ಹಾಸನ ಜಿಲ್ಲೆಯಲ್ಲಿ 26 ದಿನಗಳಲ್ಲಿ ಹೃದಯಾಘಾತದಿಂದ 9 ಮಂದಿ ಮೃತ್ಯು
ಸಾಂದರ್ಭಿಕ ಚಿತ್ರ | PC : grok
ಹಾಸನ : ಜಿಲ್ಲಾದ್ಯಂತ ಕಳೆದ 26 ದಿನಗಳಲ್ಲಿ ಹೃದಯಾಘಾತದಿಂದ ಒಟ್ಟು 9 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಇತ್ತೀಚಿನ ದುರಂತ: ಹಾಸನದ ಕಾಂತರಾಜು (51) ಎಂಬವರಿಗೆ ಮೊದಲ ಬಾರಿಗೆ ಹೃದಯಾಘಾತವಾಗಿತ್ತು. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆದು, ಸ್ಟಂಟ್ ಅಳವಡಿಸಲಾಯಿತು. ಆದರೆ ಆರೋಗ್ಯ ಚೇತರಿಕೆಯಾಗದ ಕಾರಣ ಅವರನ್ನು ಬೆಂಗಳೂರಿನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮತ್ತೊಮ್ಮೆ ಹೃದಯಾಘಾತದಿಂದ ಅವರು ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮುನ್ನ ನಡೆದ ಹೃದಯಾಘಾತ ಮರಣಗಳ ವಿವರ:
ನಿಶಾಂತ್: ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ನಿವಾಸಿ ಚನ್ನಕೇಶವ ಮತ್ತು ಜ್ಯೋತಿ ದಂಪತಿಯ ಪುತ್ರ ನಿಶಾಂತ್ (19) ಮೇ 20ರಂದು ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದರು.
ಸಂಧ್ಯಾ: ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ಪೂರ್ಣಿಮಾ ಎಂಬವರ ಪುತ್ರಿ ಸಂಧ್ಯಾ (19) ಹೃದಯಾಘಾತದಿಂದ ಸಾವನ್ನಪ್ಪಿದರು ಎನ್ನಲಾಗಿದೆ.
ಅಭಿಷೇಕ್: ಹಾಸನದ ಅನಸೂಯ-ರಾಮಕೃಷ್ಣ ದಂಪತಿಯ ಪುತ್ರ, ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಅಭಿಷೇಕ್ (19) ಹೃದಯಾಘಾತದಿಂದ ಸಾವನ್ನಪ್ಪಿದರು ಎನ್ನಲಾಗಿದೆ.
ಕವನ: ಕೆಲವತ್ತಿ ಗ್ರಾಮದ ಪಾಪಣ್ಣ-ಗಾಯತ್ರಿ ದಂಪತಿಯ ಪುತ್ರಿ ಕವನ (21) ಹೃದಯಾಘಾತದಿಂದ ನಿಧನರಾದರು ಎನ್ನಲಾಗಿದೆ.
ಸತೀಶ್: ಹಾಸನ ನಗರದ ತೆಲುಗರ ಬೀದಿಯಲ್ಲಿರುವ ಮೆಡಿಕಲ್ ಶಾಪ್ ಮಾಲಕ ಸತೀಶ್ (57) ಪ್ರತಿದಿನದಂತೆ ವಾಕಿಂಗ್ ಮುಗಿಸಿ ಮನೆಗೆ ಬಂದ ತಕ್ಷಣ ಎದೆನೋವು ಕಾಣಿಸಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದರು ಎನ್ನಲಾಗಿದೆ.
ದೇವರಾಜು: ತಾಲೂಕಿನ ದುಮ್ಮಗೆರೆ ಗ್ರಾಮದ ನಿವಾಸಿ ದೇವರಾಜು (43)ಎಂಬವರು ರಾಜಘಟ್ಟ ಬಳಿ ಕಾರು ನಿಲ್ಲಿಸಿ ನಿದ್ರಿಸುತ್ತಿದ್ದ ವೇಳೆ ಹೃದಯಾಘಾತದಿಂದ ಕಾರಿನಲ್ಲೇ ಮೃತರಾದರು ಎನ್ನಲಾಗಿದೆ.
ನವೀನ್ ಕುಮಾರ್: ಹಾಸನ ತಾಲೂಕಿನ ಅಗಲಹಳ್ಳಿ ಕೊಪ್ಪಲು ಗ್ರಾಮದ ನಿವಾಸಿ ನವೀನ್ ಕುಮಾರ್(21)ಹೃದಯಾಘಾತದಿಂದ ನಿಧನರಾದರು ಎನ್ನಲಾಗಿದೆ.
ನಾಗಪ್ಪ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ನಾಗಪ್ಪ(55) ಎಂಬವರು ಹೃದಯಾಘಾತದಿಂದ ಬಸ್‌ನಲ್ಲಿಯೇ ಮೃತಪಟ್ಟಿರುವ ಘಟನೆ ಆಲೂರು ತಾಲೂಕು ಮಗ್ಗೆ ಬಳಿ ಇತ್ತೀಚೆಗೆ ನಡೆದಿರುವುದು ವರದಿಯಾಗಿದೆ.