×
Ad

ಆಲೂರು | ಸಿನಿಮೀಯ ರೀತಿಯಲ್ಲಿ ಅಪಹರಣದಿಂದ ಪಾರಾದ ಶಾಲಾ ಬಾಲಕಿ

Update: 2025-08-14 23:58 IST

ಆಲೂರು, ಆ.14 : ತಾಲೂಕಿನ ಕುಂದೂರು ಹೋಬಳಿಯ ಹಂಚೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಶಾಲಾ ಬಾಲಕಿಯೊಬ್ಬಳನ್ನು ಕಿಡ್ನಾಪ್ ಮಾಡಲು ಯತ್ನಿಸಿದ ಘಟನೆಯಲ್ಲಿ ನಡೆದಿದ್ದು, ವಿದ್ಯಾರ್ಥಿನಿ ಕೊನೆಯ ಕ್ಷಣದಲ್ಲಿ ಅಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದುಬಂದಿದೆ.

ಹಂಚೂರು ಗ್ರಾಮದ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ, ಪ್ರತಿನಿತ್ಯದಂತೆ ಹಾಂಜಿಹಳ್ಳಿಯಿಂದ ಶಾಲೆಗೆನಡೆದುಕೊಂಡು ತೆರಳುತ್ತಿದ್ದಾಗ, ಕಾರಿನಲ್ಲಿ ಬಂದ ಕಿರಾತಕರು ಅಪಹರಣಕ್ಕೆ ಯತ್ನಿಸಿದ್ದಾರೆ. ಕಾರಿನಲ್ಲಿ ಈಗಾಗಲೇ ಇಬ್ಬರು ಬಾಲಕಿಯರನ್ನು ಅಪಹರಿಸಲಾಗಿದೆ ಎಂದು ವಿದ್ಯಾರ್ಥಿನಿ ಅನುಮಾನ ವ್ಯಕ್ತಪಡಿಸಿದ್ದಾಳೆ. ಆಕೆ ತನ್ನ ಶಾಲಾ ಬ್ಯಾಗ್ ಬಿಟ್ಟು, ಹತ್ತಿರದ ಮನೆಯೊಳಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದಾಳೆ ಎನ್ನಲಾಗಿದೆ.

ಬಾಲಕಿಯ ತಂದೆ, ಕೂಲಿ ಕಾರ್ಮಿಕರಾಗಿದ್ದು, ತಮ್ಮ ಗ್ರಾಮದಿಂದ ಶಾಲೆಗೆ ಒಂದೂವರೆ ಕಿಲೋಮೀಟರ್ ದೂರವಿದೆ. ಸ್ಥಳೀಯರು ತಕ್ಷಣ ಶಾಲಾ ಮುಖ್ಯೋಪಾಧ್ಯಾಯರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಾಸನ ಜಿಲ್ಲಾ ಪೊಲೀಸರು ಹಾಗೂ ಆಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ವಿದ್ಯಾರ್ಥಿನಿಗೆ ಧೈರ್ಯ ತುಂಬಿದ್ದಾರೆ. ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಘಟನೆಯ ಬಗ್ಗೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ, ವಿದ್ಯಾರ್ಥಿನಿಯನ್ನು ಸಮಾಧಾನಪಡಿಸಲಾಗಿದೆ. ತಾಲೂಕಿನ ಎಲ್ಲ ಶಾಲೆಗಳಿಗೆ ಎಚ್ಚರಿಕೆಯ ಸೂಚನೆ ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ಇತರ ಶಾಲೆಗಳಲ್ಲಿ ವರದಿಯಾಗಿಲ್ಲ ಎಂದು ದೃಢಪಡಿಸಿದ್ದಾರೆ.

ಶಾಲಾ ಮುಖ್ಯೋಪಾಧ್ಯಾಯ ನಾಗರಾಜ್ ಬಿ.ಆರ್ ಮಾತನಾಡಿ, ಘಟನೆಯ ಸಂದರ್ಭದಲ್ಲಿ ತಾವು ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಕರ್ತವ್ಯಕ್ಕೆ ತೆರಳುವಾಗ ವಿದ್ಯಾರ್ಥಿನಿಯನ್ನು ರಸ್ತೆಯಲ್ಲಿ ಗಮನಿಸಿದ್ದೇನೆ. ಶಾಲಾ ಮಕ್ಕಳಿಗೆ ಬಸ್ ಸೌಲಭ್ಯವಿಲ್ಲದಿರುವುದೇ ಈ ಘಟನೆಗೆ ಕಾರಣ. ಅದೃಷ್ಟವಶಾತ್ ವಿದ್ಯಾರ್ಥಿನಿ ಬಚಾವಾಗಿದ್ದಾಳೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News