ಯುದ್ಧದಲ್ಲಿ ರಶ್ಯದಿಂದ ನಿಷೇಧಿತ ರಾಸಾಯನಿಕ ಬಳಕೆ : ಉಕ್ರೇನ್ ಆರೋಪ
PC ; NDTV
ಕೀವ್ : ರಶ್ಯವು ಮುಂಚೂಣಿ ದಾಳಿಯ ಸಂದರ್ಭ ಅಶ್ರುವಾಯು ಸೇರಿದಂತೆ ಅಪಾಯಕಾರಿ ರಾಸಾಯನಿಕಗಳನ್ನು ವ್ಯಾಪಕವಾಗಿ ಬಳಸುತ್ತಿದೆ ಎಂದು ಉಕ್ರೇನ್ ಸೋಮವಾರ ಆರೋಪಿಸಿದೆ.
ಮೇ ತಿಂಗಳಿನಲ್ಲಿ ರಶ್ಯ ಪಡೆಗಳು ಅಪಾಯಕಾರಿ ರಾಸಾಯನಿಕ ವಸ್ತುಗಳನ್ನು ಒಳಗೊಂಡ ಮದ್ದುಗುಂಡುಗಳನ್ನು ಬಳಸಿರುವ 715 ಪ್ರಕರಣಗಳನ್ನು ದಾಖಲಿಸಲಾಗಿದೆ. ಒಂದು ತಿಂಗಳ ಹಿಂದೆ, ಎಪ್ರಿಲ್‍ನಲ್ಲಿ ರಾಸಾಯನಿಕ ಮಿಶ್ರಿತ ಮದ್ದುಗುಂಡುಗಳ ಬಳಕೆಯ ಪ್ರಮಾಣ 444 ಆಗಿತ್ತು. ರಶ್ಯ ಪಡೆಗಳು ಈ ಅಪಾಯಕಾರಿ ರಾಸಾಯನಿಕ ಮಿಶ್ರಿತ ಗ್ರೆನೇಡ್‍ಗಳನ್ನು ಮುಖ್ಯವಾಗಿ ಡ್ರೋನ್ ಮೂಲಕ ಉದುರಿಸಿವೆ. ರಶ್ಯದ ಪಡೆಗಳು ಹೆಚ್ಚಾಗಿ ಬಳಸಿರುವ ಸಿಎಸ್ ಗ್ಯಾಸ್ ಅನ್ನು ರಾಸಾಯನಿಕ ಶಸ್ತ್ರಾಸ್ತ್ರ ಸಮಾವೇಶದ(ಸಿಡಬ್ಲ್ಯೂಸಿ) ಒಪ್ಪಂದದಡಿ ನಿಷೇಧಿಸಲಾಗಿದೆ. ವಿಭಿನ್ನ ತೀವ್ರತೆಯ ರಾಸಾಯನಿಕ ಹಾನಿಯನ್ನು ಅನುಭವಿಸಿದ 1,385 ಸೈನಿಕರಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗಿದೆ ಎಂದು ಉಕ್ರೇನ್ ಹೇಳಿದೆ.
ಉಕ್ರೇನ್ ಪಡೆಗಳ ವಿರುದ್ಧ ರಶ್ಯವು ರಾಸಾಯನಿಕ ಶಸ್ತ್ರಾಸ್ತ್ರ ಬಳಸುತ್ತಿದೆ ಎಂದು ಕಳೆದ ತಿಂಗಳು ಅಮೆರಿಕವೂ ಆರೋಪಿಸಿತ್ತು. ಆದರೆ ಇದನ್ನು ರಶ್ಯ ನಿರಾಕರಿಸಿದೆ.