×
Ad

ಭ್ರಷ್ಟಾಚಾರ | ಚೀನಾ ಕಮ್ಯುನಿಸ್ಟ್ ಪಕ್ಷದಿಂದ ಇಬ್ಬರು ಮಾಜಿ ರಕ್ಷಣಾ ಸಚಿವರ ಉಚ್ಛಾಟನೆ

Update: 2024-06-27 21:47 IST

PC : NDTV

ಬೀಜಿಂಗ್: ಚೀನಾದ ಕಮ್ಯುನಿಸ್ಟ್ ಪಾರ್ಟಿ ಗುರುವಾರ ಇಬ್ಬರು ಮಾಜಿ ರಕ್ಷಣಾ ಸಚಿವರಾದ ಲಿ ಶಾಂಗ್ಫು ಮತ್ತು ವೆಯ್ ಫೆಂಗ್ರನ್ನು ಪಕ್ಷದಿಂದ ಉಚ್ಛಾಟಿಸಿದೆ ಎಂದು ಸರಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಲಿ ಅವರು ಲಂಚದ ರೂಪದಲ್ಲಿ ಭಾರೀ ಪ್ರಮಾಣದ ಹಣವನ್ನು ಪಡೆದಿರುವುದು ಮತ್ತು ಇತರರಿಗೆ ಲಂಚ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ ಅವರು ರಾಜಕೀಯ ಜವಾಬ್ದಾರಿಗಳನ್ನು ಪೂರೈಸಲಿಲ್ಲ ಮತ್ತು ವೈಯಕ್ತಿಕ ಲಾಭಕ್ಕೆ ಹೆಚ್ಚಿನ ಮಹತ್ವ ನೀಡಿ ಪಕ್ಷದ ಸಿದ್ಧಾಂತ ಮತ್ತು ರಾಷ್ಟ್ರೀಯ ಭದ್ರತೆಗೆ ಭಾರೀ ಹಾನಿ ಎಸಗಿರುವುದು ಕಮ್ಯುನಿಸ್ಟ್ ಪಕ್ಷದ ಕೇಂದ್ರೀಯ ಸಮಿತಿಯ ತನಿಖೆಯಿಂದ ದೃಢಪಟ್ಟಿದೆ. ಲಿ ಅವರನ್ನು ಸಂಸತ್ ಸದಸ್ಯತ್ವದಿಂದಲೂ ವಜಾಗೊಳಿಸಲಾಗಿದೆ ಎಂದು ವರದಿ ಹೇಳಿದೆ.

ಕಳೆದ ಅಕ್ಟೋಬರ್ನಲ್ಲಿ ಯಾವುದೇ ವಿವರಣೆ ನೀಡದೆ ಲಿ ಶಾಂಗ್ಫುರನ್ನು ರಕ್ಷಣಾ ಸಚಿವರ ಹುದ್ದೆಯಿಂದ ನಿಗೂಢವಾಗಿ ಪದಚ್ಯುತಗೊಳಿಸಲಾಗಿತ್ತು. ಅವರ ಉತ್ತರಾಧಿಕಾರಿ ವೆಯ್ ಫೆಂಗ್ರನ್ನು ಕಳೆದ ಮಾರ್ಚ್ನಲ್ಲಿ ನಡೆದ ಸಚಿವ ಸಂಪುಟದ ಪುನರ್ರಚನೆ ಸಂದರ್ಭ ಪದಚ್ಯುತಗೊಳಿಸಲಾಗಿತ್ತು.

ಇಬ್ಬರನ್ನೂ ಪಕ್ಷದಿಂದ ಉಚ್ಛಾಟಿಸುವ ನಿರ್ಣಯಕ್ಕೆ ಕಮ್ಯುನಿಸ್ಟ್ ಪಕ್ಷದ 7 ಸದಸ್ಯರ ಕೇಂದ್ರ ಸಮಿತಿ ಗುರುವಾರ ಅನುಮೋದನೆ ನೀಡಿದೆ. ಎರಡೂ ಪ್ರಕರಣಗಳನ್ನೂ ಮಿಲಿಟರಿ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News