×
Ad

ಅವಮಾನವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಆತ್ಮ ಚಿಂತನೆಯಿಂದ ಬರಬೇಕು : ಪ್ರಸಾದ್ ರಕ್ಷಿದಿ

Update: 2025-07-14 17:48 IST

ಸಕಲೇಶಪುರ: “ಅವಮಾನವನ್ನು ಶಾಂತಿಯುತವಾಗಿ ನಿರ್ವಹಿಸುವ ಶಕ್ತಿಯೇ ಮಾನವೀಯ ಸಂಸ್ಕೃತಿಯ ಮೌಲ್ಯ. ಪ್ರತಿಕ್ರಿಯೆ ನೀಡುವ ತೀವ್ರತೆಗಿಂತ ತಾಳ್ಮೆಯಿಂದ ಪ್ರತಿಕ್ರಿಯಿಸದಿರುವ ಪ್ರಜ್ಞೆ ಹೆಚ್ಚು ಶ್ರೇಷ್ಟ” ಎಂದು ಸಾಹಿತಿ ಹಾಗೂ ರಂಗಕರ್ಮಿ ಪ್ರಸಾದ್ ರಕ್ಷಿದಿ ಅಭಿಪ್ರಾಯಪಟ್ಟರು.

ಪಟ್ಟಣದ ಲಯನ್ಸ್ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಕಾರ್ಯನಿರತ ಪತ್ರಕರ್ತರ ಸಂಘ, ಡ್ರಗ್ಸ್ ಮುಕ್ತ ಸಕಲೇಶಪುರ ಆಂದೋಲನ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಲೇಖಕ ಮಲ್ನಾಡ್ ಮೆಹಬೂಬ್ ಅವರ ‘ಮಲ್ನಾಡ್ ಮನಸ್ಸು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕದ ಬಗ್ಗೆ ಮಾತನಾಡಿದ ಅವರು, “ಸಾಮಾಜಿಕವಾಗಿ ಅವಮಾನಗಳು ಅನಿವಾರ್ಯ. ಆದರೆ, ಅವಮಾನವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಆತ್ಮ ಚಿಂತನೆಯಿಂದ ಬರಬೇಕು. ಅದನ್ನು ಮೀರಿ ಬದುಕಬೇಕು" ಎಂದರು.

ʼಮೆಹಬೂಬ್ ಅವರ ಬರಹಗಳು ಈ ಒಳನೋಟಕ್ಕೆ ದಾರಿ ಮಾಡಿಕೊಡುವ ಸಾಮರ್ಥ್ಯ ಹೊಂದಿವೆ. ಅವರು ಬದುಕಿನ ನೋವು, ಧೈರ್ಯ, ಮತ್ತು ನಿರಾಳತೆಯನ್ನು ಅಕ್ಷರ ರೂಪದಲ್ಲಿ ಸೆರೆಹಿಡಿದಿದ್ದಾರೆʼ ಎಂದರು.

“ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಸಮಾಜದ ಪಾತ್ರ ಬಗ್ಗೆ ಪರಿಣಾಮಕಾರಿ ಲೇಖನಗಳಿವೆ. ಬದುಕಿನ ಗಂಭೀರ ಸ್ಥಿತಿಯಲ್ಲಿ ತೆಗೆದುಕೊಳ್ಳಬೇಕಾದ ಅನಿವಾರ್ಯ ನಿರ್ಣಯಗಳ ಬಗ್ಗೆ, ಸಾಹಿತಿಗಳ ಪರಿಚಯ, ಓದುವ, ಬರೆಯುವ ಮತ್ತು ಸಮಾಜದೊಂದಿಗೆ ಬೆರೆತು ಬಾಳುವ ಪ್ರಾಮುಖ್ಯತೆಯ ಬಗ್ಗೆ ಲೇಖನಗಳು ಉತ್ತಮವಾಗಿವೆ” ಎಂದರು.

