ಬಿಜೆಪಿಯವರಿಗೆ ಆರ್ಥಿಕತೆ ಅರ್ಥವಾಗುವುದಿಲ್ಲ : ಸಿಎಂ ಸಿದ್ದರಾಮಯ್ಯ
ಅರಸೀಕೆರೆ : "ತಲಾ ಆದಾಯದಲ್ಲಿ ಕರ್ನಾಟಕ ನಂಬರ್ ಒನ್ ಆಗಿದೆ. ಇದರ ಪ್ರಮುಖ ಕಾರಣ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿರುವುದು. ನಮ್ಮ ಗ್ಯಾರಂಟಿ ಯೋಜನೆಗಳು ಈ ಶಕ್ತಿ ಹೆಚ್ಚಲು ಕಾರಣ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಪಕ್ಷದವರು ಗ್ಯಾರಂಟಿ ಯೋಜನೆಗಳಿಂದ ಹಣ ಇಲ್ಲ, ಅಭಿವೃದ್ಧಿ ಆಗುತ್ತಿಲ್ಲ ಎಂದು ಟೀಕಿಸುತ್ತಿದ್ದಾರೆ. ಆದರೆ ಅದು ಸುಳ್ಳು, ಇಡೀ ದೇಶದಲ್ಲೇ ತಲಾ ಆದಾಯ ಹೆಚ್ಚಿರುವುದು ಕರ್ನಾಟಕದಲ್ಲಿ ಮಾತ್ರ. ಇದಕ್ಕೆ ಕಾರಣ ಗ್ಯಾರಂಟಿ ಯೋಜನೆ ಎಂದರು.
ವಿರೋಧ ಪಕ್ಷವನ್ನು ಟೀಕಿಸಿದ ಅವರು, “ಬಿಜೆಪಿಯವರಿಗೆ ಆರ್ಥಿಕತೆ ಅರ್ಥವಾಗುವುದಿಲ್ಲ. ಅದಕ್ಕಾಗಿ ಅವರು ರಾಜ್ಯ ಸರಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎಂದು ಸುಳ್ಳು, ಅಪಪ್ರಚಾರ ಮಾಡುತ್ತಿದ್ದಾರೆ. ಜನರ ದಾರಿ ತಪ್ಪಿಸುವ ಯತ್ನ ಮಾಡಿದರು, ಆದರೆ ರಾಜ್ಯದ ಜನತೆ ಮೋಸ ಹೋಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಗ್ಯಾರಂಟಿ ಯೋಜನೆ – ಅಭಿವೃದ್ಧಿಗೆ ಪೂರಕ :
“ಸರಕಾರದ ಸಾಧನಾ ಸಮಾವೇಶದಲ್ಲಿ ಲಕ್ಷಾಂತರ ಜನ ಫಲಾನುಭವಿಗಳು ಸೇರಿ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇದು ನುಡಿದಂತೆ ನಡೆದು ತೋರಿದ ನಮ್ಮ ಸರಕಾರದ ಸಾಧನೆ. ನಾವು ಅಭಿವೃದ್ಧಿ ಯೋಜನೆಗಳಿಗೆ 1.20 ಲಕ್ಷ ಕೋಟಿ ರೂ. ಮತ್ತು ಗ್ಯಾರಂಟಿ ಯೋಜನೆಗಳಿಗೆ 56 ಸಾವಿರ ಕೋಟಿ ರೂ. ಖರ್ಚು ಮಾಡಿ ಜನರ ಮನೆ ಬಾಗಿಲಿಗೆ ಅಭಿವೃದ್ಧಿ ತಲುಪಿಸಿದ್ದೇವೆ” ಎಂದು ಹೇಳಿದರು.
ಶಿವಲಿಂಗೇಗೌಡರಿಗೆ ಮಂತ್ರಿಯಾಗುವ ಅರ್ಹತೆ ಇದೆ:
ಶಿವಲಿಂಗೇಗೌಡರಿಗೆ ರಾಜಕೀಯ ಭವಿಷ್ಯವಿದೆ. ಮಂತ್ರಿಯಾಗುವ ಎಲ್ಲಾ ಅರ್ಹತೆ ಅವರಿಗಿದೆ. ಕ್ಷೇತ್ರದ ಜನರ ಆಶೀರ್ವಾದವೂ ಗಟ್ಟಿಯಾಗಿದೆ. ಈ ಕಾರಣಕ್ಕೇ ನಾಲ್ಕು ಬಾರಿ ಗೆದ್ದಿರುವ ಅವರು ಮುಂದಿನ ಬಾರಿಯೂ ಗೆದ್ದು ಬರುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು
ಸಿಟ್ಟಾಗಿ ಮಾತು ನಿಲ್ಲಿಸಿದ ಸಿಎಂ:
ಸಿಎಂ ಸಿದ್ದರಾಮಯ್ಯ ಭಾಷಣದ ನಡುವೆ ಶಿವಲಿಂಗೇಗೌಡ ಅವರನ್ನು ಮಂತ್ರಿ ಮಾಡಿ ಎಂದು ಜನರು ಕೂಗಲು ಆರಂಭಿಸಿದರು. ದನಿ ಜೋರಾದಾಗ ಸಿಎಂ ಸಿಟ್ಟಾಗಿ ಮಾತು ನಿಲ್ಲಿಸಿ ಕುಳಿತರು. ಆಗ ಸಚಿವ ರಾಜಣ್ಣ ಮತ್ತು ಶಿವಲಿಂಗೇಗೌಡ ಅವರು ಮನವೊಲಿಸಿ ಕರೆತಂದರು.
ಮತ್ತೆ ಮಾತು ಆರಂಭಿಸಿದ ಸಿಎಂ, ಸಚಿವರಾಗಿ ಮಾಡುವುದು ಹೈಕಮಾಂಡ್ ಹಾಗೂ ಸರಕಾರ, ಶಿವಲಿಂಗೇಗೌಡ ಅವರಿಗೆ ಸಿಎಂ ಆಗುವ ಎಲ್ಲ ಅರ್ಹತೆ ಹೊಂದಿದ್ದಾರೆ. ಈಗಾಗಲೇ 4 ಬಾರಿ ಗೆಲ್ಲಿಸಿರುವ ನೀವು, ಮುಂದೆಯೂ ಗೆಲ್ಲಿಸಿ ಎಂದು ಮನವಿ ಮಾಡಿ, ಶಿವಲಿಂಗೇಗೌಡರ ಕಾರ್ಯವೈಖರಿಯನ್ನು ಶ್ಲಾಘಿಸಿದರು.