×
Ad

ನೇಪಾಳ ಪ್ರವಾಹ | ಮೃತರ ಸಂಖ್ಯೆ 129ಕ್ಕೆ ಏರಿಕೆ

Update: 2024-09-29 21:06 IST

ನೇಪಾಳದ ಕಠ್ಮಂಡುವಿನಲ್ಲಿ ಭಾರೀ ಮಳೆಯ ನಂತರ ಪ್ರವಾಹ ಪೀಡಿತ ಪ್ರದೇಶ,  ಭಾನುವಾರ, ಸೆಪ್ಟೆಂಬರ್. 29, 2024. PC : PTI

ಕಠ್ಮಂಡು : ಶುಕ್ರವಾರದಿಂದ ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭೀಕರ ಪ್ರವಾಹದ ಸುಳಿಗೆ ಸಿಲುಕಿರುವ ನೇಪಾಳದಲ್ಲಿ ಸಾವಿನ ಸಂಖ್ಯೆ 129ಕ್ಕೆ ಏರಿದ್ದು 64 ಮಂದಿ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ರವಿವಾರ ವರದಿ ಮಾಡಿದ್ದಾರೆ.

ಹಲವು ನದಿಗಳ ನೀರು ಉಕ್ಕಿ ಹರಿಯುತ್ತಿದ್ದು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಬಾಗ್ಮತಿ ನದಿಯ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಲವೆಡೆ ಭೂಕುಸಿತ ಸಂಭವಿಸಿ 8 ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ತಡೆಯುಂಟಾಗಿದೆ. ಪ್ರಯಾಣಿಕರಿದ್ದ ಎರಡು ಬಸ್ಸುಗಳು ಭೂಕುಸಿತಕ್ಕೆ ಸಿಲುಕಿದೆ.

ಶನಿವಾರ ಬೆಳಗ್ಗಿನವರೆಗಿನ 24 ಗಂಟೆ ಅವಧಿಯಲ್ಲಿ ರಾಜಧಾನಿ ಕಠ್ಮಂಡುವಿನಲ್ಲಿ 240 ಮಿ.ಮೀ ಮಳೆಯಾಗಿದ್ದು ಇದು 1970ರ ಬಳಿಕದ ದಾಖಲೆಯಾಗಿದೆ. ರವಿವಾರ ಬೆಳಗ್ಗಿನವರೆಗಿನ 24 ಗಂಟೆ ಅವಧಿಯಲ್ಲಿ ಕಠ್ಮಂಡುವಿನ ಕೆಲವು ಭಾಗಗಳಲ್ಲಿ 322 ಮಿ.ಮೀ ಮಳೆ ಸುರಿದು ಹೊಸ ದಾಖಲೆ ಬರೆದಿದೆ ಎಂದು `ಕಠ್ಮಂಡು ಪೋಸ್ಟ್' ವರದಿ ಮಾಡಿದೆ.

ರವಿವಾರ ಬೆಳಗ್ಗಿನವರೆಗೆ ಪ್ರವಾಹ, ಭೂಕುಸಿತಕ್ಕೆ ಸಿಲುಕಿ ಅತಂತ್ರರಾಗಿದ್ದ 3,300 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ಕನಿಷ್ಠ 64 ಮಂದಿ ನಾಪತ್ತೆಯಾಗಿರುವ ವರದಿಯಿದೆ. ಹೆಲಿಕಾಪ್ಟರ್, ತೆಪ್ಪ ಹಾಗೂ ಮೋಟಾರ್ ದೋಣಿಗಳ ಮೂಲಕ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗೆ 3000 ಭದ್ರತಾ ಸಿಬ್ಬಂದಿ ನೆರವಾಗುತ್ತಿದ್ದಾರೆ ಎಂದು ಪೊಲೀಸ್ ವಕ್ತಾರ ದಾನ್ ಬಹಾದ್ದೂರ್ ಕಾರ್ಕಿಯನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News