ಮಾಜಿ ಶಾಸಕ ಹಾಗೂ ಡ್ರಗ್ಸ್ ಮುಕ್ತ ಭಾರತ ಆಂದೋಲನದ ಪ್ರಮುಖರಾದ ಎಚ್.ಎಮ್. ವಿಶ್ವನಾಥ್ ಮಾತನಾಡಿ, “ನೋವು-ನಲಿವಿನ ಸಂಗ್ರಹವಾದ ಈ ಪುಸ್ತಕ ತಾತ್ವಿಕತೆಗೆ ತಾಕಲಾಡುತ್ತದೆ. ಸಮಾಜವನ್ನು ಇಂದು ಡ್ರಗ್ಸ್ ಕಾಡುತ್ತಿದೆ. ಪ್ರಮುಖವಾಗಿ ಯುವಜನಾಂಗವನ್ನು ಇದರಿಂದ ಮುಕ್ತಗೊಳಿಸಲು ಸಮಾಜ ಒಂದಾಗಬೇಕು. ಆಗಸ್ಟ್ 21ರಂದು ಸಕಲೇಶಪುರದಲ್ಲಿ ಸಮಾವೇಶ ನಡೆಯಲಿದೆ,” ಎಂದರು.

ಸಾಮಾಜಿಕ ಕಾರ್ಯಕರ್ತ ಯಡೇಹಳ್ಳಿ ಮಂಜುನಾಥ್ ಮಾತನಾಡಿ, “ ‘ಮಲ್ನಾಡ್ ಮನಸ್ಸು’ ಎಂಬ ಕೃತಿಯು ನುಡಿದಂತೆ ಬದುಕುವ ವ್ಯಕ್ತಿಯ ಬದುಕಿನ ಪ್ರತಿಫಲನವಾಗಿದೆ. ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವವರು ನಿಜವಾದ ಬರಹಗಾರರು. ಈ ಬರವಣಿಗೆಗಳು ಮೌನವಾಗಿರುವವರಿಗೂ ಮಾತು ಕೊಟ್ಟಂತಿವೆ,” ಎಂದರು.

ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಕೆ. ಮುಸ್ಲಿಯಾರ್ ಮಾತನಾಡಿ, ಮೆಹಬೂಬ್ ಎಂದರೆ ಪ್ರೀತಿಗೆ ಅರ್ಹರು. ಹೆಸರಿಗೆ ತಕ್ಕಂತೆ ಅವರು ಧರ್ಮ, ಜಾತಿ, ವರ್ಣ ಎಲ್ಲರೊಂದಿಗೂ ಸಮಾನವಾಗಿ ಬೆರೆಯುವ ವ್ಯಕ್ತಿ. ತಮ್ಮ ಸುತ್ತಲಿನ ಅಸಮತೋಲನಗಳ ಕುರಿತು ಧೈರ್ಯವಾಗಿ ಮಾತನಾಡುವ ಗಟ್ಟಿನಡತೆ ಅವರದು. ಅವರ ಬರಹಗಳು ಬಂಡಾಯಕ್ಕೆ, ಜನಪರವಾದ ಧ್ವನಿಗೆ, ಮತ್ತು ಆರೋಗ್ಯಕರ ಸಾಮಾಜಿಕ ಕಳಕಳಿಗೆ ಖ್ಯಾತಿಯಾಗಿವೆ. ಈ ಪುಸ್ತಕ ಸಮಾಜಮುಖಿಯಾಗಿದೆ” ಎಂದರು.

ಲೇಖಕ ಮಲ್ನಾಡ್ ಮೆಹಬೂಬ್ ಮಾತನಾಡಿ, “ಇಷ್ಟು ಜನರು ಕಾರ್ಯಕ್ರಮಕ್ಕೆ ಬಂದು ಪ್ರೋತ್ಸಾಹ ನೀಡಿದ್ದು ನನಗೆ ಅತೀವ ಸಂತೋಷ ತಂದಿದೆ. ಓದು ಮತ್ತು ಬರವಣಿಗೆ ಎಷ್ಟೇ ತೀವ್ರವಾದರೂ, ಸಮಾನ ಮನಸ್ಕರ ಬೆಂಬಲವೇ ಬರಹಗಾರನಿಗೆ ಬಲ. ‘ಮಲ್ನಾಡ್ ಮನಸ್ಸು’ ನನ್ನ ಅನುಭವಗಳ ಸಂಗ್ರಹ. ಓದುಗರಿಗೆ ಇದು ಆಂತರಿಕ ಬೆಳಕಾಗಲಿ” ಎಂದರು.

ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್, ಭೀಮ ವಿಜಯ ಪತ್ರಿಕೆ ಸಂಪಾದಕರಾದ ಹೆತ್ತೂರು ನಾಗರಾಜ್‌, ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಾರದಾ ಗುರುಮೂರ್ತಿ, ಬಿಜೆಪಿ ಮುಖಂಡ ಜೈ ಮಾರುತಿ ದೇವರಾಜ್ ಮಾತನಾಡಿದರು.

ವೇದಿಕೆಯಲ್ಲಿ ‘ನಮ್ಮ ಹಾಸನ ಟಿವಿ’ ಸಂಪಾದಕ ತೌಫೀಕ್ ಅಹಮದ್, ಜಾಮಿಯ ಮಸೀದಿ ಉಪಾಧ್ಯಕ್ಷ ಅಸ್ಲಾಂ, ಹಿರಿಯ ದಲಿತ ಮುಖಂಡ ಹೆತ್ತೂರು ಅಣ್ಣಯ್ಯ ಉಪಸ್ಥಿತರಿದ್ದರು.

ಪತ್ರಕರ್ತರ ಸಂಘದ ಅಧ್ಯಕ್ಷ ಜೈ ಭೀಮ್ ಮಂಜು ಕಾರ್ಯಕ್ರಮವನ್ನು ನಿರೂಪಿಸಿದರು. ಸಾಸು ವಿಶ್ವನಾಥ್ ಕೊಳಲುವಾದನದ ಮೂಲಕ ಸ್ವಾಗತಿಸಿದರೆ, ಸಾಹಿತ್ಯ ಪರಿಷತ್ ಕಾರ್ಯದರ್ಶಿ ಯೋಗೇಶ್ ಸ್ವಾಗತ ಭಾಷಣ ಮಾಡಿದರು. ಪತ್ರಕರ್ತ ಅಕ್ಬರ್ ಜುನೈದ್ ವಂದನೆ ಸಲ್ಲಿಸಿದರು.

 

ಭಾನು ಮುಷ್ತಾಕ್ ಕುರಿತು ಟೀಕೆಗೆ ಸಭೆಯಲ್ಲಿ ಖಂಡನೆ :

ಅಂತರಾಷ್ಟ್ರೀಯ ಖ್ಯಾತಿಯ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಭಾನು ಮುಷ್ತಾಕ್ ಬಗ್ಗೆ ಲೇಖಕ ಓಬಳೇಶ್ ಗಟ್ಟಿ ಬಹಳ ಹಗುರವಾಗಿ ಮಾತನಾಡಿರುವ ಕುರಿತು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಖಂಡನೆಯ ಕೇಳಿಬಂತು.

ಪತ್ರಕರ್ತ ಹೆತ್ತೂರು ನಾಗರಾಜ್ ಅವರು, “ಇದು ಅಸಹಿಷ್ಣುತೆಯ ವ್ಯಕ್ತೀಕರಣ. ಇಂತಹ ಟೀಕೆಗಳು ಅನಾರೋಗ್ಯ ಪರಿಸರ ಸೃಷ್ಟಿಸುತ್ತದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಹೆಚ್. ಎಮ್. ವಿಶ್ವನಾಥ್ ಅವರು, “ಬಾನು ಮುಷ್ತಾಕ್ ಅವರ ಜೀವನ ಶೈಲಿ ಅದ್ಭುತ. 1992ರಲ್ಲಿ ಸಕಲೇಶಪುರದಲ್ಲಿ ನಡೆದ ಕೋಮು ಗಲಭೆಯ ಸಂದರ್ಭದಲ್ಲಿ ಶಾಂತಿ ಸ್ಥಾಪನೆಗಾಗಿ ಅವರು ಮಾಡಿದ ಪ್ರಯತ್ನ ಇಂದಿಗೂ ಸ್ಮರಣೀಯವಾಗಿದೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News