆರಿಂಟ್ರಿ ಗಲ್ಲಿಯ ವ್ಯಾಲಿ ಟೂ ರಿಸರ್ವ್ ನಲ್ಲಿ ಅಭ್ಯಾಸ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಬೆನ್ ಆಸ್ಟಿನ್ (17) ಮೃತಪಟ್ಟಿದ್ದಾರೆ.
ಹೆಲ್ಮೆಟ್ ಧರಿಸಿದ್ದ ಆಸ್ಟಿನ್ ನೆಟ್ ಪ್ರಾಕ್ಟೀಸ್ ವೇಳೆ ಅಧಿಕೃತ ಬೌಲಿಂಗ್ ಮಿಷಿನ್ನಿಂದ ಎಸೆತಗಳನ್ನು ಎದುರಿಸುತ್ತಿದ್ದರು. ಆಗ ಚೆಂಡು ತಲೆ ಮತ್ತು ಕುತ್ತಿಗೆಗೆ ಬಡಿಯಿತು ಎಂದು ಹೇಳಲಾಗಿದೆ. ಅರೆವೈದ್ಯಕೀಯ ಸಿಬ್ಬಂದಿ ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿ ಮೊನ್ಯಾಷ್ ಮೆಡಿಕಲ್ ಸೆಂಟರ್ಗೆ ಕರೆದೊಯ್ದರು. ವೈದ್ಯರ ಪ್ರಯತ್ನದ ಹೊರತಾಗಿಯೂ ಬುಧವಾರ ಆತ ಕೊನೆಯುಸಿರೆಳೆದ ಎಂದು ಅಧಿಕೃತ ಮೂಲಗಳು ಹೇಳಿವೆ.
ಫೆರಿಂಟ್ರಿ ಗಲ್ಲಿ ಕ್ರಿಕೆಟ್ ಕ್ಲಬ್ ಬೆನ್ ಸಾವನ್ನು ಗುರುವಾರ ಬೆಳಿಗ್ಗೆ ನೀಡಿದ ಪ್ರಕಟಣೆಯಲ್ಲಿ ದೃಢಪಡಿಸಿದೆ. ಇಡೀ ಕ್ರೀಡಾ ಸಮುದಾಯಕ್ಕೆ ಈ ಘಟನೆಯಿಂದ ಆಘಾತವಾಗಿದೆ ಎಂದು ಪ್ರಕಟಣೆ ಹೇಳಿದೆ. "ಬೆನ್ ಸ್ಟಾರ್ ಕ್ರಿಕೆಟರ್ ಆಗಿದ್ದು, ಉತ್ತಮ ನಾಯಕ ಹಾಗೂ ಭರವಸೆಯ ಯುವಪ್ರತಿಭೆ" ಎಂದು ಬಣ್ಣಿಸಲಾಗಿದೆ. ಮಲ್ಗ್ರೇವ್ ಮತ್ತು ಈಲ್ಡನ್ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದ ಬೆನ್, ವೇವರ್ಲಿ ಪಾರ್ಕ್ ಹಾಕ್ಸ್ ತಂಡವನ್ನು ಕಿರಿಯರ ಫುಟ್ಬಾಲ್ನಲ್ಲಿ ಪ್ರತಿನಿಧಿಸಿದ್ದರು.