ಸಕಲೇಶಪುರ: ಹಾಡಹಗಲೇ ಪುರಸಭೆ ಕಚೇರಿ ಕಡತಗಳಿಗೆ ಬೆಂಕಿ ಹಚ್ಚಿ ಪರಾರಿ
ಸಕಲೇಶಪುರ: ಬೀದಿಯಲ್ಲಿ ತರಕಾರಿ ಮಾರಾಟ ಮಾಡಲು ಪುರಸಭೆ ಅವಕಾಶ ನೀಡಲಿಲ್ಲ ಎಂದು ಆಕ್ರೋಶಗೊಂಡ ವ್ಯಕ್ತಿಯೋರ್ವ ಪುರಸಭೆಗೆ ನುಗ್ಗಿ ಮುಖ್ಯ ಅಧಿಕಾರಿ ಕಚೇರಿಯ ಟೇಬಲ್ ಮೇಲಿನ ಕಡತಗಳಿಗೆ ಬೆಂಕಿ ಹಚ್ಚಿದ ಘಟನೆ ಶುಕ್ರವಾರ ಸಂಜೆ 4:00ಗೆ ನಡೆದಿರುವುದು ವರದಿಯಾಗಿದೆ.
ನಿಂಗರಾಜ್ ಬೆಂಕಿ ಹಚ್ಚಿರುವ ವ್ಯಕ್ತಿ ಎಂದು ತಿಳಿದು ಬಂದಿದೆ. ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದ ಮುಂಭಾಗ ಈತ ಹಾಗೂ ಸಹೋದರ ಅಣ್ಣಪ್ಪ, ಹಲವು ದಿನಗಳಿಂದ ತರಕಾರಿ ಮಾರಾಟ ಮಾಡುತ್ತಿದ್ದು, ಈ ಪ್ರದೇಶದಲ್ಲಿ ತರಕಾರಿ ಮಾರಾಟ ಮಾಡದಂತೆ ಪುರಸಭೆಯ ಅಧಿಕಾರಿಗಳು ತಾಕೀತು ಮಾಡಿದ್ದರು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಈ ಸ್ಥಳದಲ್ಲಿ ಪಟಾಕಿ ಅಂಗಡಿಗಳನ್ನು ಹಾಕಲಾಗಿತ್ತು ಈ ನಿಟ್ಟಿನಲ್ಲಿ ತರಕಾರಿ ಅಂಗಡಿಯನ್ನು ಪಕ್ಕಕ್ಕೆ ಹಾಕಿಕೊಳ್ಳುವಂತೆ ಸೂಚಿಸಲಾಗಿತ್ತು ಎನ್ನಲಾಗಿದೆ.
ಈ ಬಗ್ಗೆ ನಿಂಗರಾಜ್ ಆಕ್ಷೇಪ ವ್ಯಕ್ತಪಡಿಸಿ ಮಧ್ಯಾಹ್ನ ಸುಮಾರು 2:30ರ ಸಮಯಕ್ಕೆ ಪುರಸಭೆಗೆ ಬಂದು ಗಲಾಟೆ ಮಾಡಿದ್ದ. ನಂತರ ನಾಲ್ಕು ಗಂಟೆಯ ಸಮಯದಲ್ಲಿ ಮುಖ್ಯ ಅಧಿಕಾರಿಯ ಕಚೇರಿಗೆ ಬಂದು ಕಡತಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಓಡಿ ಹೋಗಿದ್ದಾನೆ ಎಂದು ವರದಿಯಾಗಿದೆ.
ಈ ಸಂದರ್ಭದಲ್ಲಿ ಕಚೇರಿಯಲ್ಲಿ ಮುಖ್ಯ ಅಧಿಕಾರಿ ಇರಲಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.