ಯುವಕರು ಪ್ರಜ್ಞೆ-ತಂತ್ರಜ್ಞಾನದೊಂದಿಗೆ ದೇಶ ನಿರ್ಮಾಣಕ್ಕೆ ಮುಂದಾಗಲಿ : ಬಾನು ಮುಷ್ತಾಕ್
ಹಾಸನ, ಆ.31: ಯುವಜನತೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಂಡು, ಇಂದಿನ ಕಾಲಮಾನಕ್ಕೆ ತಕ್ಕಂತೆ ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ದೇಶ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದು ಅಂತರ್‌ರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಸಲಹೆ ನೀಡಿದ್ದಾರೆ.
'ನಮ್ಮ ಹಾಸನ ಟಿವಿ'ಯ 5ನೇ ವರ್ಷದ ಸಂಭ್ರಮ ಹಾಗೂ ವಿದ್ಯಾರ್ಥಿಗಳು ಮತ್ತು ಸಮಾಜ ಸೇವಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮುಸ್ಲಿಮ್ ಯುವಜನತೆ ಶೈಕ್ಷಣಿಕ ಕ್ಷೇತ್ರದಲ್ಲಿ ಎಲ್ಲ ರೀತಿಯ ಸ್ಪರ್ಧೆಗಳನ್ನು ಎದುರಿಸಿ ಸೂಕ್ತ ಸ್ಥಾನಮಾನ ಗಳಿಸಿಕೊಳ್ಳಬೇಕು. ವಿದ್ಯಾಭ್ಯಾಸದ ಅರ್ಥ ಕೇವಲ ಅಕ್ಷರ ಜ್ಞಾನವಲ್ಲ. ಎಲ್ಲ ರೀತಿಯ ಸಾಂಸ್ಕೃತಿಕ ಒಳನೋಟಗಳನ್ನೂ ಮೈಗೂಡಿಸಿಕೊಂಡು ಶಾಂತಿ, ನೆಮ್ಮದಿ ಹಾಗೂ ಸಹ ಬಾಳ್ವೆಯ ಬದುಕು ಅಗತ್ಯವಾಗಿದೆ ಎಂದು ಹೇಳಿದರು.
ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಸುದ್ದಿಗೆ ಮೀಸಲಾದ ಸಂಸ್ಥೆ ವಿದ್ಯೆಗೂ ಒತ್ತು ನೀಡುತ್ತಿರುವುದು ಮಾದರಿ ಕೆಲಸವಾಗಿದೆ ಎಂದರು.
ವಿದ್ಯೆಯಿಲ್ಲದೆ ಏನನ್ನು ಸಾಧಿಸಲು ಸಾಧ್ಯವಾಗುವುದಿಲ್ಲ, ವಿದ್ಯಾರ್ಥಿಗಳು ಏಕಾಗ್ರತೆಯಿಂದ ಶ್ರದ್ದೆ ಮತ್ತು ಶಿಸ್ತಿನಿಂದ ವಿದ್ಯಾರ್ಥಿ ಜೀವನದಲ್ಲಿ ಸಾಕಷ್ಟು ಶ್ರಮವಹಿಸಿ ಕಲಿಯಬೇಕು. ತಮ್ಮನ್ನು ನಂಬಿರುವ ಕುಟುಂಬಕ್ಕೆ ಆಸರೆಯಾಗಬೇಕು, ಕೀರ್ತಿ ತರಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲತಾ ಕುಮಾರಿ, ಐಬಿಸಿ ಗ್ರೂಪ್ ಮಾಲಕರಾದ ಸಯ್ಯದಾ ಹಿನಾ, ಮಲ್ನಾಡ್ ಮೆಹಬೂಬ್ ಮಾತನಾಡಿದರು. ಶಿಕ್ಷಣ ಸಂಪನ್ಮೂಲ ವ್ಯಕ್ತಿ ರಫೀಕ್ ಮಾಸ್ಟರ್ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಬಗ್ಗೆ ತರಬೇತಿ ನೀಡಿದರು. ಸಮಾಜ ಸೇವಕರಾದ ಸೈಯದ್ ತಾಜ್, ಡಾಕ್ಟರ್ ಬಶೀರ್, ತೌಫಿಕ್ ಅಹ್ಮದ್, ಶಿಕ್ಷಕಿ ಶಮಾ ಅಮ್ರನ್, ಕಬೀರ್ ಅಹ್ಮದ್, ಇಲ್ಯಾಸ್ ಉಪಸ್ಥಿತರಿದ್ದರು.