ಕರಾವಳಿಯಲ್ಲಿ ಕೋಮು ಹಿಂಸಾಚಾರ | ಸೌಹಾರ್ದ ಕರ್ನಾಟಕದಿಂದ ಸಮಾಲೋಚನಾ ಸಭೆ
ಹಾಸನ : ಮಂಗಳೂರು ಹಾಗೂ ಕರಾವಳಿ ಭಾಗದಲ್ಲಿ ಇತ್ತೀಚೆಗೆ ವ್ಯಾಪಕವಾದ ಕೋಮು ಹಿಂಸಾಚಾರಗಳ ಬಗ್ಗೆ ಆತಂಕ ವ್ಯಕ್ತಪಡಿಸಿ, ಸೌಹಾರ್ದ ಕರ್ನಾಟಕ ಸಂಸ್ಥೆಯ ಹಾಸನ ಜಿಲ್ಲಾ ಘಟಕದ ವತಿಯಿಂದ ನಗರದ ಆರ್.ಸಿ. ರಸ್ತೆಯ ಮಿಷನ್ ಆಸ್ಪತ್ರೆ ಎದುರಿನ ಶ್ರಮ ಕಚೇರಿಯಲ್ಲಿ ಸಮಾಲೋಚನಾ ಸಭೆ ನಡೆಸಲಾಯಿತು.
ಸಭೆಯಲ್ಲಿ ಸಿಪಿಐ(ಎಂ) ಮುಖಂಡ ಮುನೀರ್ ಕಾಟಿಪಳ್ಳ ಮಾತನಾಡಿ, ಧರ್ಮಾಧಾರಿತ ರಾಜಕೀಯ ದಾಳಿಗಳು ಹಾಗೂ ಸಂಘಟಿತ ಕೋಮು ಹಿಂಸಾಚಾರಗಳು ಕರಾವಳಿಯಲ್ಲಿ ಭಯದ ವಾತಾವರಣವನ್ನು ರೂಪಿಸುತ್ತಿವೆ ಎಂದು ಹೇಳಿದರು.
ಕರಾವಳಿಯಲ್ಲಿ ನಡೆಯುತ್ತಿರುವ ಅಶಾಂತಿಯ ವಾತಾವರಣವು ಅಲ್ಲಿಗೆ ಸೀಮಿತವಾದ ಸಮಸ್ಯೆಯಲ್ಲ, ಇದು ದೇಶದ ಸಮಸ್ಯೆಯಾಗಿದೆ. ಇಲ್ಲಿನ ಶಾಂತಿಯ ವಾತಾವರಣಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಕರಾವಳಿಯಲ್ಲಿ ಶಾಂತಿ ನೆಲೆಸಲಿ, ನಾವು ಸಹ ನೆಮ್ಮದಿಯಿಂದ ಬದುಕುವ ವಾತಾವರಣ ಮೂಡಲಿ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಜನಪರ ಹೋರಾಟಗಾರ ಧರ್ಮೇಶ್ ಮಾತನಾಡಿ, ಕರಾವಳಿಯಲ್ಲಿ ನೆಮ್ಮದಿ ಮರುಸ್ಥಾಪನೆಗೆ ಪ್ರಯತ್ನಿಸುವ ಜವಾಬ್ದಾರಿ ಪ್ರತಿಯೊಬ್ಬರಿಗೂ ಇದೆ. ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳ ಪ್ರತಿನಿಧಿಗಳು ಕೈಜೋಡಿಸಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶಮೂರ್ತಿ ಮಾತನಾಡಿ, ಸರ್ವಧರ್ಮೀಯರು ರಚನಾತ್ಮಕ ಕೆಲಸಗಳಲ್ಲಿ ತೊಡಗಬೇಕು. ಪರಿಸರ ಸಂರಕ್ಷಣೆಯಂತಹ ಪ್ರಗತಿಪರ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಕರಾವಳಿಯಲ್ಲಿ ಕೈ ಕೈ ಜೋಡಿಸಿ ಸಮಾಜವನ್ನು ಕಟ್ಟುವ ಕಾರ್ಯವಾಗಬೇಕು ಎಂದರು
ಸಭೆಯಲ್ಲಿ ಆರ್.ಪಿ.ಐ. ಮುಖಂಡ ಸತೀಶ್, ರೂಪಾ ಹಾಸನ ಮಾತನಾಡಿದರು. ಈ ಸಂದರ್ಭದಲ್ಲಿ ನಾಗರಾಜ್ ಹೆತ್ತೂರು, ತೌಫೀಕ್ ಅಹಮದ್, ಪೃಥ್ವಿ, ಸಮೀರ್, ಮಲ್ನಾಡ್ ಮೆಹಬೂಬ್, ಮುಬಶ್ಶಿರ್ ಅಹ್ಮದ್, ಮಹೇಶ್, ಅರವಿಂದ್, ರಮೇಶ್, ಪ್ರೇಮದೇಶ್ ಸಹಿತ ಹಲವರು ಭಾಗವಹಿಸಿದ್ದರು.
ನವೀನ್ ಕುಮಾರ್ ಹಾಗೂ ಪೃಥ್ವಿ ಎಂ.ಜಿ. ಸಭೆಯನ್ನು ಆಯೋಜಿಸಿ ಆತಿಥ್ಯ ವಹಿಸಿದ್ದರು.
ಸಮಾರಂಭದಲ್ಲಿ ಹಲವು ನಾಗರಿಕ ಹೋರಾಟಗಾರರು, ಪ್ರಜಾಪ್ರತಿನಿಧಿಗಳು, ವಿವಿಧ ಸಂಘಟನೆಗಳ ಸದಸ್ಯರು ಪಾಲ್ಗೊಂಡು, ಸಮಾಜದಲ್ಲಿ ಧಾರ್ಮಿಕ ಸಹಿಷ್ಣುತೆ, ಸಹಬಾಳ್ವೆ ಹಾಗೂ ಸಂವಾದದ ಸಂಸ್ಕೃತಿಯನ್ನು ಬೆಳೆಸುವ ಕುರಿತು ಚರ್ಚಿಸಿದರು.
ನಿರ್ಣಯಗಳು
ಜೂ.30 ರಂದು ಹಾಸನದ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಕರಾವಳಿಯಲ್ಲಿ ಶಾಂತಿಯ ಸಮಾಜ ನಿರ್ಮಾಣಕ್ಕಾಗಿ ಸರಕಾರ ಮುಂದಾಗಲಿ ಎಂಬ ನಾಮಫಲಕದೊಂದಿಗೆ ಮನವಿ ಸಲ್ಲಿಸಲಾಗುವುದು.
ಮಂಗಳೂರಿನಲ್ಲಿ ಸೌಹಾರ್ದವನ್ನು ಉತ್ತೇಜಿಸುವ ಕಾವ್ಯ-ಸಾಹಿತ್ಯ, ಪರಿಸರ ಹಾಗೂ ಜಾತಿಗೆ ಸಂಬಂಧಿಸಿದ ಚಿಂತನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ದ್ವೇಷ ಭಾಷಣಗಳನ್ನು ಮಾಡುವ ಹಾಗೂ ಸೌಹಾರ್ದವನ್ನು ಹಾಳುಮಾಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರಕಾರಕ್ಕೆ ಒತ್ತಾಯಿಸಲಾಯಿತು.
ಮುಂದಿನ ದಿನಗಳಲ್ಲಿ ಜನಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳುವ ನಿರ್ಧಾರ ಕೈಗೊಳ್ಳಲಾಯಿತು