×
Ad

ಹಾಸನದ ಡಾ. ಎಂ.ಸಿ. ರಂಗಸ್ವಾಮಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ಕೃಷಿ ಕ್ಷೇತ್ರದಲ್ಲಿ ನವೀನ ಸಾಧನೆಗಳಿಗೆ ಸರ್ಕಾರದ ಗೌರವ

Update: 2025-10-30 20:59 IST

 ಡಾ. ಎಂ.ಸಿ. ರಂಗಸ್ವಾಮಿ

ಹಾಸನ, ಅ.30: ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದ ಪ್ರಗತಿಪರ ರೈತ ಡಾ. ಎಂ.ಸಿ. ರಂಗಸ್ವಾಮಿ ಅವರನ್ನು 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕೃಷಿ ಕ್ಷೇತ್ರದಲ್ಲಿ ನವೀನತೆ, ತಂತ್ರಜ್ಞಾನ ಅಳವಡಿಕೆ ಹಾಗೂ ಮಾದರಿ ಕೃಷಿ ಪದ್ಧತಿಗಳ ಮೂಲಕ ಅವರು ವಿಶಿಷ್ಟ ಸಾಧನೆಗೈದಿದ್ದಾರೆ. ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕುರಿ-ಮೇಕೆ, ಕೋಳಿ, ಮೀನು ಹಾಗೂ ಜೇನು ಸಾಕಣೆ ಸೇರಿದಂತೆ ಹಲವಾರು ಚಟುವಟಿಕೆಗಳನ್ನು 600 ಎಕರೆ ಪ್ರದೇಶದಲ್ಲಿ ಸಮಗ್ರವಾಗಿ ಅಳವಡಿಸಿಕೊಂಡು ಯಶಸ್ವಿ ಕೃಷಿ ಮಾದರಿಯನ್ನು ನಿರ್ಮಿಸಿರುವ ಅವರು, ರೈತರ ಗಮನಸೆಳೆದಿದ್ದಾರೆ.

ಇಸ್ರೇಲ್‌ನ ಆಧುನಿಕ ತಂತ್ರಜ್ಞಾನದಿಂದ ಪ್ರೇರಿತವಾಗಿ ಸ್ಥಾಪಿಸಿದ ಡೈರಿ ಫಾರಂ ಅವರ ನವೀನ ಪ್ರಯತ್ನವಾಗಿದೆ. ಹಾಲು ಕರೆಯುವುದು, ಸೆಗಣಿ ನಿರ್ವಹಣೆ ಹಾಗೂ ಜಾನುವಾರುಗಳಿಗೆ ಆಹಾರ ಪೂರೈಕೆ ಸೇರಿದಂತೆ ಎಲ್ಲಾ ಕಾರ್ಯಗಳನ್ನು ಸಂಪೂರ್ಣ ಯಾಂತ್ರೀಕೃತವಾಗಿ ನಡೆಸುವ ಈ ಡೈರಿ, ಗ್ರಾಮೀಣ ಆರ್ಥಿಕತೆಯಲ್ಲಿ ಹೊಸ ಮಾದರಿಯಾಗಿದೆ.

ರಾಜ್‌ಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಲನಚಿತ್ರದಿಂದ ಸ್ಫೂರ್ತಿ ಪಡೆದ ಅವರು ತಂಬಾಕು ಬೆಳೆಯಿಂದ ದೂರ ಸರಿದು ಶ್ರೀಗಂಧ, ಏಲಕ್ಕಿ ಮತ್ತು ಇತರ ವಾಣಿಜ್ಯ ಬೆಳೆಗಳತ್ತ ಮುಖಮಾಡಿ ಕೃಷಿಯಲ್ಲಿ ಹೊಸ ಮಾದರಿ ನಿರ್ಮಿಸಿದ್ದಾರೆ.

ಅವರ ನವೀನ ಕೃಷಿ ತಂತ್ರಜ್ಞಾನಗಳು ಮತ್ತು ನವೋದ್ಯಮಕ್ಕೆ ಗೌರವ ಸೂಚಕವಾಗಿ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (GKVK) ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಸನ್ಮಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News