×
Ad

ಪಿಎಂಎವೈ ವಸತಿ ಯೋಜನೆಯಲ್ಲಿ ಅಕ್ರಮವೆಸಗಿದವರಿಗೆ ಕಠಿಣ ಶಿಕ್ಷೆ : ಸಚಿವ ಕೃಷ್ಣಬೈರೇಗೌಡ

Update: 2025-09-06 23:49 IST

ಹಾಸನ : ಪ್ರಧಾನಮಂತ್ರಿ ಅವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ಮನೆ ಮಂಜೂರಾತಿ ವೇಳೆ ಅಕ್ರಮ ನಡೆದಿರುವುದು ಬಹಿರಂಗವಾಗಿದ್ದು, ಇದರ ಹಿಂದೆ ಯಾರೇ ಇದ್ದರೂ ಶಿಕ್ಷೆ ಅನಿವಾರ್ಯ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಮನೆಗಳಿಗೆ ಮಂಜೂರಾದ ಹಣವನ್ನು ನಕಲಿ ವಿಧಾನಗಳಲ್ಲಿ ಬೇರೆಯವರ ಹೆಸರಿಗೆ ವರ್ಗಾಯಿಸುವ ಮೂಲಕ ದುರುಪಯೋಗ ಮಾಡಲಾಗಿದೆ. ಫಲಾನುಭವಿಗಳಿಗೆ ಸಿಗಬೇಕಾದ ಹಣವನ್ನು ಅಕ್ರಮವಾಗಿ ಲೂಟಿ ಮಾಡಿರುವುದು ಗಂಭೀರ ಅಪರಾಧ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ನೋಡಲ್ ಅಧಿಕಾರಿ ರಾಜೇಶ್ ಎಂಬಾತ ಈ ಹಗರಣದ ಪ್ರಮುಖ ಸೂತ್ರಧಾರಿ ಎಂದು ಶಂಕೆ ವ್ಯಕ್ತವಾಗಿದೆ. ಸಕಲೇಶಪುರದಲ್ಲಿ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದ ನಂತರ, ಅರಸೀಕೆರೆಯ ಗ್ರಾಮ ಪಂಚಾಯತ್‌ವೊಂದರಲ್ಲಿಯೂ ಅಕ್ರಮ ಪತ್ತೆಯಾಗಿದೆ. ಅಲ್ಲಿನ ಪಿಡಿಒ ವಿರುದ್ಧ ಈಗಾಗಲೇ ಅಮಾನತು ಕ್ರಮಕೈಗೊಳ್ಳಲು ಸಚಿವರು ಸೂಚಿಸಿದ್ದಾರೆ. ಈ ಅಕ್ರಮದ ಮೂಲಹಂತದ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ. ಆದರೆ ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆತ ಎಲ್ಲಿದ್ದರೂ ಕೂಡಲೇ ಬಂಧಿಸುವಂತೆ ಎಸ್ಪಿಗೆ ಸೂಚಿಸಿದ್ದೇನೆ. ಕೇವಲ ಬಂಧನ ಸಾಕಾಗದು, ಶಿಕ್ಷೆಯೂ ಖಚಿತವಾಗಬೇಕು. ಕಾನೂನು ಪ್ರಕಾರ ವಂಚನೆ ಪ್ರಕರಣ ದಾಖಲಿಸಿ ಜೈಲು ಶಿಕ್ಷೆ ವಿಧಿಸಲೇಬೇಕು ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ, ಎಂಎಲ್.ಸಿ ಮಾಜಿ ಸದಸ್ಯ ಗೋಪಾಲಸ್ವಾಮಿ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News