ಹಾಸನ | 1 ಕೆಜಿ ಚಿನ್ನಾಭರಣ, 15 ಲಕ್ಷ ರೂ.ಗೂ ಅಧಿಕ ನಗದು ಕಳ್ಳತನ
ಹಾಸನ, ಆ.23 : ಇಲ್ಲಿನ ಸದಾಶಿವ ನಗರದ ಮನೆಯೊಂದರಲ್ಲಿ ಬರೋಬ್ಬರಿ 1 ಕೆಜಿ ಚಿನ್ನಾಭರಣ, 15 ಲಕ್ಷ ರೂ.ಗೂ ಅಧಿಕ ನಗದನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಖಾಸಗಿ ಬ್ಯಾಂಕ್ ಉದ್ಯೋಗಿ ನವೀನ್ ಎಂಬವರ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ವರ ಮಹಾಲಕ್ಷ್ಮೀ ಹಬ್ಬಕ್ಕೆಂದು ಬ್ಯಾಂಕ್ ಲಾಕರ್‌ನಿಂದ ಕೋಟ್ಯಂತರ ರೂ. ಬೆಲೆ ಬಾಳುವ ಚಿನ್ನ ಬೆಳ್ಳಿ ಆಭರಣಗಳನ್ನು ಮನೆಗೆ ತರಲಾಗಿತ್ತು.
ಗುರುವಾರ ರಾತ್ರಿ ಮನೆಗೆ ಬೀಗ ಹಾಕಿ ಇಡೀ ಕುಟುಂಬ ಹೊರ ಹೋಗಿತ್ತು. ಶನಿವಾರ ಬೆಳಗ್ಗೆ 8 ಗಂಟೆಗೆ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ತಿಳಿದುಬಂದಿದೆ. ಮನೆಯ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು, ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿ ಆಗಿದ್ದಾರೆ. ಪತ್ನಿ ತಾಯಿಯ ಮನೆಯಲ್ಲೇ ನವೀನ್ ಕುಟುಂಬ ಸಮೇತರಾಗಿ ವಾಸವಾಗಿದ್ದರು. ತಾವು ವಾಸವಿದ್ದ ಮನೆಯ ಎದುರಿನಲ್ಲೇ ನವೀನ್ ಹೊಸ ಮನೆ ನಿರ್ಮಾಣ ಮಾಡುತ್ತಿದ್ದಾರೆ.
ಆ ಹೊಸ ಮನೆಯ ಕಾಮಗಾರಿಗೆಂದೇ ದೊಡ್ಡ ಪ್ರಮಾಣದ ಹಣವನ್ನು ಮನೆಯಲ್ಲಿ ಇಟ್ಟಿದ್ದರು. ಒಂದು ರಾತ್ರಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಪೆನ್ಸನ್ ಮೊಹಲ್ಲಾ ಠಾಣೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆರೋಪಿಗಳ ಪತ್ತೆಗೆ ಎಸ್ಪಿ ಮೊಹಮದ್ ಸುಜೀತಾ ಅವರು ವಿಶೇಷ ತನಿಖಾ ತಂಡ ರಚನೆ ಮಾಡಿದ್ದು, ಆರೋಪಿಗಳ ಪತ್ತೆಗೆ ಖಾಕಿ ಪಡೆ ಬಲೆ ಬೀಸಿದೆ.